Advertisement

ಕಲ್ಲೋಣಿ-ದೇವರಕಾನ, ಕುಳ್ಳಂಪಾಡಿ-ಮೊಗಪ್ಪೆ ರಸ್ತೆ ಕೆಸರುಮಯ

02:10 AM Jun 23, 2018 | Team Udayavani |

ಬೆಳ್ಳಾರೆ: ಐವರ್ನಾಡು ಗ್ರಾಮದ ಕಲ್ಲೋಣಿ, ಕುಳ್ಳಂಪಾಡಿ, ಮೊಗಪ್ಪೆ ರಸ್ತೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಸಂಪೂರ್ಣ ಕೆಸರು ಮಯವಾಗಿದೆ. ಈ ಭಾಗದ ಜನರ ಗೋಳು ಕೇಳುವವರೆ ಇಲ್ಲದಂತಾಗಿದೆ. ರಸ್ತೆಗೆ ಮಣ್ಣು ಹಾಕಿ ಹೊಂಡ ಗುಂಡಿಗಳನ್ನು ಮುಚ್ಚಲಾಗಿತ್ತು. ಇದೀಗ ಮಳೆಗಾಲ ಪ್ರಾರಂಭವಾದ ಹಿನ್ನೆಲೆಯಲ್ಲಿ ಈ ರಸ್ತೆ ಸಂಪೂರ್ಣ ಕೆಸರಿನಿಂದ ಕೂಡಿ ಗದ್ದೆಯಾಗಿ ಪರಿವರ್ತನೆಗೊಂಡಿದೆ. ಇದರಿಂದ ಸಾರ್ವಜನಿಕರಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವುದಕ್ಕೆ ಕಷ್ಟಕರ ವಾದರೆ ವಾಹನ ಸವಾರರು ಈ ರಸ್ತೆಯಲ್ಲಿ ವಾಹನ ಚಲಾಯಿಸಲು ಸರ್ಕಸ್‌ ಮಾಡಬೇಕಾಗುತ್ತದೆ.

Advertisement

ರಸ್ತೆಯೇ ಚರಂಡಿ
ಕಲ್ಲೋಣಿ -ದೇವರಕಾನ, ಕುಳ್ಳಂಪಾಡಿ, ಮೊಗಪ್ಪೆ ರಸ್ತೆಗೆ ಸಮರ್ಪಕವಾಗಿ ಚರಂಡಿ ಇಲ್ಲದಿರುವುದೇ ಈ ರಸ್ತೆಯನ್ನು ಈ ಪರಿಸ್ಥಿತಿಗೆ ತಂದೊಡ್ಡಿದೆ. ರಸ್ತೆಯುದ್ದಕ್ಕೂ ಎಲ್ಲಿಯೂ ಚರಂಡಿ ಕಾಣುತ್ತಿಲ್ಲ. ರಸ್ತೆಗೆ ಹಾಕಿದ ಮಣ್ಣು ಕೆಲವೆಡೆ ಚರಂಡಿ ಮುಚ್ಚಿ ನಿಂತಿದೆ. ಕಲ್ಲೋಣಿ ಸಮೀಪ ಮಣ್ಣು ಬಿಗಿದು ಮೋರಿಗಳು ಬ್ಲಾಕ್‌ ಆಗಿವೆ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ.


ರಸ್ತೆ ಅತಿಕ್ರಮಣ

ಈ ರಸ್ತೆ ಜಿಲ್ಲಾ ಪಂಚಾಯತ್‌ ರಸ್ತೆಯಾಗಿದ್ದು, ಕಲ್ಲೋಣಿ ಸಮೀಪ ಕೆಲವರು ಅತಿಕ್ರಮಣ ಮಾಡುತ್ತಿದ್ದಾರೆ ಎಂದು ಸ್ಥಳೀಯ ಜನಪ್ರತಿನಿಧಿಗಳು ಹೇಳುತ್ತಾರೆ. ಈ ಸಂಪರ್ಕ ರಸ್ತೆ ಪುತ್ತೂರು ತಾಲೂಕನ್ನು ಮೊಗಪ್ಪೆ ಸಮೀಪ ಸಂಪರ್ಕಿಸುತ್ತದೆ. ಇದು ಅಂತರ್‌ ತಾಲೂಕು ಸಂಪರ್ಕ ರಸ್ತೆಯಾಗಿದ್ದು, ಇದು ಬೆಳ್ಳಾರೆಯಿಂದ ಪುತ್ತೂರು ತಾಲೂಕನ್ನು ಸಂಪರ್ಕಿಸುವ ಅತೀ ಹತ್ತಿರದ ಹಾದಿಯಾಗಿದೆ. ಈ ಭಾಗದಲ್ಲಿ  ನೂರಾರು ಮನೆಗಳಿವೆ. ಕಲ್ಲೋಣಿಯಲ್ಲಿ  ತಮಿಳು ಕಾಲೋನಿ, ಕಳ್ಳಂಪಾಡಿಯಲ್ಲಿ ಎಸ್‌.ಸಿ. ಕಾಲೋನಿ ಇದೆ. ಕಲ್ಲೋಣಿ ಭಾಗ ಬೆಳ್ಳಾರೆ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಸೇರಿದೆ. ರಸ್ತೆ ಸಮಸ್ಯೆಯನ್ನು ಐವರ್ನಾಡು ಗ್ರಾಮ ಪಂಚಾಯತ್‌ನ ದೇವರಕಾನ ವಾರ್ಡ್‌ನ ಸದಸ್ಯ ಬಾಲಕೃಷ್ಣ ಕಿಲಾಡಿ ಶಾಸಕರ ಗಮನಕ್ಕೆ ತಂದಿದ್ದು ಜಿಲ್ಲಾಧಿಕಾರಿಗೂ ದೂರು ನೀಡಲು ನಿರ್ಧರಿಸಿದ್ದಾರೆ.


ಅನುದಾನದ ಕೊರತೆ

ಮಳೆ ಹಾನಿ ಯೋಜನೆಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ರಸ್ತೆ ದುರಸ್ತಿಗೊಳಿಸಲು ಕೋರಿ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅನುದಾನ ಬಂದ ತತ್‌ ಕ್ಷಣ ದುರಸ್ತಿ ಮಾಡಲಾಗುವುದು.
– ಎಸ್‌.ಕೆ. ಹುಕ್ಕೇರಿ, ಜೂನಿಯರ್‌ ಎಂಜಿನಿಯರ್‌, ಜಿಲ್ಲಾ ಪಂಚಾಯತ್‌ 

ಮನವಿ ಮಾಡಲಾಗಿದೆ
ಇದು ಜಿಲ್ಲಾ  ಪಂಚಾಯತ್‌ ರಸ್ತೆಯಾಗಿರುವ ಕಾರಣ ಸಂಬಂಧಪಟ್ಟ ಜನಪ್ರತಿನಿಧಿಗಳಲ್ಲಿ ಇಲಾಖೆಯವರಲ್ಲಿ ರಸ್ತೆ ಅಭಿವೃದ್ಧಿಗೆ ಮನವಿ ಮಾಡಿಕೊಳ್ಳಲಾಗಿದೆ. ಅವರು ಸೂಕ್ತವಾಗಿ ಸ್ಪಂದಿಸುವ ಭರವಸೆ ಇದೆ.
– ರಾಜೀವಿ ಪರ್ಲಿಕಜೆ, ಅಧ್ಯಕ್ಷೆ, ಐವರ್ನಾಡು ಗ್ರಾಮ ಪಂಚಾಯತ್‌ 

Advertisement

ಜಿಲ್ಲಾಧಿಕಾರಿಗೆ ಪತ್ರ
ಈ ರಸ್ತೆ ತೀರಾ ಹದಗೆಟ್ಟಿದೆ. ಸಂಚರಿಸಲು ತೀರಾ ಸಂಕಷ್ಟದಿಂದ ಕೂಡಿದ ರಸ್ತೆಯಾಗಿ ಬದಲಾಗಿದೆ. ರಸ್ತೆ ತುರ್ತಾಗಿ ದುರಸ್ತಿ ಮಾಡಬೇಕಾಗಿರುವುದರಿಂದ ಶಾಸಕರ ಗಮನಕ್ಕೆ ತಂದಿದ್ದೇನೆ. ಈ ಸಂಬಂಧ ಜಿಲ್ಲಾಧಿಕಾರಿಗೂ ಬರೆಯಲಾಗುವುದು.
– ಬಾಲಕೃಷ್ಣ ಕಿಲಾಡಿ, ಸ್ಥಳೀಯ ಪಂಚಾಯತ್‌ ವಾರ್ಡ್‌ ಸದಸ್ಯ

— ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next