Advertisement

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

11:14 PM Dec 18, 2024 | Team Udayavani |

ಸಾಮಾನ್ಯವಾಗಿ ಕ್ರಿಕೆಟಿಗರು ತಮ್ಮ ವಿದಾಯದ ಬಗ್ಗೆ ಮೊದಲೇ ಸೂಚನೆ ಅಥವಾ ಹೇಳಿಕೆ ನೀಡುತ್ತಾರೆ. ಆದರೆ ವಿಶ್ವದರ್ಜೆಯ ಹಾಗೂ ಭಾರತದ 2ನೇ ಸರ್ವಶ್ರೇಷ್ಠ ಬೌಲರ್‌ ಅಶ್ವಿ‌ನ್‌ ವಿಷಯದಲ್ಲಿ ಸಂಭವಿಸಿದ್ದೆಲ್ಲ ಅಚ್ಚರಿ ಹಾಗೂ ಅನುಮಾನಗಳೇ. ದೂರದ ಆಸ್ಟ್ರೇಲಿಯದಲ್ಲಿ, ಅದೂ ಟೆಸ್ಟ್‌ ಸರಣಿ ನಡೆಯುತ್ತಿರುವಾಗಲೇ ಪತ್ರಿಕಾಗೋಷ್ಠಿ ಕರೆದು ನಿವೃತ್ತಿ ಘೋಷಿಸುವ ದರ್ದು ಏನಿತ್ತು ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆ.

Advertisement

ತವರಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಭಾರತ 0-3 ವೈಟ್‌ವಾಶ್‌ ಅನುಭವಿಸಿದಾಗಲೇ ಅಶ್ವಿ‌ನ್‌ ಮನದಲ್ಲಿ ನಿವೃತ್ತಿಯ ಯೋಚನೆ ಸುಳಿದಿತ್ತು. ಆಸ್ಟ್ರೇಲಿಯ ಪ್ರವಾಸದಲ್ಲಿ ತನಗೆ ಆಡುವ ಬಳಗದಲ್ಲಿ ಸ್ಥಾನ ಸಿಗುವುದು ಖಚಿತವಿಲ್ಲ ಎಂದಾದರೆ ತನ್ನನ್ನು ಆಯ್ಕೆ ಮಾಡುವ ಅಗತ್ಯವೇ ಇಲ್ಲ ಎಂಬುದಾಗಿ ಅಶ್ವಿ‌ನ್‌ ಆಯ್ಕೆಗಾರರಿಗೆ ಮೊದಲೇ ತಿಳಿಸಿದ್ದಾಗಿ ಸುದ್ದಿಯಾಗಿದೆ.

ಪರ್ತ್‌ನಲ್ಲಿ ವಾಷಿಂಗ್ಟನ್‌ ಸುಂದರ್‌ ಅವರನ್ನು ಆಡಿಸಲಾಯಿತು. ಬಳಿಕ ಅಡಿಲೇಡ್‌ನ‌ಲ್ಲಿ ಅಶ್ವಿ‌ನ್‌ಗೆ ಅವಕಾಶ ನೀಡಲಾಯಿತು. ಬ್ರಿಸ್ಬೇನ್‌ನಲ್ಲಿ ಈ ಜಾಗದಲ್ಲಿ ರವೀಂದ್ರ ಜಡೇಜ ಬಂದರು. ಇದರಿಂದ ಅಶ್ವಿ‌ನ್‌ ಮಾನಸಿಕ ಕಿರಿಕಿರಿ ಅನುಭವಿಸಿರಬಹುದೇ ಎಂಬುದೊಂದು ಪ್ರಶ್ನೆ. ಜತೆಗೆ ತಂಡದಲ್ಲೇನೋ ರಾಜಕೀಯ, ಭಿನ್ನಾಭಿಪ್ರಾಯ ಇದೆ ಎಂಬ ಸಂಶಯವೂ ಕಾಡುತ್ತದೆ.

ಇಲ್ಲಿ ಇನ್ನೊಂದು ಸಾಧ್ಯತೆಯೂ ಇದೆ. ಭಾರತ ತನ್ನ ಮುಂದಿನ ಟೆಸ್ಟ್‌ ಸರಣಿ ಆಡುವುದು 2025ರ ಜೂನ್‌ನಲ್ಲಿ, ಇಂಗ್ಲೆಂಡ್‌ ವಿರುದ್ಧ, ಅವರದೇ ನಾಡಿನಲ್ಲಿ. ತವರಿನ ಸರಣಿ ನಡೆಯುವುದು ವರ್ಷಾಂತ್ಯದಲ್ಲಿ. ಆಗ ಅಶ್ವಿ‌ನ್‌ಗೆ 39 ವರ್ಷ ಆಗಿರುತ್ತದೆ. ಆಗ ತನ್ನನ್ನು ಪರಿಗಣಿಸುವ ಸಾಧ್ಯತೆ ಕಡಿಮೆ ಎಂದು ಯೋಚಿಸಿರಲೂಬಹುದು.

ಅಂದು ಧೋನಿ, ಇಂದು ಅಶ್ವಿ‌ನ್‌
ಭಾರತದ ಯಶಸ್ವಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಮತ್ತು ಅಶ್ವಿ‌ನ್‌ ನಿವೃತ್ತಿಯಲ್ಲಿ ಸಾಮ್ಯತೆ ಕಂಡುಬರುತ್ತದೆ. ಸರಿಯಾಗಿ 10 ವರ್ಷಗಳ ಹಿಂದೆ (2014) “ಬೋರ್ಡರ್‌-ಗಾವಸ್ಕರ್‌ ಟ್ರೋಫಿ’ ಸರಣಿಯ ನಡುವಲ್ಲೇ, 3ನೇ ಟೆಸ್ಟ್‌ ಬಳಿಕ ಧೋನಿ ದಿಢೀರ್‌ ನಿವೃತ್ತಿ ಘೋಷಿಸಿದ್ದರು. ಆಗ 4 ಪಂದ್ಯಗಳ ಸರಣಿಯಲ್ಲಿ ಭಾರತ 0-2 ಹಿನ್ನಡೆಯಲ್ಲಿತ್ತು.

Advertisement

ಅಶ್ವಿ‌ನ್‌ ಟೆಸ್ಟ್‌ ದಾಖಲೆಗಳು…
 537 ವಿಕೆಟ್‌
ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಪರ 2ನೇ ಅತೀ ಹೆಚ್ಚು ವಿಕೆಟ್‌ ಉರುಳಿಸಿದ ಸಾಧನೆ (537). ದಾಖಲೆ ಅನಿಲ್‌ ಕುಂಬ್ಳೆ ಹೆಸರಲ್ಲಿದೆ (619). ವಿಶ್ವದ ಬೌಲಿಂಗ್‌ ಸಾಧಕರ ಯಾದಿಯಲ್ಲಿ 7ನೇ ಸ್ಥಾನ.

 37 ಸಲ 5 ಪ್ಲಸ್‌ ವಿಕೆಟ್‌
ಟೆಸ್ಟ್‌ ಪಂದ್ಯದ ಇನ್ನಿಂಗ್ಸ್‌ ಒಂದರಲ್ಲಿ 37 ಸಲ 5 ಪ್ಲಸ್‌ ವಿಕೆಟ್‌ ಉರುಳಿಸಿ ಶೇನ್‌ ವಾರ್ನ್ ಅವ ರೊಂದಿಗೆ ಜಂಟಿ 2ನೇ ಸ್ಥಾನ. ಅಗ್ರಸ್ಥಾನ ದಲ್ಲಿರು ವವರು ಮುತ್ತಯ್ಯ ಮುರಳೀಧರನ್‌ (67).

 ಎಡಗೈ ಬ್ಯಾಟರ್‌ಗಳಿಗೆ ದುಃಸ್ವಪ್ನ
ಟೆಸ್ಟ್‌ ಇತಿಹಾಸದಲ್ಲಿ ಅತೀ ಹೆಚ್ಚು ಎಡಗೈ ಬ್ಯಾಟರ್‌ಗಳ ವಿಕೆಟ್‌ ಉರುಳಿಸಿದ ಸಾಹಸಿ (268). ಇವರಿಗೆ ಅತೀ ಹೆಚ್ಚು ಸಲ ಬಲಿಯಾದ ಎಡಗೈ ಆಟಗಾರ ಬೆನ್‌ ಸ್ಟೋಕ್ಸ್‌ (13).

 ತವರಲ್ಲಿ 65 ಟೆಸ್ಟ್‌
ತವರಲ್ಲಿ ನಡೆದ ಎಲ್ಲ 65 ಟೆಸ್ಟ್‌ಗಳಲ್ಲಿ ಆಡಿದ ಹಿರಿಮೆ. ಈ ಸಾಧನೆಯಲ್ಲಿ 2ನೇ ಸ್ಥಾನ. ತವರಿನ ಎಲ್ಲ 83 ಪಂದ್ಯಗಳನ್ನು ಆಡಿರುವ ಅಲಸ್ಟೇರ್‌ ಕುಕ್‌ ಅಗ್ರಸ್ಥಾನಿಯಾಗಿದ್ದಾರೆ.

ಸೆಂಚುರಿ ಮತ್ತು 5 ವಿಕೆಟ್‌
4 ಸಲ ಶತಕ ಬಾರಿಸುವ ಜತೆಯಲ್ಲೇ 5 ಪ್ಲಸ್‌ ವಿಕೆಟ್‌ ಹಾರಿಸಿದ ಆಲ್‌ರೌಂಡರ್‌. ಇಲ್ಲಿ ಇಯಾನ್‌ ಬೋಥಂ ಅವರಿಗೆ ಮೊದಲ ಸ್ಥಾನ (5). ಅಶ್ವಿ‌ನ್‌ 2 ಸಲ ಒಂದೇ ಅಂಗಳದಲ್ಲಿ (ಚೆನ್ನೈ) ಈ ಸಾಧನೆಗೈದ ವಿಶ್ವದ ಏಕೈಕ ಕ್ರಿಕೆಟಿಗ.

ತವರಲ್ಲಿ 383 ವಿಕೆಟ್‌
ತವರಲ್ಲಿ ಅತೀ ಹೆಚ್ಚು ವಿಕೆಟ್‌ ಉಡಾಯಿಸಿದ ಬೌಲರ್‌ಗಳ ಯಾದಿಯಲ್ಲಿ 4ನೇ ಸ್ಥಾನ (383 ವಿಕೆಟ್‌). ಮುರಳೀಧರನ್‌ (493), ಆ್ಯಂಡರ್ಸನ್‌ (438) ಮತ್ತು ಸ್ಟುವರ್ಟ್‌ ಬ್ರಾಡ್‌ (398) ಮೊದಲ 3 ಸ್ಥಾನದಲ್ಲಿದ್ದಾರೆ.

ನ್ಯೂ ಬಾಲ್‌ ವಿಕೆಟ್‌
ಇನ್ನಿಂಗ್ಸ್‌ನ ಮೊದಲ 20 ಓವರ್‌ಗಳಲ್ಲಿ ಅತ್ಯಧಿಕ 133 ವಿಕೆಟ್‌ ಉರುಳಿಸಿದ ಸ್ಪಿನ್‌ ಬೌಲರ್‌ ಎಂಬ ದಾಖಲೆ. ಈ ವಿಕೆಟ್‌ಗಳನ್ನು ಅವರು ಹೊಸ ಚೆಂಡಿನಲ್ಲೇ ಉರುಳಿಸಿದ್ದಾರೆ.

ಆಲ್‌ರೌಂಡ್‌ ಸಾಹಸ
3 ಸಾವಿರ ರನ್‌ ಹಾಗೂ 500 ವಿಕೆಟ್‌ ಸಂಪಾದಿಸಿದ ಕೇವಲ 3ನೇ ಆಲ್‌ರೌಂಡರ್‌. ಶೇನ್‌ ವಾರ್ನ್ ಮತ್ತು ಸ್ಟುವರ್ಟ್‌ ಬ್ರಾಡ್‌ ಉಳಿದಿಬ್ಬರು.

ಸರಣಿಶ್ರೇಷ್ಠ ಗೌರವ
11 ಸಲ ಸರಣಿಶ್ರೇಷ್ಠ ಗೌರವ. ಮುರಳೀಧರನ್‌ ಅವರೊಂದಿಗೆ ಜಂಟಿ ಅಗ್ರಸ್ಥಾನ.

Advertisement

Udayavani is now on Telegram. Click here to join our channel and stay updated with the latest news.

Next