ಮುಂಬೈ: 17ನೇ ಸೀಸನ್ ನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೊನೆಯ ಹಂತದಲ್ಲಿದೆ. ಇನ್ನೆರಡು ವಾರಗಳಲ್ಲಿ ಐಪಿಎಲ್ ಮುಗಿಯಲಿದೆ. ಅದಾದ ಬಳಿಕ ಅಂದರೆ ಜೂನ್ 1ರಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ಟಿ20 ವಿಶ್ವಕಪ್ ಗೆ ಭಾರತ ತಂಡ ಈಗಾಗಲೇ ಪ್ರಕಟವಾಗಿದ್ದು, ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.
ಟಿ20 ವಿಶ್ವಕಪ್ ಬಳಿಕ ನಾಯಕ ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಟಿ20ಗೆ ವಿದಾಯ ಹೇಳಲಿದ್ದಾರೆ ಎನ್ನುತ್ತಿದೆ ವರದಿ.
ರೋಹಿತ್ ಶರ್ಮಾ ಅವರು ಭಾರತದ ಪರ 151 ಪಂದ್ಯಗಳನ್ನು ಆಡಿದ್ದಾರೆ. 31.8ರ ಸರಾಸರಿಯಲ್ಲಿ 3974 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅವರು ಐದು ಶತಕ ಮತ್ತು 29 ಅರ್ಧಶತಕ ಗಳಿಸಿದ್ದಾರೆ.
ದೈನಿಕ್ ಜಾಗರಣ್ ವರದಿಯ ಪ್ರಕಾರ, ರೋಹಿತ್ ಶರ್ಮಾ ಅವರು ಚುಟುಕು ಸ್ವರೂಪಕ್ಕೆ ವಿದಾಯ ಹೇಳಬಹುದು, ಇದೇ ಕಾರಣದಿಂದ ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಹಾರ್ದಿಕ್ ಭಾರತದ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯಲು ಅವರ ಪ್ರದರ್ಶನದ ಕಾರಣವಲ್ಲ, ಬದಲಾಗಿ ಅವರನ್ನು ಭಾರತದ ಭವಿಷ್ಯದ ಟಿ20 ನಾಯಕನಾಗಿ ಬಿಸಿಸಿಐ ನೋಡುತ್ತಿದೆ. ಹೀಗಾಗಿ ಅವರನ್ನು ಟಿ20 ವಿಶ್ವಕಪ್ ಗೆ ಆಯ್ಕೆ ಮಾಡಿ ಉಪನಾಯಕನನ್ನಾಗಿ ನೇಮಿಸಲಾಗಿದೆ.