Advertisement

ರಾಜಧಾನಿಯಲ್ಲಿ ರಾಬರಿ ಹಾವಳಿ

12:10 PM Dec 16, 2018 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ರಾಬರಿ ಹಾಗೂ ಸುಲಿಗೆ ಕೃತ್ಯಗಳಿಗೆ ಕಡಿವಾಣ ಇಲ್ಲದಂತಾಗಿದ್ದು, ಪ್ರತಿ ನಿತ್ಯ ನಗರದ ಒಂದಿಲ್ಲೊಂದು ಭಾಗದಲ್ಲಿ ದುಷ್ಕರ್ಮಿಗಳು ಸಾರ್ವಜನಿಕರನ್ನು ದೋಚುತ್ತಿದ್ದಾರೆ. ಇಂಥ ಕೃತ್ಯಗಳಿಗೆ ಹೊರವಲಯದ ರಸ್ತೆಗಳನ್ನೇ ಆಯ್ಕೆ ಮಾಡಿರುವ ದುಷ್ಕರ್ಮಿಗಳು, ತಡರಾತ್ರಿ ಒಂಟಿಯಾಗಿ ಬೈಕ್‌ನಲ್ಲಿ ಹೋಗುವ, ನಡೆದು ಹೋಗುವವರನ್ನು ಅಡ್ಡಗಟ್ಟಿ, ಬೆದರಿಸಿ ಸುಲಿಗೆ ಮಾಡುತ್ತಿದ್ದಾರೆ. ಮೆಟ್ರೋ ನಿಲ್ದಾಣಗಳ ಸಮೀಪವೂ ಇಂಥ ಸುಲಿಗೆ ಕೃತ್ಯಗಳು ನಡೆದಿವೆ.

Advertisement

ವರ್ಷದಿಂದ ವರ್ಷಕ್ಕೆ ಸುಲಿಗೆ ಪ್ರಕರಣಗಳು ಹೆಚ್ಚುತ್ತಲೇ ಇವೆ. 2016ರಲ್ಲಿ 147 ಸುಲಿಗೆ ಕೇಸುಗಳು ದಾಖಲಾಗಿದ್ದು, 2017ರಲ್ಲಿ 163 ಪ್ರಕರಣಗಳು ದಾಖಲಾಗಿವೆ. 2018ರಲ್ಲಿ ಈವರೆಗೆ 190ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ರಾಬರಿ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚುತ್ತಿದ್ದು, ಕಳೆದ ವರ್ಷ ಡಿಸೆಂಬರ್‌ ಅಂತ್ಯಕ್ಕೆ  636 ಕೇಸ್‌ಗಳು ದಾಖಲಾಗಿದ್ದರೆ, ಈ ಬಾರಿ ಇದುವರೆಗೆ 650ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಟೆಕ್ಕಿ ಕತ್ತಿಗೆ ಚಾಕು ಇಟ್ಟು ಚಿನ್ನ ಲೂಟಿ: ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್ವೇರ್‌ ಇಂಜಿನಿಯರ್‌ ಆಗಿರುವ ಯುವಕನನ್ನು ನಡುರಸ್ತೆಯಲ್ಲಿ ಅಡ್ಡಗಟ್ಟಿದ ಮೂವರು ದುಷ್ಕರ್ಮಿಗಳು, ಆತನ ಕತ್ತಿಗೆ ಚಾಕು ಇರಿಸಿ ಚಿನ್ನದ ಸರ, ಬೆಳ್ಳಿಯ ಬ್ರಾಸ್ಲೆಟ್‌ ಹಾಗೂ ಪರ್ಸ್‌ನಲ್ಲಿದ್ದ 400 ರೂ. ಕಿತ್ತುಕೊಂಡು ಹೋದ ಘಟನೆ ಎಚ್‌ಎಎಲ್‌ ಪೊಲೀಸ್‌ ಠಾಣೇ ವ್ಯಾಪ್ತಿಯಲ್ಲಿ ನಡೆದಿದೆ.

ಡಿ.13ರಂದು ಕೆಲಸ ಮುಗಿಸಿ ಸಂಜೆ 4.30ರ ಸುಮಾರಿಗೆ ಕುಂದನಹಳ್ಳಿ ಕೆರೆ ಸಮೀಪ ತಾವು ವಾಸವಿರುವ ಪಿ.ಜಿಯಹತ್ತ ನಡೆದು ಹೋಗುತ್ತಿದ್ದ ಚೆನ್ನೈ ಮೂಲದ ಟೆಕ್ಕಿ ಗುರುಶಂಕರ್‌ರನ್ನು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಬಳಿಕ ಅವರಲ್ಲಿ ಒಬ್ಬ ಚಾಕು ತೆಗೆದು ಗುರುಶಂಕರ್‌ ಕತ್ತಿಗೆ ಹಿಡಿದು, ಕಿರುಚಿಕೊಂಡರೆ ಇರಿಯುವುದಾಗಿ ಬೆದರಿಸಿದ್ದಾನೆ. ಇನ್ನಿಬ್ಬರು ಅವರ ಕತ್ತಿನಲ್ಲಿದ್ದ 16 ಗ್ರಾಂ. ಚಿನ್ನದ ಸರ ಹಾಗೂ ಕೈಯಲ್ಲಿದ್ದ ಬೆಳ್ಳಿಯ ಬ್ರಾಸ್ಲೆಟ್‌, 400 ರೂ. ನಗದು ಕೂಡ ಕಿತ್ತುಕೊಂಡು ಪರಾರಿಯಾಗಿದ್ದಾರೆ. 

ಘಟನೆಯ ಕುರಿತು “ಉದಯವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡ ಗುರುಶಂಕರ್‌, “ಹಾಡಹಗಲೇ ದುಷ್ಕರ್ಮಿಗಳು ನಡೆಸಿದ ಕೃತ್ಯ ಭಯ ಹುಟ್ಟಿಸಿತು. 20ರಿಂದ 25 ವಯೋಮಾನದ, ಹಿಂದಿ ಮಾತನಾಡುವ ಮೂವರು, ಕೇವಲ ಮೂರ್‍ನಾಲ್ಕು ನಿಮಿಷದಲ್ಲಿ ಕೃತ್ಯ ಎಸಗಿದರು. ಘಟನೆ ನಡೆದಾಗ ರಸ್ತೆಯಲ್ಲಿ ಯಾರೂ ಓಡಾಡುತ್ತಿರಲಿಲ್ಲ. ಇದೇ ಸಮಯಕ್ಕಾಗಿ ಅವರು ಹೊಂಚು ಹಾಕಿ ಕೃತ್ಯ ಎಸಗಿರಬಹುದು’ ಎಂದರು.

Advertisement

ಸಹಾಯಕ್ಕೆ ಅಂಗಲಾಚಿದರೂ ಸ್ಪಂದಿಸಲಿಲ್ಲ!: “ದುಷ್ಕರ್ಮಿಗಳು ನನ್ನನ್ನು ಬಿಟ್ಟ ತಕ್ಷಣ ಸಹಾಯಕ್ಕಾಗಿ ಕಿರುಚಿಕೊಂಡೆ, ಅದೇ ವೇಳೆ ಬಂದ ಬೈಕ್‌ ಸವಾರರರನ್ನು ಸಹಾಯ ಮಾಡಿ, ದುಷ್ಕರ್ಮಿಗಳನ್ನು ಬೆನ್ನಟ್ಟೋಣ ಎಂದು ಕೇಳಿಕೊಂಡೆ. ಆದರೆ ಸಹಾಯ ಸಿಗಲಿಲ್ಲ. ಕಡೆಗೆ ಆಟೋ ಚಾಲಕರೊಬ್ಬರು ನೆರವಾದರೂ, ಅಷ್ಟರಲ್ಲಾಗಲೇ ದುಷ್ಕರ್ಮಿಗಳು ಪರಾರಿಯಾಗಿದ್ದರು. ಬಳಿಕ ಪೊಲೀಸರಿಗೆ ದೂರು ನೀಡಿದೆ,’ ಎಂದು ಗುರುಶಂಕರ್‌ ಮಾಹಿತಿ ನೀಡಿದರು.

ದಾರಿಹೋಕನ ದೋಚಿದರು: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿ, ಚಿನ್ನದ ಸರ ದೋಚಿರುವ ಘಟನೆ ಹೆಣ್ಣೂರಿನಲ್ಲಿ ನಡೆದಿದೆ. ಈ ಕುರಿತು ಪ್ರಮೋದ್‌ ಪೀಟರ್‌ ಎಂಬುವವರು ನೀಡಿದ್ದಾರೆ. ಖಾಸಗಿ ಕಂಪನಿ ಉದ್ಯೋಗಿ ಪ್ರಮೋದ್‌, ಶುಕ್ರವಾರ ತಡರಾತ್ರಿ ಹೆಣ್ಣೂರು ಮುಖ್ಯ ರಸ್ತೆಯಲ್ಲಿ ನಡೆದು ಹೋಗುವಾಗ ಕಾರಿನಲ್ಲಿ ಬಂದು ಅಡ್ಡಗಟ್ಟಿದ ಮೂವರು ದುಷ್ಕರ್ಮಿಗಳು, ಮಾರಕಾಸ್ತ್ರ ತೋರಿಸಿ ಬೆದರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಹೊಸ ಬೀಟ್‌ ಪದ್ಧತಿ ಯಶಸ್ಸು ಮರೀಚಿಕೆ?: ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧಗಳ ಕಡಿವಾಣ ದೃಷ್ಟಿಯಿಂದ ಆಯಾ ಪೊಲೀಸ್‌ ಠಾಣೆಯ ಪ್ರತಿ ಸಿಬ್ಬಂದಿಗೆ ಜವಾಬ್ದಾರಿ ನೀಡುವ ಸಲುವಾಗಿ ಕಳೆದ ವರ್ಷ ಏಪ್ರಿಲ್‌ನಲ್ಲಿ ಜಾರಿಗೆ ಬಂದ ಹೊಸ ಬೀಟ್‌ ಪದ್ಧತಿ ಸಂಪೂರ್ಣ ಯಶಸ್ಸು ಕಂಡಿಲ್ಲ ಎಂದು ಹೇಳಲಾಗುತ್ತಿದೆ.

ಠಾಣೆಯ ಮುಖ ಪೇದೆ, ಪೇದೆಗಳಿಗೂ ನಿರ್ದಿಷ್ಟ ವ್ಯಾಪ್ತಿಯ ಪ್ರದೇಶದ ಜವಾಬ್ದಾರಿ ನೀಡೊದರೆ ಆ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳಿಗೆ ಕಡಿವಾಣ ಬೀಳಲಿದೆ ಎಂಬ ಉದ್ದೇಶ ಬೀಟ್‌ ಪದ್ಧತಿಯದ್ದಾಗಿತ್ತು. ಆದರೆ, ನಗರದಲ್ಲಿ ಹೆಚ್ಚಾಗಿರುವ ಸುಲಿಗೆ, ಸರಕಳ್ಳತನ, ರಾಬರಿ ಪ್ರಕರಣಗಳ ಅಂಕಿ-ಅಂಶ ಗಮನಿಸಿದರೆ, ಬೀಟ್‌ ಪದ್ಧತಿ ಯಶಸ್ಸು ಕಂಡಿಲ್ಲ ಎಂಬುದು ಕಂಡುಬರುತ್ತಿದೆ.

ಬೆಂಗಳೂರಂತಹ ಮಹಾನಗರದಲ್ಲಿ ಅಪರಾಧ ಕೃತ್ಯಗಳ ಸ್ವರೂಪ ಬದಲಾಗುತ್ತದೆ. ಆರೋಪಿಗಳು ಪದೇ ಪದೆ ಸ್ಥಳ ಬದಲಿಸುತ್ತಾರೆ. ಜತೆಗೆ, ಜನಸಂಖ್ಯೆಯೂ ಹೆಚ್ಚಿದೆ ಈ ಕಾರಣಕ್ಕೆ ಹೊಸ ಬೀಟ್‌ ಪದ್ಧತಿ ಸಂಪೂರ್ಣ ಯಶಸ್ವಿ ಆಗದೇ ಇರಬಹುದು ಎಂದು ಹೆಸರು ಹೇಳಲು ಬಯಸದ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಸುಲಿಗೆ ಅಂಕಿ-ಸಂಖ್ಯೆ
ವರ್ಷ    ಪ್ರಕರಣಗಳು

2016    147
2017    163
2018(ಈವರೆಗೆ)    190+

Advertisement

Udayavani is now on Telegram. Click here to join our channel and stay updated with the latest news.

Next