Advertisement

ಕೊಡಚಾದ್ರಿ ಏರಲು ಕೊಲ್ಲೂರಿನಿಂದ ರೋಪ್‌ವೇ ; ನಡೆಯುತ್ತಿದೆ ಸಿದ್ಧತೆ  ; ಕರಾವಳಿಗೆ ಪ್ರಥಮ

02:39 AM Jun 24, 2020 | Hari Prasad |

ಕೊಲ್ಲೂರು: ಕೊಲ್ಲೂರಿನಿಂದ ಕೊಡಚಾದ್ರಿ ಬೆಟ್ಟಕ್ಕೆ ಸುಲಭ ಸಂಪರ್ಕ ಕಲ್ಪಿಸುವ ಮಹತ್ವಾ ಕಾಂಕ್ಷಿ ರೋಪ್‌ವೇ ಯೋಜನೆ ಜಾರಿಗೆ ಸಿದ್ಧತೆ ನಡೆಯುತ್ತಿದೆ.

Advertisement

ಇದು ಅನುಷ್ಠಾನಗೊಂಡರೆ ಬೈಂದೂರು, ಕುಂದಾಪುರ ತಾಲೂಕುಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಉಂಟಾಗಲಿದೆ.

ಕರಾವಳಿ ಪ್ರದೇಶದ ಮೊದಲ ರೋಪ್‌ವೇ ಎಂಬ ಹೆಗ್ಗಳಿಕೆಯೂ ಇದಕ್ಕೆ ಸಿಗಲಿದೆ. ಕೊಲ್ಲೂರು ದೇಗುಲಕ್ಕೆ ದಿನವೂ ಯಾತ್ರಾರ್ಥಿ ಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಬಹುಪಾಲು ಮಂದಿ ಕೊಡಚಾದ್ರಿ ಸರ್ವಜ್ಞ ಪೀಠಕ್ಕೆ ತೆರಳುವ ಹರಕೆ ಹೊತ್ತವರು.

ಸಂಸದ ಬಿ.ವೈ. ರಾಘವೇಂದ್ರ ಈ ರೋಪ್‌ವೇ ಯೋಜನೆ ಜಾರಿಗೆ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಕೊಡಚಾದ್ರಿ ವಿಶೇಷ ಧಾರ್ಮಿಕ ಪ್ರಾಮುಖ್ಯ ಹೊಂದಿದೆ. ಹಾದಿ ದುರ್ಗಮವಾಗಿದ್ದು, ಜೀಪ್‌ಗ್ಳಲ್ಲಿ ಅಥವಾ ಕಾಲ್ನಡಿಗೆಯಲ್ಲಿ ಏರಿ ನಿಸರ್ಗ ಸೌಂದರ್ಯ ಆಸ್ವಾದಿಸುತ್ತಾರೆ.

ಸಾವಿರಾರು ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಪಬ್ಲಿಕ್‌ ಪ್ರೈವೇಟ್‌ ಪಾರ್ಟನರ್‌ ಶಿಪ್‌ (ಪಿಪಿಪಿ) ಮೂಲಕ ಅನುಷ್ಠಾನಕ್ಕೆ ತರಲು ಸಾಧ್ಯವಿದೆ. ಇದರಿಂದ ಸರಕಾರಕ್ಕೆ ಹೊರೆ ಕಡಿಮೆಯಾಗಲಿದೆ ಬಂಡವಾಳ ಹೂಡಲು ಈಗಾಗಲೇ ಕೆಲವು ಖಾಸಗಿ ಕಂಪೆನಿಗಳು ಮುಂದೆ ಬಂದಿವೆ.

Advertisement

ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ರೋಪ್‌ ವೇ ನಿರ್ಮಾಣಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ವರುಷಗಳ ಕನಸನ್ನು ನನಸಾಗಿಸುವಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನವು ಯಶಸ್ವಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪರಿಸರಕ್ಕೆ ಹಾನಿಯಿಲ್ಲ
ಕೊಡಚಾದ್ರಿಗೆ ರಸ್ತೆ ನಿರ್ಮಿಸಲು ತಾಂತ್ರಿಕ ಅಡಚಣೆಗಳು ಎದುರಾಗುವುದರಿಂದ ಬದಲಿ ಮಾರ್ಗ ಕಂಡುಕೊಳ್ಳುವುದು ಅನಿವಾರ್ಯ. ರೋಪ್‌ ವೇಯಿಂದ ಅರಣ್ಯ ನಾಶ, ಪ್ರಾಣಿ ಪಕ್ಷಿಗಳಿಗೆ ಹಾನಿ ಇಲ್ಲ. ಜಮ್ಮು-ಕಾಶ್ಮೀರದ ಪ್ರಸಿದ್ಧ ವೈಷ್ಣೋದೇವಿ ಸನ್ನಿಧಿಗೆ ಈಗಾಗಲೇ ರೋಪ್‌ವೇ ನಿರ್ಮಿಸಲಾಗಿದೆ. ಅದೇ ಮಾದರಿಯಲ್ಲಿ ಕೊಡಚಾದ್ರಿಗೂ ನಿರ್ಮಾಣವಾದರೆ ಪ್ರವಾಸೋದ್ಯಮ ಅಭಿವೃದ್ಧಿಯಾಗಿ ಉದ್ಯೋಗಾವಕಾಶಗಳೂ ಹೆಚ್ಚಲಿವೆ. ಕೊಲ್ಲೂರು ಬಳಿ ಕೊಡಚಾದ್ರಿ ಬೆಟ್ಟದ ತಪ್ಪಲಿನಿಂದ ರೋಪ್‌ವೇಯ ಆರಂಭ ಸ್ಥಾನ ಇರಲಿದ್ದು, ಅಲ್ಲಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಪ್ರವಾಸೋದ್ಯಮಕ್ಕೆ ಒತ್ತು
ರೋಪ್‌ವೇ ನಿರ್ಮಾಣದಿಂದ ಜಗದ್ಗುರು ಶ್ರೀ ಶಂಕರಾಚಾರ್ಯರ ತಪೋಭೂಮಿ ಕೊಡಚಾದ್ರಿಗೆ ತೆರಳಲು ಈಗಿರುವ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಅನೇಕ ಮಂದಿಗೆ ಉದ್ಯೋಗಾವಕಾಶ, ಪ್ರವಾಸೋದ್ಯಮ ಅಭಿವೃದ್ಧಿ ಆಗಲಿದೆ. ಪ್ರಕೃತಿಗೆ ಹಾನಿಯಾಗದಂತೆ ನೂತನ ತಂತ್ರಜ್ಞಾನ ಅಳವಡಿಸಿ ರೋಪ್‌ವೇ ನಿರ್ಮಿಸಲು ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳೊಡನೆ ಮಾತುಕತೆ ನಡೆಯುತ್ತಿದೆ.
– ಬಿ.ವೈ. ರಾಘವೇಂದ್ರ, ಸಂಸದ


Advertisement

Udayavani is now on Telegram. Click here to join our channel and stay updated with the latest news.

Next