ಯಳಂದೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಾಡಿದ್ದ ರಸ್ತೆ ಕಾಮಗಾರಿಗೆ ಮತ್ತೆ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಕಾಮಗಾರಿ ನಡೆದಿದ್ದು ಎರಡು ವರ್ಷದಲ್ಲಿ ಒಂದೇ ರಸ್ತೆಗೆ ಎರಡು ಅನುದಾನ ದುರ್ಬಳಕೆಯಾಗಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
3 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ: ತಾಲೂಕಿನ ದುಗ್ಗಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡಿ. ಕಂದಹಳ್ಳಿ ಗ್ರಾಮದ ಅಂಬಳೆ ಪಾಲದಿಂದ ಕಬಿನಿ ನಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿಗೆ 2017-18 ನೇ ಸಾಲಿನ ನರೇಗಾ ಯೋಜನೆಯಲ್ಲಿ ಅಂದಾಜು 3 ಲಕ್ಷ ರೂ. ವೆಚ್ಚದಲ್ಲಿ ರಸ್ತೆಯ ಅಭಿವೃದ್ಧಿ ಮಾಡಲಾಗಿತ್ತು.
ಬೇರೆ ಬಡಾವಣೆ ರಸ್ತೆಗೆ ಅನುದಾನ ಬಿಡುಗಡೆ ಮಾಡಬಹುದಿತ್ತು: ನರೇಗಾ ನಿಯಮದ ಪ್ರಕಾರ ಒಂದು ಕಾಮಗಾರಿಗೆ ಮತ್ತೆ ಅದೇ ಸ್ಥಳದಲ್ಲಿ ಕಾಮಗಾರಿ ಮಾಡಬೇಕಾದರೆ 3 ವರ್ಷ ಅಂತರವಿರಬೇಕು. ಆದರೆ ಎರಡೇ ವರ್ಷದಲ್ಲಿ ಮತ್ತೆ ಅದೇ ರಸ್ತೆಯನ್ನು ಜಿಲ್ಲಾ ಪಂಚಾಯಿತಿ ವತಿಯಿಂದ ಆಯ್ಕೆ ಮಾಡಿಕೊಂಡು ಕಾಮಗಾರಿ ನಡೆಸಲಾಗಿದೆ.
ಇದರಿಂದ ಸರ್ಕಾರದ ಅನುದಾನವು ಪೋಲಾಗುತ್ತಿದ್ದು. ಇದಕ್ಕೆ ಸಂಬಂಧಿಸಿದ ಎಂಜಿನಿಯರ್ ಹಾಗೂ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಲ್ಲಿ ಗುಮಾನಿ ಇದೆ. ಇದರ ಬದಲು ಗ್ರಾಮದ ಇತರೆ ಬಡಾವಣೆಗಳ ರಸ್ತೆಯ ಅಭಿವೃದ್ಧಿ ಅನುದಾನವನ್ನು ನೀಡಿದ್ದರೆ ಎಷ್ಟು ಉಪಯುಕ್ತವಾಗುತ್ತಿತ್ತು ಎಂದು ಸಾರ್ವಜನಿಕರ ಆರೋಪವಾಗಿದೆ.
ಗುಟ್ಟಮಟ್ಟವಿಲ್ಲದ ಕಾಮಗಾರಿ: ಜಿಪಂ ವತಿಯಿಂದ ಈ ಕಾಮಗಾರಿಯನ್ನು 2 ಲಕ್ಷ ರೂ. ವೆಚ್ಚದಲ್ಲಿ ಮಾಡಲಾಗುತ್ತಿದೆ. ಕಾಮಗಾರಿಯೂ ಗುಣಮಟ್ಟದಿಂದ ಕೂಡಿಲ್ಲ. ಜೊತೆಗೆ ಸರಿಯಾಗಿ ಕಲ್ಲು ಮಣ್ಣನ್ನು ಹಾಕದೆ ಬೇಕಾ ಬಿಟ್ಟಿಯಾಗಿ ರಸ್ತೆಯ ಕಾಮಗಾರಿ ಮುಗಿಸಿದ್ದಾರೆ. ಈ ಬಗ್ಗೆ ಇಲ್ಲಿನ ಜಮೀನಿಗೆ ಹೋಗುವ ರೈತರು ರಸ್ತೆಯ ಗುಣಮಟ್ಟದ ಸರಿಯಿಲ್ಲ ಎಂದು ಕೆಲವು ದಿನದ ಹಿಂದೆ ಕೆಲಸವನ್ನು ಸ್ಥಗಿತ ಗೊಳಿಸಿದ್ದರು. ಆದರೂ ಕೂಡ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರ ತರಾತುರಿಯಲ್ಲಿ ಈ ಕಾಮಗಾರಿಯನ್ನು ಮುಗಿಸಿದ್ದಾರೆ.
ತಾಲೂಕಿನ ಕಂದಹಳ್ಳಿ ಗ್ರಾಮದ ಅಂಬಳೆ ಪಾಲದಿಂದ ಕಬಿನಿ ನಾಲೆಯ ರಸ್ತೆ ಕೆಲಸ ಈ ಹಿಂದೆ ನರೇಗಾ ಯೋಜನೆ ನಡೆದಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ, ಈ ಕೂಡಲೇ ಮಾಹಿತಿ ಪರಿಶೀಲಿಸಿ ಸೂಕ್ತ ಕ್ರಮವಹಿಸಲಾಗುವುದು.
-ಹರೀಶ್‌ಕುಮಾರ್, ಎಇಇ, ಜಿಪಂ, ಯಳಂದೂರು
ತಾಲೂಕಿನ ಕಂದಹಳ್ಳಿ ಗ್ರಾಮದ ಅಂಬಳೆ ಪಾಲದಿಂದ ಕಬಿನಿ ನಾಲೆವರಗೆ ನಡೆದಿರುವ ಕಾಮಗಾರಿ ಈ ಹಿಂದೆ ನರೇಗಾ ಯೋಜನೆಯಲ್ಲಿ ಮಾಡಲಾಗಿತ್ತು. ಮಾಡಿರುವ ಕಾಮಗಾರಿಯನ್ನು ಮತ್ತೆ ಜಿಲ್ಲಾ ಪಂಚಾಯಿತಿ ವತಿಯಿಂದ ಮಾಡಿದ್ದು ಸರ್ಕಾರದ ಹಣ ಸೋರಿಕೆಯಾಗಿದೆ. ಜೊತೆಗೆ ಈ ಕಾಮಗಾರಿಯೂ ಗುಣಮಟ್ಟದಿಂದ ಕೂಡದೆ ಕಳಪೆಯಾಗಿದೆ. ಇಲ್ಲಿಗೆ ಕಲ್ಲು, ಮಣ್ಣು ಹಾಕಿ ಹೋಗಿದ್ದು, ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಬೇಕು. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮವಹಿಸಬೇಕು.
-ದೊರೆ, ಕಂದಹಳ್ಳಿ ನಿವಾಸಿ
* ಫೈರೋಜ್ ಖಾನ್