Advertisement

ಗ್ರಾಮ ಪಂಚಾಯಿತಿಗಳಲ್ಲಿ 1200 ಕೋಟಿ ರೂ. ತೆರಿಗೆ ಬಾಕಿ

06:00 AM Jul 27, 2018 | Team Udayavani |

ಬೆಂಗಳೂರು: ತೆರಿಗೆ ವಸೂಲಿ ಮಾಡಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ಅವಕಾಶಗಳನ್ನು ಗ್ರಾಮ ಪಂಚಾಯಿತಿಗಳು ಕೈ ಚೆಲ್ಲುತ್ತಿರುವುದರಿಂದ ಕೋಟ್ಯಂತರ ರೂ. ತೆರಿಗೆ ಬಾಕಿ ಉಳಿದಿದೆ.

Advertisement

ಇದರಿಂದ ಸಂಪನ್ಮೂಲ ಕ್ರೋಢೀಕರಣದಲ್ಲಿ ಖೋತಾ ಆಗುತ್ತಿದ್ದು, ಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಮಾಹಿತಿ ಪ್ರಕಾರ 2017-18ರಲ್ಲಿ ಹಿಂದಿನ ಬಾಕಿ ಸೇರಿ ಒಟ್ಟು 1,800
ಕೋಟಿ ರೂ. ತೆರಿಗೆ ಬೇಡಿಕೆ ಇತ್ತು. ಆದರೆ, ಅದರಲ್ಲಿ ವಸೂಲಾಗಿದ್ದು 600 ಕೋಟಿ ರೂ., ಬಾಕಿ ಉಳಿದಿರುವುದು 1,200 ಕೋಟಿ ರೂ. ಕಳೆದ 5 ವರ್ಷಗಳ ಸ್ಥಿತಿಯೂ ಇದೇ ಆಗಿದೆ.

2014-15ರಿಂದ 2017-18ನೇ ಸಾಲಿನವರೆಗೆ ವಾರ್ಷಿಕ ಗುರಿ ಅಥವಾ ಬೇಡಿಕೆಗೆ ಪ್ರತಿಯಾಗಿ ವಸೂಲಾತಿ ಆಗಿರುವುದು ಶೇ.20ರಿಂದ 30ರಷ್ಟು ಮಾತ್ರ.

ತೆರಿಗೆ ವಸೂಲಾತಿಯಲ್ಲಿ ಹಿನ್ನಡೆ, ದೊಡ್ಡ ಮೊತ್ತದಲ್ಲಿ ತೆರಿಗೆ ಬಾಕಿ ಇರುವ ಬಗ್ಗೆ ಹತ್ತಾರು ಆದೇಶಗಳು, ನೂರಾರು ಸುತ್ತೋಲೆಗಳನ್ನು ಹೊರಡಿಸಿರುವ ಗ್ರಾಮೀಣಾಭಿವೃದ್ಧಿ ಇಲಾಖೆ, ಕಾಲಕಾಲಕ್ಕೆ ಗ್ರಾಪಂಗಳಿಗೆ ನಿರ್ದೇಶನ ನೀಡುತ್ತಲೇ ಇದೆ. ಆದರೆ, ಇದಕ್ಕೆ ಗ್ರಾಪಂಗಳು ಸ್ಪಂದಿಸುತ್ತಿಲ್ಲ. ಹೀಗಾಗಿ, ಗ್ರಾಮೀಣಾಭಿವೃದ್ಧಿ ಇಲಾಖೆ, ಗ್ರಾಪಂಗಳ ತೆರಿಗೆ ವಸೂಲಾತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ಜಿಲ್ಲಾ ಪಂಚಾಯಿತಿಗಳ ಸಿಇಓಗಳಿಗೆ ತಾಕೀತು ಮಾಡಿದೆ.

ಗ್ರಾಪಂಗಳ ವ್ಯಾಪ್ತಿಗೆ ಬರುವ ಕಟ್ಟಡಗಳು ಮತ್ತು ಭೂಮಿಯ ಮೇಲೆ ಸ್ವತ್ತಿನ ಬಂಡವಾಳ ಮೌಲ್ಯದ ಆಧಾರದ ಮೇಲೆ ತೆರಿಗೆ ವಿಧಿಸಲು ಅವಕಾಶವಿದೆ. ಅದರಂತೆ, ವಾಸದ ಕಟ್ಟಡ, ವಾಣಿಜ್ಯ ಕಟ್ಟಡಗಳು, ಕೈಗಾರಿಕೆಗಳು, ಖಾಲಿ ಜಮೀನು, ಕುಡಿಯಲು ಮತ್ತು ಇತರ ಉದ್ದೇಶಗಳಿಗೆ ನೀರು ಪೂರೈಕೆ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಅದೇ ರೀತಿ ಕಾರ್ಖಾನೆಗಳು, ಐಟಿ ಪಾರ್ಕ್‌ಗಳು, ವಿದ್ಯುತ್‌ ಸ್ಥಾವರಗಳು, ಮೊಬೈಲ್‌ ಟವರ್‌, ವಿಶೇಷ ಕೈಗಾರಿಕಾ ವಲಯ (ಎಸ್‌ಇಜೆಡ್‌), ಖಾಸಗಿ ಶಿಕ್ಷಣ ಸಂಸ್ಥೆಗಳು, ವಿಮಾನ ನಿಲ್ದಾಣಗಳು, ಮನರಂಜನೆ, ಆಪ್ಟಿಕಲ್‌ ಫೈಬರ್‌ ಕೇಬಲ್‌ ಅಳವಡಿಕೆ, ವಾಹನ ನಿಲುಗಡೆ, ಪಶುಗಳ ನೋಂದಣಿಗೆ ತೆರಿಗೆ ಮತ್ತು ಶುಲ್ಕ ವಿಧಿಸಿಲು ಪಂಚಾಯಿತಿಗಳಿಗೆ ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ.

Advertisement

ಚುನಾಯಿತ ಪ್ರತಿನಿಧಿಗಳ ಪಾತ್ರ ಮುಖ್ಯ: ಗ್ರಾಪಂಗಳು ಸ್ವಂತ ಆದಾಯ ಸಂಗ್ರಹಿಸಿ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂಬುದು ಸರ್ಕಾರದ ಆಶಯ. ಈ ಬಗ್ಗೆ ಆಗಾಗ ಗ್ರಾಪಂಗಳಿಗೆ ನಿರ್ದೇಶನ ನೀಡಲಾಗುತ್ತಿರುತ್ತದೆ. ಇದರ ಜತೆಗೆ ತೆರಿಗೆ ಸಂಗ್ರಹದಲ್ಲಿ ಚುನಾಯಿತ ಪ್ರತಿನಿಧಿಗಳ ಪಾತ್ರ ಪ್ರಮುಖವಾಗಿದೆ. ಹಾಗಾಗಿ ಅವರು ತಮ್ಮ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿ ಕಾರ್ಯಕ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಮತ್ತು ಕರ ವಸೂಲಿ ಸಿಬ್ಬಂದಿಗೆ ಸೂಕ್ತ ನೆರವು ನೀಡಬೇಕು.

ಇದಲ್ಲದೇ ಗ್ರಾಪಂಗಳು ತೆರಿಗೆ ವಿಧಿಸುವ,ಪರಿಷ್ಕರಿಸುವ ಹಾಗೂ ವಸೂಲಾತಿ ಬಗ್ಗೆ ಮೇಲ್ವಿಚಾರಣೆ ಮಾಡಲು ಮತ್ತು ಪ್ರತಿ ತಿಂಗಳು
ಪರಿಶೀಲನೆ ನಡೆಸಲು ಜಿ.ಪಂ. ಸಿಇಓಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಎಸ್‌ಇಜೆಡ್‌, ಮೊಬೈಲ್‌ ಟವರ್‌ ತೆರಿಗೆಯೂ ಅಷ್ಟಕ್ಕಷ್ಟೇ
ರಾಜ್ಯದ 6,024 ಗ್ರಾಪಂಗಳಲ್ಲಿ 10,672 ಮೊಬೈಲ್‌ ಟವರ್‌ಗಳಿದ್ದು 7 ಸಾವಿರ ಮೊಬೈಲ್‌ ಟವರ್‌ಗಳಿಗೆ ತೆರಿಗೆ ವಿಧಿಸಿಲ್ಲ. 1,700 ವಿಂಡ್‌ ಮಿಲ್‌ಗ‌ಳ ಪೈಕಿ 1,300, 3,000 ಓಎಫ್ಸಿ ಕೇಬಲ್‌ಗ‌ಳ ಪೈಕಿ 1,800 ಓಎಫ್ಸಿ ಕೇಬಲ್‌ಗ‌ಳಿಗೆ, 6 ಸಾವಿರ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ 3,700, 11 ವಿಮಾನ ನಿಲ್ದಾಣಗಳ ಪೈಕಿ 7 ಹಾಗೂ 251 ವಿಶೇಷ ಕೈಗಾರಿಕಾ ವಲಯ (ಎಸ್‌ಇಜೆಡ್‌)ಗಳ ಪೈಕಿ 130 ಎಸ್‌ಇಜೆಡ್‌ಗಳಿಗೆ ಗ್ರಾಪಂಗಳು ವಾರ್ಷಿಕ ತೆರಿಗೆ ವಿಧಿಸಿಲ್ಲ ಎಂದು ಇಲಾಖೆಯ ಅಂಕಿ-ಅಂಶಗಳು ಹೇಳುತ್ತವೆ.

ಅಧಿಕಾರಿಗಳಿಗೆ ವಿಷಯದ ಗಾಂಭೀರ್ಯತೆ ಬಗ್ಗೆ ಮನವರಿಕೆ ಮಾಡಿ ಕೊಟ್ಟಿದ್ದೇನೆ. ತೆರಿಗೆ ವಸೂಲಾತಿ ಚುರುಕುಗೊಳಿಸಲು
ಕ್ರಮ ಕೈಗೊಳ್ಳಲಾಗುವುದು.
– ಎಲ್‌.ಕೆ. ಅತೀಕ್‌, ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next