ಬೆಂಗಳೂರು: ಪೊಲೀಸರು ಹಾಗೂ ಕೋರ್ಟ್ ಎಚ್ಚರಿಕೆ ನಡುವೆಯೂ ಪದೇ ಪದೆ ಅಪರಾಧ ಚಟುವಟಿಕೆಗಳಲ್ಲಿ ತೊಡಗುತ್ತಿದ್ದ ಕುಖ್ಯಾತ ರೌಡಿ ಶೀಟರ್ ಚೇತನ್ ಕುಮಾರ್ ಅಲಿಯಾಸ್ ಚಿಕ್ಕಚೇತು(28) ಎಂಬಾತನನ್ನು ಗೂಂಡಾ ಕಾಯ್ದೆಯಡಿ ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
2012ನೇ ಸಾಲಿನಿಂದ ಶ್ರೀರಾಮಪುರ, ಮಾಗಡಿ, ಪೀಣ್ಯ, ವಿಜಯನಗರ, ಚಂದ್ರಾಲೇಔಟ್, ಅನ್ನ ಪೂರ್ಣೇಶ್ವರಿನಗರ, ಬಾಗಲಗುಂಟೆ ಸೇರಿ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆ ಗಳಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಕೊಲೆ, ಸುಲಿಗೆ, ಡಕಾಯಿತಿ, ದರೋಡೆಗೆ ಸಂಚು, ಕೊಲೆಗೆ ಯತ್ನ, ಜೀವ ಬೆದರಿಕೆ, ಹಲ್ಲೆ ಸೇರಿ 10 ಪ್ರಕರಣಗಳು ದಾಖಲಾಗಿವೆ.
ಈತನ ವಿರುದ್ಧ ಬಾಗಲಗುಂಟೆ, ಚಂದ್ರಾಲೇಔಟ್, ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲಾಗಿದೆ. ಕಳೆದ ಮಾರ್ಚ್‌ನಲ್ಲಿ ಸೋಲದೇವನಹಳ್ಳಿ ಠಾಣೆ ಪೊಲೀಸರು ಆರೋಪಿ ಚೇತನ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಆಸ್ತಿಗಾಗಿ ತಮ್ಮನನ್ನು ಕೊಲೆಗೈದು ಮಹಡಿಯಿಂದ ತಳ್ಳಿದ ಅಣ್ಣ: ಆರೋಪಿ ಬಂಧನ
ಆರೋಪಿಯು ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ಮತ್ತೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾನೆ. ಜಾಮೀನು ಷರತ್ತು ಉಲ್ಲಂಘಿಸಿ, ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ. ಹೀಗಾಗಿ ಆರೋಪಿಯನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಲು ಬಾಗಲೂರು ಠಾಣೆ ಪೊಲೀಸರು ನಗರ ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ವರದಿ ಮಾನ್ಯ ಮಾಡಿದ ಆಯುಕ್ತರು ಒಂದು ವರ್ಷಗಳ ಕಾಲ ಆರೋಪಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಲು ಸೂಚಿಸಿದ್ದಾರೆ.