Advertisement

ಬೆಂಗಳೂರು: ನಗರದಲ್ಲಿ ನಾಗರಿಕ ಸೇವಾ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆ ಇದೀಗ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೋಟ್ಯಂತರ ರೂ. ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

Advertisement

ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಹೆಣಗಾಡುತ್ತಿರುವ ಪಾಲಿಕೆಗೆ ಇದು ದೊಡ್ಡ ತಲೆನೋವನ್ನು ತಂದಿಟ್ಟಿದ್ದು, ಜಲಮಂಡಳಿ, ಬಿಬಿಎಂಪಿ, ಬೆಸ್ಕಾಂ ಮತ್ತು ಮೆಟ್ರೊ, ಸ್ಮಾರ್ಟ್‌ ಸಿಟಿ ಯೋಜನೆ ಸೇರಿದಂತೆ ವಿವಿಧ ಇಲಾಖೆ ಗಳ ನಡುವೆ ಕಾಮಗಾರಿ ವಿಚಾರದಲ್ಲಿ ಸಮನ್ವಯತೆ ಇಲ್ಲದೆ ಇರುವುದು ಪಾಲಿಕೆಗೆ ವರ್ಷದಿಂದ ವರ್ಷಕ್ಕೆ ಆರ್ಥಿಕ ಹೊರೆ ಹೆಚ್ಚುತ್ತಲೇ ಇದೆ. ಸಮನ್ವಯತೆಯ ಕೊರತೆಯಿಂದಾಗಿಯೇ ಪಾಲಿಕೆ ರಾಜಧಾನಿಯ ರಸ್ತೆಗಳನ್ನು ಗುಂಡಿ ಮುಕ್ತವಾಗಿಸುವು ದಕ್ಕೆ ಕಳೆದ 5 ವರ್ಷಗಳಲ್ಲಿ ಬರೋಬ್ಬರಿ 215 ಕೋಟಿ ರೂ. ಹಣ ವ್ಯಯಿಸಿದೆ.

ಜೊತೆಗೆ ವಿವಿಧ ಖಾಸಗಿ ಒಎಫ್‌ಸಿ ಕೇಬಲ್‌ ಸಂಸ್ಥೆಗಳು ರಸ್ತೆಯನ್ನು ಅಗೆದು ಹಾಕುತ್ತಿದ್ದು, ರಸ್ತೆ ಗುಂಡಿಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುತ್ತಿದೆ. ಅಷ್ಟೇ ಅಲ್ಲದೆ ಪಾಲಿಕೆ, ಬೆಸ್ಕಾಂ ಮತ್ತು ಜಲಮಂಡಳಿ ನಡುವೆ ಸಮನ್ವಯತೆ ಇಲ್ಲದ ಇರುವ ವಿಚಾರ ಹೈಕೋಟ್‌ ಮೆಟ್ಟಿಲೇರುವಂತಾಗಿತ್ತು.

15 ದಿನಕ್ಕೊಮ್ಮೆ ನಡೆಯುತ್ತಿದ್ದ ಸಭೆಗೆ ತಿಲಾಂಜಲಿ: ಕಳೆದ ಎರಡ್ಮೂರು ವರ್ಷಗಳ ಹಿಂದೆ 15 ದಿನಕ್ಕೊಮ್ಮೆ ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ಮತ್ತು ಮೆಟ್ರೊ, ಸ್ಮಾರ್ಟ್‌ ಸಿಟಿ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳ ನಡುವೆ ಹಿರಿಯ ಅಧಿಕಾರಿಗಳ ಮಟ್ಟದ ಸಮ ನ್ವಯ ಸಭೆ ನಡೆಯುತ್ತಿತ್ತು. ಕೆಲವು ಸಲ ಮುಖ್ಯಮಂತ್ರಿಗಳು ಇಲ್ಲವೆ ಬೆಂಗಳೂರು ಉಸ್ತುವಾರಿ ಸಚಿವರು ಕೂಡ ಭಾಗವಹಿಸುತ್ತಿದ್ದರು. ಮುಖ್ಯಮಂತ್ರಿ ಗಳ ಇಲ್ಲವೆ ಸಚಿವರು ಗೈರಾದರೆ ಸರ್ಕಾರದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಮನ್ವಯ ಸಭೆಯಲ್ಲಿ ಹಲವು ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು.

ಆದರೆ ಕಳೆದ ಎರಡ್ಮೂರು ವರ್ಷಗಳಿಂದ ವಿವಿಧ ಇಲಾಖೆಗಳ ಸಮನ್ವಯ ಸಭೆ ನಡೆದಿಲ್ಲ ಎಂದ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪ್ರತಿ 15 ದಿನಕ್ಕೊಮ್ಮೆ ವಿವಿಧ ಇಲಾಖೆಯ ಕಾಮಗಾರಿ ಸೇರಿದಂತೆ ಮತ್ತತಿರ ಅಭಿವೃದ್ಧಿ ವಿಚಾರವಾಗಿ ಸಮನ್ವಯ ಸಭೆ ನಡೆದರೆ ಬಿಬಿಪಿಎಂಪಿ ಮೇಲಿನ ಆರ್ಥಿಕ ಹೊರೆ ತಗ್ಗಿಸಬಹುದಾಗಿದೆ ಎಂದು ಹೇಳುತ್ತಾರೆ.

Advertisement

ಯಲಹಂಕ ವ್ಯಾಪ್ತಿಯಲ್ಲಿ ಇತ್ತೀಚೆಗೆ ರಸ್ತೆ ಗುಂಡಿ ಅಪಘಾತ ಪ್ರಕರಣ ನಡೆದಾಗ ಇದು ಬಿಬಿಎಂಪಿ ತಪ್ಪಿನಿಂದ ಆಗಿದ್ದಲ್ಲ. ಜಲಮಂಡಳಿ ಕಾಮಗಾರಿಯಿಂದ ಆಗಿದ್ದು ಎಂದು ಪಾಲಿಕೆ ಅಧಿಕಾರಿಗಳು ಸ್ಪಷ್ಟಣೆ ನೀಡಿದ್ದರು. ಆದರೆ, ಜಲಮಂಡಳಿ ಕೂಡ ನಮ್ಮ ತಪ್ಪಿನಿಂದಲ್ಲ ಎಂದು ಸ್ಪಷ್ಟಣೆ ನೀಡಿ ಕೈ ತೊಳೆದುಕೊಂಡಿತ್ತು. ಜತೆಗೆ ಕಳೆದ ಕೆಲ ದಿನಗಳ ಹಿಂದೆ ಮೈಸೂರು ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ತಪ್ಪಿಸಲು ಹೋಗಿ ಕೆಎಸ್‌ಆರ್‌ಟಿಸಿ ಬಸ್‌ ಮೆಟ್ರೋ ಪಿಲ್ಲರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಆ ವೇಳೆ ಬಸ್‌ ಅಪಘಾತಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದ್ದ ಬಿಬಿಎಂಪಿ ಅಧಿಕಾರಿಗಳು ಈ ರಸ್ತೆಯ ನಿರ್ವಹಣೆಯನ್ನು ಸರ್ಕಾರ ಬಿಎಂಆರ್‌ಸಿಲ್‌ಗೆ ವಹಿಸಿದೆ ಎಂದು ಹೇಳಿಕೆ ನೀಡಿದ್ದರು.  ಆದರೆ ಬಿಎಂಆರ್‌ಸಿಎಲ್‌ ನಿರ್ವಹಣೆಗೆ ಸೇರಿಲ್ಲ ಎಂದು ಸ್ಪಷ್ಟೀಕರಣ ನೀಡಿ ಸಮ್ಮನಾಗಿತ್ತು.

 ಕೋಟ್ಯಂತ ರ ರೂ. ತೆರಿಗೆ ಹಣ ಪೋಲು: ರಾಜಧಾನಿಯ ರಸ್ತೆ ಗುಂಡಿಗಳಿಗಾಗಿಯೇ ಪ್ರತಿ ವರ್ಷ ಪಾಲಿಕೆ ಕೋಟ್ಯಂತರ ರೂ.ತೆರಿಗೆ ಹಣ ಪೋಲು ಮಾಡುತ್ತದೆ. 2017-18 ರಲ್ಲಿ ಬಿಬಿಎಂಪಿ ರಸ್ತೆ ಗುಂಡಿಗೆ ಸುಮಾರು 147.8 ಕೋಟಿ ರೂ. ವೆಚ್ಚ ಮಾಡಿತ್ತು. ಹಾಗೆಯೇ 2018-19ರಲ್ಲಿ ಸುಮಾರು 49.2 ಕೋಟಿ ರೂ. ಬಳಕೆ ಮಾಡಿತ್ತು. 2019-20ರಲ್ಲಿ ಸುಮಾರು 54.8 ಕೋಟಿ ರೂ. ಅನ್ನು ಗುಂಡಿಗಳ ಮುಚ್ಚಲೆಂದ ವ್ಯಯ ಮಾಡಿತ್ತು. ಜತೆಗೆ 2020-21ರಲ್ಲಿ ಸುಮಾರು 16.4 ಕೋಟಿ ರೂ. ಹಾಗೂ 2021-22 ಸಾಲಿನಲ್ಲಿ 47 ಕೋಟಿ ರೂ. ಗುಂಡಿ ಮುಚ್ಚಲು ಸಲುವಾಗಿಯೆ ಬಿಬಿಎಂಪಿ ಹಣ ವೆಚ್ಚ ಮಾಡಿದೆ. ಈವರೆಗೂ

 8 ಸಾವಿರ ರಸ್ತೆ ಗುಂಡಿಗಳು ಪತ್ತೆ : ರಸ್ತೆ ಗುಂಡಿಗಳ ವಿಚಾರವಾಗಿ ಹೈಕೋರ್ಟ್‌ ಛಾಟೀ ಬೀಸಿದ ಬೆನ್ನಲ್ಲೇ ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ನಿಟ್ಟಿನಲ್ಲಿ ಪಾಲಿಕೆ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ರಸ್ತೆ ಗುಂಡಿಗಳನ್ನು ಸಮೀಕ್ಷೆಯಿಂದ ಗುರುತಿಸಿ ಅವುಗಳನ್ನು ಮುಚ್ಚಲು ನೆರವಾಗುವಂತೆ “ಫಿಕ್ಸ್‌ ಮೈ ಸ್ಟ್ರೀಟ್‌’ ಆ್ಯಪ್‌ ಅಭಿವೃದ್ಧಿ ಪಡಿಸಲಾಗಿದೆ. ಈಗಾಗಲೇ ಸುಮಾರು 8 ಸಾವಿರ ರಸ್ತೆಗುಂಡಿಗಳು ನಗರದಲ್ಲಿರುವುದ ಆ್ಯಪ್‌ ಮೂಲಕ ಪತ್ತೆಯಾಗಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ.

ರಸ್ತೆ ಗುಂಡಿಗಳು ಎಲ್ಲೆಲ್ಲಿವೆ ಎಂಬುವುದರ ಕುರಿತಂತೆ ಸಾರ್ವಜನಿಕರೂ ಮಾಹಿತಿ ನೀಡಬಹುದು ಎಂದು ಹೇಳಲಾಗಿತ್ತು. ಆದರೆ ಪಾಲಿಕೆ ವೆಬ್‌ಸೈಟ್‌ ಹ್ಯಾಂಗ್‌ ಆಗುತ್ತಿರುವುದರಿಂದ ಸಾರ್ವಜನಿಕರ ಮಾಹಿತಿ ಕ್ರೋಢೀಕರಣಕ್ಕೆ ತೊಡಕು ಉಂಟಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ನಾನು ಜಲಮಂಡಳಿ ಸೇರಿದಂತೆ ಹಲವು ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿರುವ ಅನುಭವ ಇದೆ. ಸಿಲಿಕಾನ್‌ ಸಿಟಿ ಅಭಿವೃದ್ದಿ ವಿಚಾರದಲ್ಲಿ ಬೆಸ್ಕಾಂ, ಜಲಮಂಡಳಿ, ಸ್ಮಾರ್ಟಿ ಸಿಟಿ ಯೋಜನೆ ಮತ್ತು ಪೊಲೀಸ್‌ ಇಲಾಖೆಯನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಕಾರ್ಯನಿರ್ವಹಿಸುತ್ತೇನೆ. ಸಮನ್ವತೆಯಿಂದ ಕಾರ್ಯ ನಿರ್ವಹಿಸಲು ಹೆಚ್ಚು ಒತ್ತು ನೀಡುತ್ತೇನೆ. -ತುಷಾರ್‌ ಗಿರಿನಾಥ್‌, ಪಾಲಿಕೆ ಮುಖ್ಯ ಆಯುಕ್ತ

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next