Advertisement
ಪಡುವನ್ನೂರು ಗ್ರಾಮ ಮತ್ತು ನೆಟ್ಟಣಿಗೆಮುಟ್ನೂರು ಗ್ರಾಮದಲ್ಲಿ ಹಾದು ಹೋಗುವ ಈಶ್ವರಮಂಗಲ-ಸುಳ್ಯಪದವು- ಪಿಲಿಪ್ಪುಡೆ ಜಿ.ಪಂ. ರಸ್ತೆಗೆ ಹೆಚ್ಚು ಹಾನಿಯಾಗಿದೆ. ಇದಕ್ಕೆ ಕಾರಣ ರಸ್ತೆ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದು. ಗೋಳಿತ್ತಡಿಯಲ್ಲಿ ಚರಂಡಿ, ಮೋರಿ ಇದ್ದರೂ ಸರಿಯಾದ ನಿರ್ವಹಣೆ ಇಲ್ಲದೆ ಮಳೆಯ ನೀರು ರಸ್ತೆಯ ಮೇಲೆ ಹೋಗುತ್ತಿದ್ದು, ಪಾದಚಾರಿಗಳು, ದ್ವಿಚಕ್ರ ಸವಾರರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಮೀನಾವು ಎನ್ನುವಲ್ಲಿ ಖಾಸಗಿ ಸ್ಥಳದಿಂದ ನೇರವಾಗಿ ನೀರು ರಸ್ತೆಗೆ ಬರುತ್ತಿದೆ. ಇಲ್ಲಿಯೇ ಸಮೀಪ ಚರಂಡಿಯಲ್ಲಿಯೇ ವಿದ್ಯುತ್ ಕಂಬ, ಕುಡಿಯುವ ನೀರಿನ ಕೊಳವೆಬಾವಿ, ವಿದ್ಯುತ್ ಶೆಡ್ ಇರುವುದರಿಂದ ಮಳೆಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಹೊಂಡ ಸೃಷ್ಟಿಯಾಗಿ ನೀರು ಸಂಗ್ರಹವಾಗುತ್ತಿದೆ.
ಚರಂಡಿಯಲ್ಲಿದೆ ಜಲ್ಲಿ ರಾಶಿ
ಕನ್ನಡ್ಕ ಶಬರಿನಗರ ಕಾಂಕ್ರಿಟ್ ರಸ್ತೆ ಕಾಮಗಾರಿ ಮೇ ತಿಂಗಳಲ್ಲಿ ಮುಗಿದಿದೆ. ರಸ್ತೆ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿ ಮಾಡದೇ ಇರುವುದರಿಂದ ಮಳೆಯ ನೀರು ರಸ್ತೆಯಲ್ಲಿ ನಿಲ್ಲುವುದರಿಂದ ವಾಹನಗಳಿಗೆ, ಪಾದಚಾರಿಗಳಿಗೆ ಕೆಸರಿನ ಮಜ್ಜನವಾಗುತ್ತಿದೆ. ಜಲ್ಲಿ ಮತ್ತು ಮರಳುಗಳನ್ನು ಚರಂಡಿಗಳಿಗೆ ಸುರಿದಿದ್ದು ಚರಂಡಿಯನ್ನು ಮುಚ್ಚಲಾಗಿದೆ. ಶಬರಿ ನಗರದಿಂದ ಸುಳ್ಯಪದವು-ಪಿಲಿಪ್ಪುಡೆ ಜಿ.ಪಂ. ರಸ್ತೆ ನೀರಿನ ಒರತೆ ಮತ್ತು ಕೆಂಪು ಕಲ್ಲು ಸಾಗಾಟದ ಲಾರಿಗಳು ಮಿತಿಗಿಂತ ಹೆಚ್ಚು ಕಲ್ಲು ಸಾಗಾಟ ಮಾಡುವುದರಿಂದ ರಸ್ತೆಗಳು ಹೊಂಡಗಳಾಗಿ ಪರಿವರ್ತನೆಯಾಗಿದೆ. ಪಾದಚಾರಿಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ ದಿನಾ ಕೆಸರಿನ ಸ್ನಾನ ಆಗುತ್ತಿದೆ. ಕೇರಳವನ್ನು ಸಂಪರ್ಕಿಸುವ ಸುಳ್ಯಪದವು-ದೇವಸ್ಯ ಜಿ.ಪಂ. ರಸ್ತೆ ಇಕ್ಕೆಲಗಳಲ್ಲಿರುವ ಚರಂಡಿ ಮುಚ್ಚಿ ಹೋಗಿ ಮಳೆಯ ನೀರು ನೆರೆಯಾಗಿ ಸಮೀಪದ ಮನೆಗಳಿಗೆ ನುಗ್ಗುತ್ತಿದೆ. ಪಂಚೋಡಿ-ಕರ್ನೂರು- ಗಾಳಿಮುಖ ಜಿ.ಪಂ. ರಸ್ತೆಯಲ್ಲಿ ಚರಂಡಿಯಲ್ಲಿ ನೀರು ಹರಿಯದೇ ರಸ್ತೆ ಅಂಚಿನಲ್ಲಿ ನೀರು ಹರಿಯುವುದರಿಂದ ದೊಡ್ಡ ಹೊಂಡಗಳು ನಿರ್ಮಾಣವಾಗಿವೆ. ವಾಹನಗಳು ಎದುರು- ಬದುರು ಆದರೆ ಸೈಡ್ ಕೊಡುವ ವಿಚಾರದಲ್ಲಿ ತೊಂದರೆಯಾಗುತ್ತಿದೆ. ಗಾಳಿಮುಖದಲ್ಲಿ ಜಿ.ಪಂ. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆಯ ನೀರು ಕೇರಳದ ಲೋಕೋಪಯೋಗಿ ರಸ್ತೆ ಮೇಲೆ ಹಾದು ಹೋಗುತ್ತದೆ. ಈ ಹಿಂದೆ ಪ್ರತಿ ಗ್ರಾಮ ಪಂಚಾಯತ್ ಗಳಲ್ಲಿ ಗ್ಯಾಂಗ್ ಮನ್ ಇರುತ್ತಿದ್ದರು. ಇವರು ಗ್ರಾಮದಲ್ಲಿರುವ ರಸ್ತೆಗಳ ಚರಂಡಿಯನ್ನು ದುರಸ್ತಿಗೊಳಿಸಿ ಮಳೆಯ ನೀರು ಸಮರ್ಪಕವಾಗಿ ಹೋಗುವಂತೆ ನೋಡಿಕೊಳ್ಳುತ್ತಿದ್ದರು. ಇಂತಹವರು ಇಂದು ಇಲ್ಲದೇ ಇರುವುದರಿಂದ ಚರಂಡಿಯನ್ನು ದುರಸ್ತಿ ಮಾಡುವುದು ಮರೀಚಿಕೆಯಾಗಿದೆ.
Related Articles
ಮೊದಲು ಗ್ರಾಮಮಟ್ಟದಲ್ಲಿ ಚರಂಡಿ ದುರಸ್ತಿಗೆ ಕ್ರಮಕೈಗೊಳ್ಳಲಾಗುತ್ತಿತ್ತು. ಈಗ ಇದು ನಿಂತು ಹೋಗಿದೆ. ರಸ್ತೆ ಡಾಮರು ಮಾಡುವಾಗ ಕಡ್ಡಾಯವಾಗಿ ಚರಂಡಿ ವ್ಯವಸ್ಥೆ ಮಾಡುವಂತೆ ಗುತ್ತಿಗೆದಾರರಿಗೆ ತಿಳಿಸಬೇಕು. ಸಂಘ ಸಂಸ್ಥೆಗಳ ಸಹಕಾರ ಪಡೆದುಕೊಂಡು ಗ್ರಾ.ಪಂ. ಮುತುವರ್ಜಿ ವಹಿಸಿಕೊಂಡು ಚರಂಡಿ ದುರಸ್ತಿ ಕಾರ್ಯಕ್ಕೆ ಇಳಿದರೆ ರಸ್ತೆ ದೀರ್ಘಾವಧಿ ಉಳಿಯಬಹುದು.
– ಮನೋಜ್ ಗಾಳಿಮುಖ, ವಾಹನ ಚಾಲಕ
Advertisement
ಮೋರಿ ನಿರ್ಮಾಣಕ್ಕೆ ಪ್ರಸ್ತಾವನೆಈಶ್ವರಮಂಗಲ ಸಮೀಪದ ಗೋಳಿತ್ತಡಿಯಲ್ಲಿ ಮಣ್ಣು ತುಂಬಿಸಿ ರಸ್ತೆಯನ್ನು ಎತ್ತರ ಮಾಡಲು ಮತ್ತು ನೂತನ ಮೋರಿಯನ್ನು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರ ಅನುದಾನ ಒದಗಿಸಿಕೊಟ್ಟರೆ ಚರಂಡಿ ದುರಸ್ತಿಯ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
– ಗೋವರ್ಧನ್, ಜಿ.ಪಂ. ಎಂಜಿನಿಯರ್ — ಮಾಧವ ನಾಯಕ್ ಕೆ.