ಮಧುಗಿರಿ: ಸತತ 6 ದಶಕಗಳ ನಂತರ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಿದ್ದಲ್ಲದೆ, ಡಾಂಬರೀಕರಣ ಕೂಡ ಮಾಡಿಸಿದ ಶಾಸಕ ಎಂ.ವಿ.ವೀರಭದ್ರಯ್ಯಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ತಾಲೂಕಿನ ಗರಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚೀಲನಹಳ್ಳಿ – ಕಲ್ಲುವೀರನಹಟ್ಟಿ ಗ್ರಾಮಕ್ಕೆ ರಸ್ತೆಯೇ ಇರಲಿಲ್ಲ. 2017ರಲ್ಲಿ ಅಂದಿನ ಶಾಸಕ ಕೆ.ಎನ್.ರಾಜಣ್ಣ ರಸ್ತೆ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಿದ್ದರು. ಆದರೆ, ರೈತರು ರಸ್ತೆ ನಿರ್ಮಿಸಲು ಜಾಗ ನೀಡದ ಕಾರಣ ಅದು ನನೆಗುದಿಗೆ ಬಿದ್ದಿತ್ತು. ನಂತರ ಶಾಸಕರಾದ ಎಂ.ವಿ.ವೀರಭದ್ರಯ್ಯ ವಾಪಸ್ಸಾಗಿದ್ದ ಅನುದಾನ ಮತ್ತೆ ಮಂಜೂರು ಮಾಡಿಸಿ, ಸ್ಥಳೀಯ ರೈತರ ಮನವೊಲಿಸಿ ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟರು. ರಸ್ತೆಗೆ ಡಾಂಬರೀಕರಣ ಕೂಡ ಮಾಡಿಸಿದರು.
ತನ್ನೂರಿಗೆ ರಸ್ತೆ ಬೇಕೆಂದು ಹಠ ಹಿಡಿದು ಅಧಿಕಾರಿ ವಲಯದಲ್ಲಿ ಹೋರಾಟ ನಡೆಸಿದ್ದ ಗ್ರಾಪಂ ಸದಸ್ಯ ಶಂಕರ್‌ಯಾದವ್ ರಸ್ತೆ ನಿರ್ಮಾಣಕ್ಕೆ ಕಾರಣಕರ್ತರಾದ ಹಾಲಿ ಹಾಗೂ ಮಾಜಿ ಶಾಸಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಸ್ತೆಗೆ ಬೇಕಾದ ಭೂ ದಾಖಲೆ ಸರಿಪಡಿಸಲು ಹಿಂದಿನ ತಹಶೀಲ್ದಾರ್ ರವಿ, ಉಪ ತಹಶೀಲ್ದಾರ್ ಇನಾಯತ್, ಆರ್.ಐ.ನಾರಾಯಣಪ್ಪ, ಸಿಬ್ಬಂದಿ ಹಾಗೂ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುತ್ತಿರುವ ಸಂಸ್ಥೆಗೆ ಎರಡೂ ಗ್ರಾಮದ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.
60 ವರ್ಷದ ರಸ್ತೆ ಕನಸನ್ನು ಮಾಜಿ ಶಾಸಕ ಕೆ.ಎನ್. ರಾಜಣ್ಣ ನೆರವೇರಿಸಲು ಮುಂದಾಗಿದ್ದರು. ಆದರೆ, ಸಾಧ್ಯವಾಗ ಲಿಲ್ಲ. ಹಾಲಿ ಶಾಸಕ ವೀರಭದ್ರಯ್ಯನವರ ಕಾಳಜಿಯಿಂದ ರಸ್ತೆ ನಿರ್ಮಾಣವಾಗಿ ಡಾಂಬರೀಕರಣ ಕೂಡ ಕಂಡಿದೆ. ಅದಕ್ಕಾಗಿ ಇಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ.
-ಶಂಕರ್‌ಯಾದವ್, ಗ್ರಾಪಂ ಸದಸ್ಯ