ಉತ್ತರಪ್ರದೇಶ: ಸ್ಲೀಪರ್ ಬಸ್ ಹಾಗೂ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಪೃತಪಟ್ಟು ಹತ್ತೊಂಬತ್ತು ಮಂದಿ ಗಾಯಗೊಂಡಿರುವ ಘಟನೆ ಕನ್ನೌಜ್ ಜಿಲ್ಲೆಯ ಔರೈಯಾ ಗಡಿಯ ಸಮೀಪ ಆಗ್ರಾ- ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ.
ನಲ್ವತ್ತು ಮಂದಿ ಪ್ರಯಾಣಿಸುತ್ತಿದ್ದ ಬಸ್ಸು ಲಕ್ನೋದಿಂದ ದೆಹಲಿಗೆ ಹೊರಟಿತ್ತು ಎಂದು ಹೇಳಲಾಗಿದ್ದು ಆಗ್ರಾ- ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ಯಾಂಕರ್ ಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ ಎಂದು ಹೇಳಲಾಗಿದ್ದು ಘಟನೆ ನಡೆದ ಕೂಡಲೇ ಪೊಲೀಸರು ಮತ್ತು ತುರ್ತು ತಂಡಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸೈಫಾಯಿ ವೈದ್ಯಕೀಯ ಕಾಲೇಜಿಗೆ ಸಾಗಿಸಿದರು.
ಘಟನಾ ಸ್ಥಳಕ್ಕೆ ಡಿಎಂ, ಎಸ್‌ಪಿ ಸೇರಿದಂತೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಅಲ್ಲದೆ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಜಲಸಂಪನ್ಮೂಲ ಸಚಿವ ಸ್ವತಂತ್ರ ದೇವ್ ಸಿಂಗ್ ಅವರು ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.