Advertisement

ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಜತೆಗೆ ಬರಲಿದೆ ರೋಬೋಟ್‌!

02:21 PM Jun 08, 2022 | Team Udayavani |

ಬೆಂಗಳೂರು: ನೀವು ಏರಲಿರುವ ವಿಮಾನ ಎಷ್ಟೊತ್ತಿಗೆ ಹೊರಡಲಿದೆ? ಅಷ್ಟು ದೊಡ್ಡ ಟರ್ಮಿನಲ್‌ನಲ್ಲಿ ನೀವು ಪ್ರಯಾಣ ಬೆಳೆಸಲಿರುವ ವಿಮಾನ ಎಲ್ಲಿ ನಿಂತಿದೆ? ಅಲ್ಲಿಗೆ ಹೋಗುವುದಾದರೂ ಹೇಗೆ? ನಿಲ್ದಾಣದಲ್ಲಿ ತಿಂಡಿ ಎಲ್ಲಿ ಸಿಗುತ್ತದೆ? ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್‌)ಕ್ಕೆ ಆಗಮಿಸುವ ಪ್ರಯಾಣಿಕರಿಗೆ ಇಂತಹ ಹಲವಾರು ಮಾಹಿತಿ ಗಳನ್ನು ಇನ್ಮುಂದೆ ರೋಬೋಟ್‌ಗಳೇ ನೀಡಲಿವೆ.

Advertisement

ಅಷ್ಟೇ ಅಲ್ಲ, ಟರ್ಮಿನಲ್‌ನಲ್ಲಿ ನೀವು ತೆರಳಬೇಕಾದ ಜಾಗಕ್ಕೆ ಸ್ವತಃ ಈ ರೋಬೋಟ್‌ಗಳು ನಿಮ್ಮನ್ನು ಕರೆದೊಯ್ದು ಬಿಡುತ್ತವೆ! ಹೌದು, ಪ್ರಯಾಣಿಕರ ಅನುಕೂಲಕ್ಕಾಗಿ ಕೃತಕ ಬುದ್ಧಿಮತ್ತೆ ಆಧಾರಿತ 10 ಹೈಟೆಕ್‌ ರೋಬೋಟ್‌ಗಳನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್‌) ಪರಿಚಯಿಸಿದ್ದು, ಇವು ಅಲ್ಲಿನ ಸಿಬ್ಬಂದಿಯಂತೆಯೇ ನಿಲ್ದಾಣದ ತುಂಬಾ ಓಡಾಡಿಕೊಂಡು ಬಂದು- ಹೋಗುವ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲಿವೆ. ದೇಶದ ವಿಮಾನ ನಿಲ್ದಾಣಗಳಲ್ಲಿ ಈ ರೀತಿಯ ತಂತ್ರಜ್ಞಾನಗಳನ್ನು ಪರಿಚಯಿಸುತ್ತಿರುವುದು ಇದೇ ಮೊದಲು ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಐಎಎಲ್‌, ಆರ್ಟಿಲಿಜೆಂಟ್‌ ಸಲ್ಯುಷನ್ಸ್‌ ಪ್ರೈ.ಲಿ., ಸಹಯೋಗದಲ್ಲಿ ರೋಬೋಟ್‌ಗಳನ್ನು ಅಳವಡಿಸಿದೆ. ಈ ಯಂತ್ರಗಳು ಪ್ರಯಾಣಿಕರಿಗೆ ಕನಿಷ್ಠ ಮಾಹಿತಿಗಳನ್ನು ಒದಗಿಸಲಿವೆ. ಉದಾಹರಣೆಗೆ ವಿಮಾನ ನಿರ್ಗಮನ- ಆಗಮನದ ಸಮಯ, ವಿಮಾನ ನಿಲುಗಡೆ ಸ್ಥಳ ಸೇರಿದಂತೆ ವಿವಿಧೆಡೆ ತೆರಳಲು ದಿಕ್ಕು ತೋರಿಸುವುದು, ಆಹಾರ ಮತ್ತು ಪಾನೀಯ ಮಾಹಿತಿಗಳನ್ನು ಒದಗಿಸಲಿದೆ. ಅಲ್ಲದೆ, ಈ ರೋಬೋಟ್‌ಗಳು ನೀವು ಬಯಸುವ ಸ್ಥಳಕ್ಕೆ ನಿಮ್ಮನ್ನು ಕರೆದೊಯ್ದು ಕೂಡ ಬಿಡಲಿವೆ.

ಸದ್ಯಕ್ಕೆ ಇಂಗ್ಲಿಷ್‌ನಲ್ಲಿ ಮಾರ್ಗದರ್ಶನ ಮಾಡುವ ಈ ಯಂತ್ರಗಳು, ಮುಂಬರುವ ದಿನಗಳಲ್ಲಿ ಕನ್ನಡದಲ್ಲೂ ನೀಡಲಿವೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಯಾಣಿಕ ದೃಷ್ಟಿಯನ್ನು ಇಟ್ಟುಕೊಂಡು ಪರಿಚಯಿಸಲಾದ ಈ ಸ್ಮಾರ್ಟ್‌ ರೋಬೋಟ್‌ಗಳು ಅಸಾಧಾರಣ ಸೇವೆಗಳನ್ನು ನೀಡಲಿವೆ. ಮುಂಬರುವ ದಿನಗಳಲ್ಲಿ ಪ್ರಯಾಣಿಕರಿಗೆ ಅಡತಡೆ ರಹಿತ ಸೇವೆಗೆ ಇದು ಟ್ರೆಂಡ್‌ಸೆಟರ್‌ ಆಗಲಿದೆ. –ಜಯರಾಜ್‌ ಷಣ್ಮುಗಂ, ಬಿಐಎಎಲ್‌ ಮುಖ್ಯ ಕಾರ್ಯಾಚರಣೆ ಅಧಿಕಾರಿ

Advertisement

ಜಾಗತಿಕ ಮಟ್ಟದಲ್ಲಿ ವಿಮಾನಯಾನ ಕ್ಷೇತ್ರ ದಲ್ಲಿ ಇದೊಂದು ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಲಿದೆ. ದೇಶದಲ್ಲಿ ವಿಮಾನ ನಿಲ್ದಾಣಗಳಲ್ಲಿ ರೋಬೋಟ್‌ಗಳ ಮೂಲಕ ಪ್ರಯಾಣಿಕರಿಗೆ ಸೇವೆ ನೀಡುತ್ತಿರುವ ಮೊದಲ ನಿಲ್ದಾಣ ಬೆಂಗಳೂರು ಏರ್‌ಪೋರ್ಟ್‌ ಆಗಿದೆ. -ರೂಪೇಶ್‌ ಸಾವಂತ್‌, ಆರ್ಟಿಲಿಜೆಂಟ್‌ ಸಲ್ಯುಷನ್ಸ್‌ ಪ್ರೈ.ಲಿ. ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next