Advertisement

ಕೊಲೆ, ದರೋಡೆಗೆ ಜೈಲಲ್ಲೇ ಪ್ಲಾನ್‌: ಮಂಗಳೂರಿನ ರೌಡಿ ಶೀಟರ್‌ಗಳ ಕರೆಸಿ ಕೊಲೆಗೆ ಸಂಚು!

09:35 AM Feb 25, 2021 | Team Udayavani |

ಬೆಂಗಳೂರು: ದರೋಡೆ, ಸುಲಿಗೆ, ಡಕಾಯಿತಿ ಹಾಗೂ ಎದುರಾಳಿ ತಂಡದ ರೌಡಿಗಳ ಹತ್ಯೆಗಾಗಿ ಮಂಗಳೂರಿನಿಂದ ಬಂದಿದ್ದ ಇಬ್ಬರು ರೌಡಿಶೀಟರ್‌ ಸೇರಿ 20 ಮಂದಿಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.

Advertisement

ಈ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯ ಹಾರಿಜಾನ್‌ ರಸ್ತೆಯಲ್ಲಿ ಎರಡು ಕಾರುಗಳಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಕಾಡುಬೀಸನಹಳ್ಳಿ ಸೋಮ ಮತ್ತು ಆತನ ಸಹಚರರನ್ನು ಕೊಲೆಗೆ ಸಂಚು ರೂಪಿಸಿದ್ದ ರೌಡಿ ರೋಹಿತ್‌ನ 11 ಸಹಚರರನ್ನು ಬಂಧಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಿರಣ್‌ ಗೌಡ(30), ವಿಶ್ವನಾಥ ಭಂಡಾರಿ (32), ಆನೇಕಲ್‌ನ ಹರೀಶ್‌ (27), ವೆಂಕಟೇಶ್‌ (27), ಸತೀಶ್‌ (27), ಹೇಮಂತ್‌ (28), ಗಣೇಶ್‌ (27), ವಿನೋದ್‌ (28), ಕಿರಣ್‌ ಕುಮಾರ್‌ (27) ಮತ್ತು ಅಣ್ಣಮಲೈ (29) ಬಂಧಿತರು. ಅವರಿಂದ 18 ಮಾರಕಾಸ್ತ್ರಗಳು ಮತ್ತು ಎರಡು ಕಾರುಗಳ ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ಮಾರತ್ತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮನಗೂಳಿ ಗ್ರಾಮದಲ್ಲಿ ಮತ್ತೆ ಭೂಕಂಪನದ ಅನುಭವ ? ಮನೆಯಿಂದ ಹೊರಬಂದ ಜನರಿಂದ ಜಾಗರಣೆ

ಆರೋಪಿಗಳ ಪೈಕಿ ಕಿರಣ್‌ ಗೌಡ ಮತ್ತು ವಿಶ್ವನಾಥ್‌ ಭಂಡಾರಿ ಮಂಗಳೂರು ಮೂಲದ ರೌಡಿಶೀಟರ್‌ ಗಳಾಗಿದ್ದಾರೆ. ಅವರನ್ನು ಕಾಡು ಬೀಸನಹಳ್ಳಿ ನಿವಾಸಿ, ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ರೌಡಿಶೀಟರ್‌ ರೋಹಿತ್‌, ತನ್ನ ಏರಿಯಾದಲ್ಲಿ ಹಿಡಿತ ಸಾಧಿಸಲು ಎದುರಾಳಿ ತಂಡದ ಸೋಮ ಮತ್ತು ಆತನ ಸಹಚರರನ್ನು ಹತ್ಯೆಗಾಗಿ 20 ದಿನಗಳ ಹಿಂದೆಯೇ ಕರೆಯಿಸಿಕೊಂಡಿದ್ದು, ಕರಿಯಮ್ಮನ ಅಗ್ರಹಾರದಲ್ಲಿ ಇರಿಸಿದ್ದ. ಸೋಮ ಮತ್ತು ಆತನ ಚಲನವಲನಗಳ ಮೇಲೆ ನಿಗಾವಹಿಸಿ ಕೊಲೆಗೆ ಸಂಚು ರೂಪಿಸಿದ್ದರು. ಈ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

ಮಂಗಳೂರಿನಲ್ಲೂ ಕೇಸು: ಕಿರಣ್‌ ಗೌಡ ವಿರುದ್ಧ ಮಂಗಳೂರು ಉತ್ತರ ಪೊಲೀಸ್‌ ಠಾಣೆಯ ರೌಡಿಶೀಟರ್‌ ಆಗಿದ್ದಾನೆ. ವಿಶ್ವನಾಥ್‌ ಭಂಡಾರಿ ವಿರುದ್ಧ ಮಂಗಳೂರಿನ ಉಲ್ಲಾಳ ಪೊಲೀಸ್‌ ಠಾಣೆ ರೌಡಿ ಶೀಟರ್‌ ಆಗಿದ್ದು, ಇಬ್ಬರು ಮಂಗಳೂರು ಮೂಲದ ರೌಡಿಯೊಬ್ಬನ ಸಹಚರರಾಗಿದ್ದಾರೆ. ಇಬ್ಬರ ವಿರುದ್ಧ ಮಂಗಳೂರಿನ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಹಲ್ಲೆ ಸೇರಿ 12ಕ್ಕೂ ಅಧಿಕ ಪ್ರಕರಣಗಳು ಇವೆ. ರೌಡಿ ರೋಹಿತ್‌, ಮಂಗಳೂರು ಮೂಲದ ರೌಡಿ ಶೀಟರ್ ವೊಬ್ಬನಿಗೆ ಹಣ ಕೊಟ್ಟು ಈ ಇಬ್ಬರು ಆರೋಪಿಗಳನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:80 ಕೋಟಿ ರೂ. ಕರೆಂಟ್ ಬಿಲ್ ನೋಡಿ ಆಸ್ಪತ್ರೆ ಸೇರಿದ ವೃದ್ದ : ನಡೆದಿದ್ದು ಎಲ್ಲಿ ಗೊತ್ತಾ ?  

ಗಲಭೆಕೋರನಿಂದ ಪ್ಲಾನ್‌: 2020 ಆಗಸ್ಟ್‌ 11ರಂದು ನಡೆದ ಡಿ.ಜೆ. ಹಳ್ಳಿ ಗಲಭೆ ಪ್ರಕರಣದಲ್ಲಿ ಜೈಲಿನಲ್ಲಿರುವ ರೌಡಿಶೀಟರ್‌ ಜಲಾಲ್‌ನಿಂದ ಇಬ್ಬರ ಹತ್ಯೆಗೆ ಸುಪಾರಿ ಪಡೆದುಕೊಂಡಿದ್ದ ರೌಡಿಶೀಟರ್‌ ಸೇರಿ ಐವರನ್ನು ಸಿಸಿಬಿ ಪೊಲೀ ಸರು ಬಂಧಿಸಿದ್ದಾರೆ. ಡಿ.ಜೆ. ಹಳ್ಳಿಯ ರೌಡಿಶೀಟರ್‌ ಮಜರ್‌ ಖಾನ್‌ (38), ಯೋಗೇಶ್‌ (38), ರಿಜ್ವಾನ್‌ (26), ಸಮಿತ್‌ (28) ಮತ್ತು ಪುನಿತ್‌ (30) ಬಂಧಿತರು. ಅವರಿಂದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಡಿ.ಜೆ.ಹಳ್ಳಿಯ ರೌಡಿಶೀಟರ್‌ ಆಗಿರುವ ಮಜರ್‌ಖಾನ್‌ ವಿರುದ್ಧ ಎರಡು ಕೊಲೆ, 2 ಕೊಲೆ ಯತ್ನ, 2 ಹಲ್ಲೆ, 6 ಕಳ್ಳಭಟ್ಟಿ, ಒಂದು ದರೋಡೆ, ದರೋಡೆ ಯತ್ನ ಸೇರಿ 13 ಪ್ರಕರಣಗಳು ಇವೆ. ಸುಮಿತ್‌ ಅಲಿಯಾಸ್‌ ರಾಹುಲ್‌ ವಿರುದ್ಧ ಉಡುಪಿಯ ಮಂಚಕಲ್‌ ಠಾಣೆಯಲ್ಲಿ ದರೋಡೆ ಯತ್ನ ಪ್ರಕರಣ ದಾಖಲಾಗಿದೆ.

ಡಿ.ಜೆ. ಹಳ್ಳಿ ಗಲಭೆ ಪ್ರಕರದಲ್ಲಿ ಜೈಲಿನಲ್ಲಿರುವ ಜಲಾಲ್‌, ತನ್ನ ಸ್ನೇಹಿತ ಲೋಕೇಶ್‌ ಎಂಬಾತನಿಗೆ ತೊಂದರೆ ಕೊಡುತ್ತಿರುವ ಇಬ್ಬರ ಹತ್ಯೆಗೈಯುವಂತೆ ಮಜರ್‌ ಖಾನ್‌ಗೆ ಸುಪಾರಿ ಕೊಟ್ಟಿದ್ದಾನೆ. ಅದರಂತೆ ಆರೋಪಿ ತನ್ನ ಸಹಚರರ ಜತೆ ಸೇರಿಕೊಂಡು ಡಿ.ಜೆ. ಹಳ್ಳಿಯ ಮೋದಿ ಗಾರ್ಡನ್‌ ಸಮೀಪದ ಮಡ್‌ ರಸ್ತೆಯಲ್ಲಿ ಹತ್ಯೆಗೆ ಸಂಚು ರೂಪಿಸಿದ್ದರು. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ದೇವರ ಜೀವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next