ಅಣ್ಣಿಗೇರಿ (ಧಾರವಾಡ): ಇಲ್ಲಿಗೆ ಸಮೀಪದ ಕೋಳಿವಾಡ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗಿನ ಜಾವ ಲಾರಿ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮುಂಬೈ ಮೂಲದ ಆರು ಜನ ಸ್ಥಳದಲ್ಲೇ ಮೃತಪಟ್ಟು, 22 ಜನ ತೀವ್ರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ದಿನಕರ್ ವಿಠೊಬಾ ಮಾತ್ರೆ (78), ವಿಶ್ವನಾಥ ವಿಠೊಬಾ ಮಾತ್ರೆ (80), ರಮೇಶ ಜಯಪಾಲ್ (70), ಅಲ್ಕಾ ಸುಮೇಧಾ ಜೆಮ್‌ಶೇಡ್ಕರ (60), ಲಾಹೂ ಕೆಲೂಸ್ಕರ್ (65), ಸುಚಿತ್ರಾ ಚಂದ್ರಕಾಂತ ರಾಹುಲ್ (50) ಎಂದು ಗುರುತಿಸಲಾಗಿದೆ.
ತೀವ್ರವಾಗಿ ಗಾಯಗೊಂಡ 22 ಜನರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಕರೆದೊಯ್ಯಲಾಗುತ್ತಿದೆ.
ಕಳೆದ ಸೋಮವಾರ ಮುಂಬೈನಿಂದ ಪ್ರವಾಸಕ್ಕೆ ಬಂದ ಒಂದೇ ಕುಟುಂಬದ ಬಳಗ ಬೆಂಗಳೂರು ಮೂಲದ ಖಾಸಗಿ ಟ್ರಾವೆಲ್ಸ್‌ನಲ್ಲಿ ರಾಜ್ಯ ಪ್ರವಾಸ ಕೈಗೊಂಡಿತ್ತು. ಧರ್ಮಸ್ಥಳ, ಹೊರನಾಡು, ಬೇಲೂರು-ಹಳೆಬೀಡು ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಶನಿವಾರ ನಸುಕಿನ ವೇಳೆ ಹುಬ್ಬಳ್ಳಿಯಿಂದ ಹಂಪಿಗೆ ಹೊರಟಿತ್ತು.
ಮಂಗಳೂರಿನಿಂದ ಕೊಪ್ಪಳಕ್ಕೆ ಹೊರಟಿದ್ದ ಲಾರಿಯೊಂದು ಕೋಳಿವಾಡ ಕ್ರಾಸ್ ಬಳಿ ರಸ್ತೆ ಎಡಭಾಗಕ್ಕೆ ಕೆಟ್ಟು ನಿಂತಿತ್ತು. ಪ್ರವಾಸಿಗರನ್ನೊಳಗೊಂಡ ಬಸ್ ಚಾಲಕ, ನಿಂತಿದ್ದ ಲಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಬಲಕ್ಕೆ ತೆಗೆದುಕೊಂಡಾಗ ಎದುರಿನಿಂದ ಬಂದ ಲಾರಿಗೆ ಮುಖಾಮುಖೀ ಡಿಕ್ಕಿ ಹೊಡೆದಿದ್ದು, ಬಸ್ ರಸ್ತೆಯ ಬಲಭಾಗಕ್ಕೆ ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಬಸ್ ನುಜ್ಜುಗುಜ್ಜಾಗಿದೆ. ಎದುರಿನಿಂದ ಬಂದ ಕಬ್ಬಿಣದ ಕಚ್ಚಾವಸ್ತುಗಳಿಂದ ತುಂಬಿದ ಲಾರಿ ಹೊಸಪೇಟೆಯಿಂದ ಗೋವಾಕ್ಕೆ ಹೊರಟಿತ್ತು. ಬಸ್‌ನಲ್ಲಿದ್ದ ಪ್ರವಾಸಿಗರು ಶನಿವಾರ ರಾತ್ರಿಯೇ ಮುಂಬೈಗೆ ಹೊರಡಲು ರೈಲಿನ ಮುಂಗಡ ಟಿಕೆಟ್ ಕಾಯ್ದಿರಿಸಿದ್ದರು ಎಂದು ಹೇಳಲಾಗಿದೆ.