ಚಾಮರಾಜನಗರ: ನಗರದ ಯಡಬೆಟ್ಟದ ಸಮೀಪ ಇರುವ ಸರ್ಕಾರಿ ಮೆಡಿಕಲ್ ಆಸ್ಪತ್ರೆ ಉದ್ಘಾಟನೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಆಗಮಿಸಲಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳನ್ನು ತರಾತುರಿಯಲ್ಲಿ ದುರಸ್ತಿ ಮಾಡಲಾಗುತ್ತಿದೆ. ವರ್ಷಾನು ಗಟ್ಟಲೆಯಿಂದ ರಿಪೇರಿ ಮಾಡದೇ ಇದ್ದ ರಸ್ತೆಗಳ ಹಳ್ಳಕೊಳ್ಳ ಮುಚ್ಚಲು ರಾಷ್ಟ್ರಪತಿಗಳೇ ಬರಬೇಕಾಯಿತೇ? ಎಂದು ನಗರದ ಜನತೆ ಪ್ರಶ್ನಿಸುತ್ತಿದ್ದಾರೆ.
ರಾಷ್ಟ್ರಪತಿಯವರ ಕಾರ್ಯಕ್ರಮ ಇರುವ ಮೆಡಿಕಲ್ ಕಾಲೇಜು ಸಮೀಪದ ಉತ್ತುವಳ್ಳಿ, ಬಳಿ (ಗುಂಡ್ಲುಪೇಟೆ ರಸ್ತೆ) ರಸ್ತೆಗೆ ಹೊಸದಾಗಿ ಡಾಂಬರು ಹಾಕಿ ಬಿಳಿಗೆರೆ ಎಳೆಯಲಾಗಿದೆ. ರಸ್ತೆಯ ಇಕ್ಕೆಲದಲ್ಲೂ ಗಿಡಗಂಟಿಗಳನ್ನು ಕಿತ್ತು, ಮಣ್ಣನ್ನು ಸಮತಟ್ಟು ಮಾಡಲಾಗಿದೆ. ಗ್ರಾವೆಲ್ ಕೂಡ ಹಾಕಲಾಗಿದೆ. ಇಷ್ಟೇ ಅಲ್ಲದೇ ನಗರದ ಬಿ. ರಾಚಯ್ಯ ಜೋಡಿ ರಸ್ತೆ, ಡೀವಿಯೇಷನ್ ರಸ್ತೆ ಮತ್ತಿತರೆಡೆ ಬಾಕಿ ಉಳಿದುಹಾಗೇ ಬಿಡಲಾಗಿದ್ದ ಕಾಮಗಾರಿಗಳನ್ನು ಪೂರ್ಣ ಗೊಳಿಸಲಾಗುತ್ತಿದೆ.
ಚಾಮರಾಜನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿ ಡಿವೈಡರ್ ಮೇಲೆ ಹಾದು ಹೋಗಿರುವ ಎಲೆಕ್ಟ್ರಿಕ್ ವೈರ್ ಪೈಪನ್ನು ಮುಚ್ಚಿ ಸಿಮೆಂಟ್ ಪ್ಲಾಸ್ಟರಿಂಗ್ ಮಾಡದೇ ಹಾಗೇ ಬಿಡಲಾಗಿತ್ತು. ಈಗ ಅದನ್ನೆಲ್ಲ ಸಿಮೆಂಟ್ ಪ್ಲಾಸ್ಟರಿಂಗ ಮಾಡಲಾಗುತ್ತಿದೆ.
ಇದನ್ನೂ ಓದಿ;- RSS ಜಾತಿ ಧರ್ಮ ಮೀರಿದ ಮಾತೃ ಹೃದಯಿ ಸಂಘಟನೆ|UDAYAVANI NEWS BULLETIN|6/10/2021
ರಾಷ್ಟ್ರಪತಿಯವರು ಹೆಲಿಕಾಪ್ಟರ್‌ನಲ್ಲಿ ಮೆಡಿಕಲ್ ಕಾಲೇಜಿಗೆ ಬಂದು ಹೋಗುತ್ತಾರೆ. ಅವರುಬಾರದಿದ್ದರೂ ನಗರದ ರಸ್ತೆಗಳನ್ನು ಈ ರೀತಿ ತರಾತುರಿಯಲ್ಲಿ ದುರಸ್ತಿ ಮಾಡುತ್ತಿರುವುದೇಕೆ ಎಂದು ಕೆಲವು ನಾಗರಿಕರು ಪ್ರಶ್ನಿಸುತ್ತಿದ್ದಾರೆ! ರಾಷ್ಟ್ರಪತಿಯವರು ಈ ಕಡೆ ಬಾರದಿದ್ದರೂ, ಅವರ ಭೇಟಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸೇರಿ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ನಗರಕ್ಕೆ ಭೇಟಿ ನೀಡಲಿರುವ ಕಾರಣ ಇದನ್ನೆಲ್ಲ ತೇಪೆ ಹಚ್ಚಲಾಗುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಚಾಮರಾಜನಗರದ ರಸ್ತೆಗಳು ದುರಸ್ತಿಯಾಗಲು ರಾಷ್ಟ್ರಪತಿ ಕಾರ್ಯಕ್ರಮವೇ ನಿಗದಿಯಾಗಬೇಕೇ? ಹಾಗಾದರೆ ಜನ ಸಾಮಾನ್ಯರ ಅನುಕೂಲಕ್ಕಾಗಿ ಅಧಿಕಾರಿಗಳು ಕೆಲಸ ಮಾಡುವುದಿಲ್ಲವೇ? ರಸ್ತೆಗಳು ಹಾಳಾಗಿರುವುದು ಇಷ್ಟು ದಿನಗಳಿಂದ ಅಧಿಕಾರಿಗಳಿಗೆ ಗೊತ್ತಿರಲಿಲ್ಲವೇ? ಎಂದು ಜನರು ಆಕ್ರೋಶದಿಂದ ಪ್ರಶ್ನಿಸುತ್ತಿದ್ದಾರೆ.