ಸಿಡ್ನಿ: ಐಸಿಸಿ ಟಿ20 ವಿಶ್ವಕಪ್ ನಲ್ಲಿ ಭಾರತದ ವಿಜಯಯಾತ್ರೆ ಮುಂದುವರಿದಿದೆ. ಕಳೆದ ರವಿವಾರ ಪಾಕಿಸ್ಥಾನ ವಿರುದ್ಧ ರೋಚಕವಾಗಿ ಗೆದ್ದ ಟೀಂ ಇಂಡಿಯಾ ಇಂದು ಸಿಡ್ನಿಯಲ್ಲಿ ನೆದರ್ಲ್ಯಾಂಡ್ ವಿರುದ್ಧ ಸುಲಭವಾಗಿ ಗೆದ್ದಿದೆ.
ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಎರಡು ವಿಕೆಟ್ ನಷ್ಟಕ್ಕೆ 179 ರನ್ ಮಾಡಿದರೆ ನೆದರ್ಲ್ಯಾಂಡ್ ತಂಡ 9 ವಿಕೆಟ್ ಕಳೆದುಕೊಂಡು 123 ರನ್ ಮಾತ್ರ ಗಳಿಸಿತು. ಭಾರತ ತಂಡ 56 ರನ್ ಅಂತರದ ಗೆಲುವು ಸಾಧಿಸಿತು.
ಕಳೆದ ಕೆಲವು ಪಂದ್ಯದಲ್ಲಿ ಫಾರ್ಮ್ ನಲ್ಲಿರದ ನಾಯಕ ರೋಹಿತ್ ಶರ್ಮಾ ಇಂದು ಅರ್ಧ ಶತಕ ಬಾರಿಸಿದರು. 39 ಎಸೆತ ಎದುರಿಸಿದ ರೋಹಿತ್ 53 ರನ್ ಗಳಿಸಿದರು. ಇದೇ ವೇಳೆ ರೋಹಿತ್ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ ಹೊಡೆದರು.
ಇದನ್ನೂ ಓದಿ:ಧೋನಿ ನಿರ್ಮಾಣದ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಇವರೇ ನಾಯಕ – ನಾಯಕಿ
ಈ ಇನ್ನಿಂಗ್ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಈ ಮೊದಲು ಯವರಾಜ್ ಸಿಂಗ್ ಹೆಸರಲ್ಲಿದ್ದ ದಾಖಲೆಯೊಂದನ್ನು ಮುರಿದರು. ನೆದರ್ಲ್ಯಾಂಡ್ಸ್ ವಿರುದ್ಧದ ಇನ್ನಿಂಗ್ಸ್‌ನ ಮೂರನೇ ಸಿಕ್ಸರ್‌ನೊಂದಿಗೆ, ರೋಹಿತ್ ಟಿ20 ವಿಶ್ವಕಪ್ ಇತಿಹಾಸದಲ್ಲಿ ತಮ್ಮ ಸಿಕ್ಸರ್‌ಗಳ ಸಂಖ್ಯೆಯನ್ನು 34 ಕ್ಕೆ ಹೆಚ್ಚಿಸಿಕೊಂಡರು. ಅವರು ಯುವರಾಜ್ ಸಿಂಗ್ ಅವರ ಹಿಂದಿನ 33 ಸಿಕ್ಸರ್‌ಗಳ ದಾಖಲೆಯನ್ನು ಮುರಿದರು. ಈ ಮೂಲಕ ಟಿ20 ವಿಶ್ವಕಪ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಎಂಬ ಗರಿಮೆಗೆ ಪಾತ್ರರಾದರು.