ಚಿಂಚೋಳಿ: ಕೃಷಿ ಉತ್ಪನ್ನ ಮಾರುಕಟ್ಟೆಯ 2017-18ನೇ ಸಾಲಿನಲ್ಲಿ ಮಾರುಕಟ್ಟೆ ಶುಲ್ಕ 7 ಲಕ್ಷ ರೂ. ಗುರಿ ನೀಡಲಾಗಿದೆ. ಈಗಾಗಲೇ ವರ್ತಕರಿಂದ 2 ಲಕ್ಷ ರೂ. ವಸೂಲಿ ಮಾಡಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಮಹಾದೇವಿ ಪಾಟೀಲ ಹೇಳಿದರು. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಅಧ್ಯಕ್ಷ ಚಂದ್ರಶೇಖರಯ್ಯ ಸ್ವಾಮಿ ಕಂಬದ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ 2016-17ನೇ ಸಾಲಿನಲ್ಲಿ 7 ಲಕ್ಷ ರೂ. ಗುರಿ ನೀಡಲಾಗಿತ್ತು. ಅದರಲ್ಲಿ 5.42 ಲಕ್ಷ ರೂ. ವಸೂಲಿ ಮಾಡಿ. ಶೇ. 77ರಷ್ಟು ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು. ತಾಲೂಕಿನ ರೈತರಿಗೆ ಅನುಕೂಲವಾಗಲು ಹಾಗೂ ವರ್ತಕರು ಹೆಸರು ಖರೀದಿಸಲು ವಾರದಲ್ಲಿ ಸೋಮವಾರ ಮತ್ತು ಬುಧವಾರ ಬಹಿರಂಗ ಹರಾಜು(ಬೀಟ)ನಡೆಸಿದರೆ ಉತ್ತಮ. ಹೊರಗಿನ ವ್ಯಾಪಾರಿ ಮತ್ತು ದಲ್ಲಾಳಿಗಳು ಬಂದು ಹೆಸರು, ಉದ್ದು ಖರೀದಿಸುತ್ತಾರೆ. ಇದರಿಂದ ಸ್ವಲ್ಪಮಟ್ಟಿಗೆ ಖರ್ಚು ಕಡಿಮೆ ಆಗಲಿದೆ. ಎಲ್ಲ ವರ್ತಕರು ಒಪ್ಪಿಗೆ ನೀಡಿದರೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಹೆಸರು ವಹಿವಾಟಿನ ಉದ್ಘಾಟನೆಯಾಗಲಿದೆ ಎಂದು ಅಧ್ಯಕ್ಷ ಚಂದ್ರಶೇಖರಯ್ಯ ಸ್ವಾಮಿ ಕಂಬದ ಹೇಳಿದರು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ವ್ಯಾಪಾರಿಗಳು ಸರಿಯಾಗಿ ತೆರಿಗೆ ನೀಡುವುದಿಲ್ಲ. 36 ವರ್ತಕರಿದ್ದಾರೆ. ಅವರಿಗೆ ತಿಳಿಸಿದರೂ ಗಮನ ಹರಿಸುತ್ತಿಲ್ಲ. ಎಲ್ಲ ವ್ಯಾಪಾರಿಗಳು ತಮ್ಮ ವ್ಯಾಪಾರಿ ಕೇಂದ್ರಗಳಲ್ಲಿಯೇ ವ್ಯಾಪಾರ ವಹಿವಾಟು ನಡೆಸಬೇಕು.ಪಟ್ಟಣದಲ್ಲಿ ಕೆಲವು ವ್ಯಾಪಾರಿಗಳು ಪರವಾನಿಗೆ ಇಲ್ಲದೇ ಹೆಸರು, ಉದ್ದು ,ತೊಗರಿ ಖರೀದಿಸುತ್ತಾರೆ. ಅಂತಹವರ ಅಂಗಡಿಗಳಿಗೆ ಬೀಗ ಹಾಕಬೇಕು ಎಂದು ಉಪಾಧ್ಯಕ್ಷ ರೇವಣಸಿದ್ದಪ್ಪ ಪೂಜಾರಿ ಕಾರ್ಯದರ್ಶಿಗಳಿಗೆ ಸೂಚಿಸಿದರು. ಎಪಿಎಂಸಿ ಪ್ರಾಂಗಣದಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪಗಳಿಲ್ಲ ಎಂದು ಸಭೆಯಲ್ಲಿದ್ದ ವ್ಯಾಪಾರಸ್ಥರು ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ದೇಶಕ ಮಧ್ವಚಾರ್ಯ ಕುಲಕರ್ಣಿ ಅವರಿಗೆ ತಿಳಿಸಿದರು. ಇನ್ನೆರಡು ದಿನಗಳಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗುವುದು ಎಂದು ಕಾರ್ಯದರ್ಶಿ ಮಹಾದೇವಿ ಪಾಟೀಲ ಭರವಸೆ ನೀಡಿದರು. ನಿರ್ದೇಶಕರಾದ ಅಣ್ಣಾರಾವ ಪೆದ್ದಿ, ಖಾಖಾಸಾಬ, ಗುಂಡಪ್ಪ ಸರಡಗಿ, ಚಂದ್ರು ಚಂಗು, ಅಶೋಕ ಐನಾಪುರ, ಸೋಮನಾಥರೆಡ್ಡಿ ಜಟ್ಟೂರ, ಜರಣಪ್ಪ ಚಿಕ್ಕನಿಂಗದಳ್ಳಿ, ಈಶ್ವರ ಸುಂಕದ, ಓಂಪ್ರಕಾಶ ಗುಜರಾತಿ ಇದ್ದರು.