Advertisement

24 ಲಕ್ಷ ರೂ. ವ್ಯಯಿಸಿದರೂ ಸಮರ್ಪಕವಾಗಿಲ್ಲ ಕುಡಿಯುವ ನೀರಿನ ವ್ಯವಸ್ಥೆ

03:59 PM Jan 17, 2018 | Team Udayavani |

ಬೆಳ್ತಂಗಡಿ: ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ 24 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಕುಡಿಯುವ ನೀರು ಸರಬರಾಜಿನ ಕಾಮಗಾರಿಯೊಂದು ಪೋಲಾಗುತ್ತಿದೆ. ಬೆಳಾಲು ಪೇಟೆಯಿಂದ ಸುಮಾರು 5 ಕಿ.ಮೀ. ದೂರದಲ್ಲಿ ಹರಿಯುವ ನೇತ್ರಾವತಿ ನದಿಯಲ್ಲಿ ಟ್ಯಾಂಕ್‌, ಪಕ್ಕದಲ್ಲಿ ಪಂಪ್‌ ಹೌಸ್‌ ನಿರ್ಮಿಸಲಾಗಿದೆ. ಕೂಡಿಗೆಗೆ ಹೋಗುವ ದಾರಿಯೇ ದುರ್ಗಮವಾಗಿದ್ದು, ಗುಡ್ಡ, ದಿನ್ನೆಯಂತಿರುವ ರಸ್ತೆಯಲ್ಲಿ ಸಾಗಬೇಕು. ಕಲ್ಲು, ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಸಾಗಿದಾಗ ಕೂಡಿಗೆ ನದಿ ಕಾಣಿಸುತ್ತದೆ. ಅಣೆಕಟ್ಟಿನಿಂದಾಗಿ ತುಂಬಿದ ನದಿ ನೀರು ಸಾಕಷ್ಟು ಆಸರಿಕೆ ನೀಗುವ, ಮರಗಿಡಗಳಿಗೆ ಆಸರೆಯಾಗುವ ಭರವಸೆ ನೀಡುತ್ತದೆ.

Advertisement

ಪೂರ್ಣಗೊಂಡ ಕಾಮಗಾರಿ
ಕೆಲವು ವರ್ಷಗಳ ಹಿಂದೆ ಈ ನದಿ ನೀರನ್ನು ಶುದ್ಧಗೊಳಿಸಿ ಗ್ರಾಮದ ಜನತೆಗೆ ಕುಡಿಯಲು ನೀರು ಕೊಡಬೇಕೆಂದು ಯೋಜನೆ ಸಿದ್ಧವಾಯಿತು. ಅಂತೆಯೇ ಜಿ.ಪಂ.ನಿಂದ 24 ಲಕ್ಷ ರೂ. ಮಂಜೂರಾಯಿತು. ನದಿಯಲ್ಲಿಯೇ ಟ್ಯಾಂಕಿ ರಚನೆ
ಯಾಯಿತು. ನೀರಿನ ಸಂಗ್ರಹಕ್ಕೂ ಅನುಕೂಲ. ಪಕ್ಕದಲ್ಲಿಯೇ ಪಂಪ್‌ ಹೌಸ್‌ ನಿರ್ಮಾಣ ನಡೆಯಿತು. ಸುಮಾರು 2 ಕಿ.ಮೀ. ದೂರದಲ್ಲಿ ನೀರಿನ ಬೃಹತ್ತಾದ ಟ್ಯಾಂಕಿ ರಚನೆಯಾಯಿತು. ನಿರೀಕ್ಷೆಯಂತೆಯೇ ಕಾಮಗಾರಿ ಪೂರ್ಣಗೊಂಡಿತು. ಲೋಕಾರ್ಪಣೆ ನಡೆದಾಗ ಜನತೆಯೂ ಖುಷಿಪಟ್ಟರು. ಇನ್ನು ನಮ್ಮ ಊರಿನ ನೀರಿನ ಬವಣೆ ನೀಗಿತೆಂದು ಸಂತಸದಲ್ಲಿ ತೇಲಾಡಿದರು. ಆದರೆ ಆದದ್ದೇ ಬೇರೆ. 

ಶಾಲೆ, ಮನೆಗಳಿವೆ
1 ಸರಕಾರಿ ಶಾಲೆ, 2 ಅಂಗನವಾಡಿಗಳು, 70ಕ್ಕೂ ಅಧಿಕ ಮನೆಗಳು ಈ ಟ್ಯಾಂಕ್‌ನ ಆಸುಪಾಸಿನಲ್ಲಿವೆ. ಸಮರ್ಪಕವಾಗಿ ನದಿ ನೀರು ಸಂಗ್ರಹಿಸಿದರೆ ಗ್ರಾಮದ ಅರ್ಧ ಭಾಗಕ್ಕೆ ಸರಬರಾಜು ಮಾಡಬಹುದು. ಆದರೆ ವ್ಯವಸ್ಥೆಯ ದೌರ್ಬಲ್ಯದಿಂದಾಗಿ ಸರಕಾರಿ ಕಾಮಗಾರಿಯೊಂದು ಪೋಲಾಗುತ್ತಿದೆ. ಸುರಿದ 24 ಲಕ್ಷ ರೂ. ವ್ಯರ್ಥವಾಗುತ್ತಿದೆ.
ಬೇಸಗೆ ಬಂದರೆ ನೀರಿನ ಬವಣೆಗೆ ಪರಿಹಾರ ಹುಡುಕುವಂತಾಗಿದೆ. ಈಚೆಗೆ ಇದರ ದುರಸ್ತಿಗೆ ಯತ್ನಿಸಿದಾಗ ಟ್ಯಾಂಕಿಯೇ ಕುಸಿಯುವ ಆತಂಕ ಎದುರಾಯಿತು. ಸ್ಥಳೀಯಾಡಳಿತ ಹೇಳಿದಂತೆ, ಊರವರಿಗೆ ಬೇಕಾದಂತೆ ಕಾಮಗಾರಿ ಮಾಡದ ಕಾರಣ ಕಾಮಗಾರಿ ವ್ಯರ್ಥವಾಗಿದೆ. ಗುತ್ತಿಗೆದಾರರನ್ನು ಊರ ಜನ, ಜನಪ್ರತಿನಿಧಿಗಳು ದೂರುತ್ತಿದ್ದಾರೆ.

ಸೂಕ್ತ ವ್ಯವಸ್ಥೆ ಮಾಡಲಿ
ಸರಕಾರಿ ಕಾಮಗಾರಿ ನಿರರ್ಥಕವಾಗುತ್ತಿದ್ದು, ಪಂ. ಗಮನಹರಿಸಲಿ. ನದಿಯಲ್ಲಿರುವ ಟ್ಯಾಂಕಿಗೆ ಫಿಲ್ಟರ್‌ ಅಳವಡಿಸಲಿ. ತ್ಯಾಜ್ಯ ಸೇರದಂತೆ ಮಾಡಲಿ ಸರಿಯಾದ ಪೈಪ್‌ಲೈನ್‌ ವ್ಯವಸ್ಥೆ ಮೂಲಕ ದೂರದ ಟ್ಯಾಂಕಿಗೆ ನೀರು ಹರಿವಂತೆ ಮಾಡಿ ಎಲ್ಲರಿಗೂ ಕುಡಿಯುವ ಶುದ್ಧ ನೀರು ದೊರೆಯುವಂತಾಗಲಿ ಎಂದು ಗ್ರಾಮಸ್ಥರು ಆಶಿಸಿದ್ದಾರೆ.

ಅವ್ಯವಸ್ಥಿತ ಕಾಮಗಾರಿ
ನೀರು ಸಂಗ್ರಹಿಸಲು ಸುಲಭ ಎಂದು ನದಿಯಲ್ಲೇ ಹೊಂಡ ತೋಡಿ ಟ್ಯಾಂಕ್‌ ರಚಿಸಿ ಕಾಮಗಾರಿ ನಡೆಸಿದ್ದೇನೋ ಹೌದು. ಆದರೆ ನದಿ ನೀರನ್ನು ಶುದ್ಧಗೊಳಿಸಲು ಫಿಲ್ಟರ್‌ ವ್ಯವಸ್ಥೆಯೇ ಇರಲಿಲ್ಲ. ನದಿ ನೀರು ನೇರಾನೇರ ಟ್ಯಾಂಕಿಗೆ ತುಂಬುತ್ತಿದೆ. ಪರಿಣಾಮ ನದಿಯಲ್ಲಿ ತೇಲಿ ಬರುವ ಕಶ್ಮಲಗಳು, ಕಸ-ಕಡ್ಡಿಗಳು, ಕೊಳೆತ ಹೆಣ, ಪ್ರಾಣಿ-ಮನುಷ್ಯರ ತ್ಯಾಜ್ಯ, ಮೀನು, ಕೊಳಚೆ ನೀರು ಇವೆಲ್ಲ ಟ್ಯಾಂಕಿಯ ಒಡಲು ಸೇರುತ್ತಿವೆ. ಕೊಳೆತ ಹೆಣವೊಂದು ಟ್ಯಾಂಕ್‌ ಬದಿಯಲ್ಲಿ ಪತ್ತೆಯಾಗಿತ್ತು. ಟ್ಯಾಂಕಿಯಲ್ಲಿ ಕಸಕಡ್ಡಿ ತ್ಯಾಜ್ಯ ಇದ್ದ ಕಾರಣ ಟ್ಯಾಂಕಿಯ ಬುಡದಲ್ಲಿ ಯಾರೋ ಈಚೆಗೆ ದೊಡ್ಡ ರಂಧ್ರ ಮಾಡಿದ್ದಾರೆ. ಮಳೆಗಾಲದಲ್ಲೇನೋ ನೀರು ಇದರ ಮೂಲಕ ಟ್ಯಾಂಕಿ ಸೇರಬಹುದು. ಆದರೆ ನದಿಯಲ್ಲಿ ನೀರಿನ ಮಟ್ಟ ಇಳಿದಾಗ ಟ್ಯಾಂಕ್‌ನಲ್ಲಿ ಸಂಗ್ರಹವಾದ ನೀರು ಅಚಾನಕ್ಕಾಗಿ ತಡೆಯಿಲ್ಲದೇ ನದಿಯೊಡಲು ಸೇರುತ್ತಿದೆ. ತಳವಿಲ್ಲದ ಮಡಕೆಯಲ್ಲಿ ನೀರು ಸಂಗ್ರಹಿಸುವಂತಾಗುತ್ತಿದೆ.

Advertisement

ಈ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಸರಕಾರಿ ಕಾಮಗಾರಿ ವ್ಯರ್ಥವಾಗದಂತೆ, ಜನರಿಗೆ ಉಪಯೋಗವಾಗುವಂತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
ಸಿ.ಆರ್‌. ನರೇಂದ್ರ, ಸಹಾಯಕ
ಕಾರ್ಯನಿರ್ವಾಹಕ ಎಂಜಿನಿಯರ್‌

 ಸಣ್ಣ ಪೈಪ್‌ ಹಾಕಿದ ಕಾರಣ ನೀರಿನ ರಭಸಕ್ಕೆ ಪೈಪ್‌ ಒಡೆದು ಹಾನಿಯಾಗಿತ್ತು. ಪಂ. ಸಭೆಯಲ್ಲಿ ಚರ್ಚೆಯಾಗಿದೆ. ಆದರೆ ಅಷ್ಟು ಹಣ ನಮ್ಮಲ್ಲಿಲ್ಲ. ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು.
ದಯಾನಂದ್‌ ಪಿ.,
ಬೆಳಾಲು ಗ್ರಾ.ಪಂ. ಸದಸ್ಯರು

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next