Advertisement

ದಶಕಗಳಿಂದ ಹೊಂಡ-ಗುಂಡಿಗಳದೇ ವ್ಯಥೆ!

12:11 PM Aug 13, 2018 | |

ಸುಳ್ಯ : ಇಲ್ಲಿ ದಿನವಿಡೀ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚರಿಸುತ್ತಾರೆ. ಕೆಎಸ್ಸಾರ್ಟಿಸಿ ಬಸ್ಸುಗಳು ಓಡಾಡುತ್ತಿವೆ. ಸಂಪರ್ಕಕ್ಕೆ ಪರ್ಯಾಯ ದಾರಿ ಇಲ್ಲದ ರಸ್ತೆ ಇದಾಗಿದ್ದರೂ ದಶಕಗಳಿಂದ ಇಲ್ಲಿನದ್ದು ಹೊಂಡ, ಕೆಸರು ತುಂಬಿದ ಕಥೆ-ವ್ಯಥೆ!.

Advertisement

ಜಿ.ಪಂ. ಮತ್ತು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರಿದ ಪಂಜಿಗಾರು- ಪೊಟ್ರೆ- ಕಾಣಿಯೂರು ಸಂಪರ್ಕದ ಪಂಜಿಗಾರು- ಬೊಬ್ಬೆಕೇರಿ – ಕಲ್ಪನೆ ತನಕದ ರಸ್ತೆಯ ಗೋಳು ಇದಾಗಿದೆ. ಹೊಂಡ ತಪ್ಪಿಸಿ ವಾಹನ ಚಲಾಯಿಸುವುದು ಸವಾರರ ಪಾಲಿಗೆ ಸವಾಲೆನಿಸಿದೆ. ಕನಿಷ್ಠ ದುರಸ್ತಿ ಬಗೆಗಿನ ಬೇಡಿಕೆ ಬಗ್ಗೆಯೂ ಇಲ್ಲಿ ಸ್ಪಂದನೆ ಸಿಕ್ಕಿಲ್ಲ. ಇದೇ ರಸ್ತೆಯಲ್ಲಿ ರಾಮಕುಮೇರಿ ಬಳಿ ವರ್ಷದ ಹಿಂದೆ ಮಾಡಿದ ಡಾಮರು ಕಾಮಗಾರಿಯೂ ಕಳಪೆ ಎಂದು ದೂರುತ್ತಾರೆ ಸ್ಥಳೀಯರು.

ಪ್ರಮುಖ ರಸ್ತೆ
ಕೊಡಿಯಾಲ, ಬಾಳಿಲ ಗ್ರಾ.ಪಂ. ವ್ಯಾಪ್ತಿಯ ಹಲವು ಮನೆಗಳನ್ನು ಬೆಸೆದುಕೊಳ್ಳುವ ಈ ರಸ್ತೆ ಕೊಡಿಯಾಲ, ಕಲ್ಪನೆ ಆಸುಪಾಸಿನ ನಿವಾಸಿಗಳ ಸಂಚಾರಕ್ಕೆ ಇರುವ ಏಕೈಕ ರಸ್ತೆ. ಕಳೆದ 20 ವರ್ಷಗಳಿಂದ ಬೇಸಗೆಯಲ್ಲಿ ಹೊಂಡ, ಮಳೆಗಾಲದಲ್ಲಿ ಕೆಸರು ತುಂಬಿರುವುದು ಇಲ್ಲಿನ ಗೋಳು. ಜನಪ್ರತಿನಿಧಿಗಳ ಆಶ್ವಾಸನೆ ಮಾತಿಗಷ್ಟೇ ಸೀಮಿತ ಎಂದರಿತ ಊರವರು ತಾವೇ ಅಲ್ಲಲ್ಲಿ ಹೊಂಡ ಮುಚ್ಚುವ ಪ್ರಯತ್ನ ಮಾಡಿದ್ದು ಇದೆ. ಅದು ದೀರ್ಘ‌ ಕಾಲ ಫಲ ಕೊಟ್ಟಿಲ್ಲ. ಹೊಸ ಡಾಮರು ಇದಕ್ಕೆ ಪರಿಹಾರ.

ಬಸ್‌ ಓಡಾಟ
ಪ್ರತಿದಿನ ಕೊಡಿಯಾಲ ಗ್ರಾಮಕ್ಕೆ 6 ಬಾರಿ ಕೆಎಸ್ಸಾರ್ಟಿಸಿ ಬಸ್‌ ಬರುತ್ತದೆ. ಪೆರುವಾಜೆ, ಬೆಳ್ಳಾರೆ, ಬಾಳಿಲ, ಸುಳ್ಯ, ಪುತ್ತೂರು ಭಾಗಕ್ಕೆ ನೂರಾರು ವಿದ್ಯಾರ್ಥಿಗಳು ತೆರಳುತ್ತಾರೆ. ಅವರಿಗೆ ಈ ರಸ್ತೆ, ಬಸ್‌ ಆಧಾರ. ರಸ್ತೆಯ ದುಃಸ್ಥಿತಿ ಹೀಗೆಯೇ ಇದ್ದರೆ ಬಸ್‌ ಓಡಾಟ ಸ್ಥಗಿತಗೊಳ್ಳುವ ಆತಂಕ ಇಲ್ಲಿ ಕಾಡಿದೆ. ಸುಮಾರು 2 ಕಿ.ಮೀ. ದೂರದ ತನಕ ಪೂರ್ಣ ಹದಗೆಟ್ಟು, ಉಳಿದ ಭಾಗದಲ್ಲಿ ಡಾಮರು ಕಿತ್ತು ಹೋಗಿರುವ ರಸ್ತೆಗೆ ಹೊಸ ಡಾಮರು ಕಾಮಗಾರಿಯ ಅಗತ್ಯವಿದೆ. ದೇಗುಲ, ಗ್ರಾ.ಪಂ., ಗ್ರಾಮ ಕರಣಿಕರ ಕಚೇರಿ, ಮೂವಪ್ಪೆ, ಕೊಡಿಯಾಲದಲ್ಲಿ ಶಾಲೆಗಳು ಸಹಿತ ಜನವಸತಿ ಕೇಂದ್ರವಾಗಿರುವ ಕೊಡಿಯಾಲ ಗ್ರಾಮಕ್ಕೆ ಪುತ್ತೂರು ತಾಲೂಕಿನ ಕಾಣಿಯೂರು, ಸುಳ್ಯ ತಾಲೂಕಿನ ಬೆಳ್ಳಾರೆಗೆ ಸಂಪರ್ಕ ರಸ್ತೆ ಇದಾಗಿದೆ.

ದುರಸ್ತಿಯಾದರೂ ಮಾಡಿ
ಕಳೆದ ಹಲವು ವರ್ಷದಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ನೂರಾರು ಮಂದಿ ಇದೇ ರಸ್ತೆಯಲ್ಲಿಯೇ ಓಡಾಡುತ್ತಾರೆ. ಹೊಸ ರಸ್ತೆ ನಿರ್ಮಿಸಲು ಅನುದಾನ ಇಲ್ಲದಿದ್ದರೆ ಕನಿಷ್ಠ ದುರಸ್ತಿಯಾದರೂ ಮಾಡಬೇಕು.
ಸಂತೋಷ್‌ ಕುಮಾರ್‌, ಪೆರಿಯಾನ

Advertisement

ವಾಹನ ಚಾಲನೆ ಕಷ್ಟ
ಇಲ್ಲಿ ವಾಹನ ಸವಾರರು ಪರದಾಡುವ ಸ್ಥಿತಿ ಇದೆ. ಅಲ್ಲಲ್ಲಿ ಹೊಂಡ ತುಂಬಿ ಸಂಚಾರವೇ ದುಸ್ತರವಾಗಿದೆ. ತತ್‌ಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
– ಹರ್ಷಿತ್‌ ಪೊಟ್ರೆ, ಸ್ಥಳೀಯ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next