Advertisement

ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌: ರಿಷಭ್‌ ಪಂತ್‌ ಶತಕ ವೈಭವ

11:35 PM Jul 01, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ರಿಷಭ್‌ ಪಂತ್‌ ಅವರ ಅಮೋಘ ಶತಕ ಸಾಹಸದಿಂದ ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ಕುಸಿತದಿಂದ ಚೇತರಿಸಿಕೊಂಡಿದೆ.

Advertisement

ಇಂಗ್ಲೆಂಡಿನ ಯಾವುದೇ ದಾಳಿಗೂ ಬಗ್ಗದ ಪಂತ್‌ 89 ಎಸೆತಗಳಿಂದ ತಮ್ಮ 5ನೇ ಟೆಸ್ಟ್‌ ಶತಕ ಪೂರ್ತಿಗೊಳಿಸಿದರು. ಇವರಿಗೆ ರವೀಂದ್ರ ಜಡೇಜ ಅತ್ಯುತ್ತಮ ಬೆಂಬಲವಿತ್ತರು.

ಒಂದು ಹಂತದಲ್ಲಿ 98ಕ್ಕೆ 5 ವಿಕೆಟ್‌ ಕಳೆದುಕೊಂಡಿದ್ದ ಭಾರತ ಮತ್ತೆ ಹಾನಿಗೊಳಗಾಗದೆ 250 ರನ್‌ ಗಳಿಸಿ ಅಂತಿಮ ಅವಧಿಯ ಬ್ಯಾಟಿಂಗ್‌ ಮುಂದುವರಿಸುತ್ತಿದೆ.

ಪಂತ್‌ 102 ರನ್‌ (15 ಬೌಂಡರಿ, 1 ಸಿಕ್ಸರ್‌), ಜಡೇಜ 50 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಇವರಿಬ್ಬರು ಸೇರಿಕೊಂಡು 183 ಎಸೆತಗಳಿಂದ 6ನೇ ವಿಕೆಟಿಗೆ 152 ರನ್‌ ಪೇರಿಸಿದರು. ಇದು ಪಂತ್‌ ಅವರ 5ನೇ ಶತಕ. ವಿದೇಶದಲ್ಲಿ ದಾಖಲಾದ 4ನೇ ಸೆಂಚುರಿ.

Advertisement

ಆ್ಯಂಡಿ ಆರಂಭಿಕ ಆಘಾತ
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತಕ್ಕೆ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಆರಂಭಿಕ ಆಘಾತವಿಕ್ಕಿದರು. ಓಪನರ್‌ಗಳಾದ ಶುಭಮನ್‌ ಗಿಲ್‌ (17) ಮತ್ತು ಚೇತೇಶ್ವರ್‌ ಪೂಜಾರ (13) ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು. ಆಗ ಸ್ಕೋರ್‌ ಕೇವಲ 46 ರನ್‌ ಆಗಿತ್ತು. ಮಳೆಯಿಂದಾಗಿ ಬೇಗನೇ ಲಂಚ್‌ ಬ್ರೇಕ್‌ ಪಡೆದಾಗ ಈ ಮೊತ್ತ 53ಕ್ಕೆ ಏರಿತ್ತು.
ಗಿಲ್‌ ಆಕ್ರಮಣಕಾರಿ ಮೂಡ್‌ನ‌ಲ್ಲಿದ್ದರು. 24 ಎಸೆತ ಎದುರಿಸಿ 4 ಬೌಂಡರಿ ಸಿಡಿಸಿದರು.

ಪೂಜಾರ ಕೌಂಟಿಯಲ್ಲಿ ಮಿಂಚಿದರೂ ಇಲ್ಲಿ ವಿಫ‌ಲರಾದರು. ಈ ಸರಣಿಯ ಮೊದಲ ಇನ್ನಿಂಗ್ಸ್‌ನಲ್ಲಿ ಇವರ ಗಳಿಕೆ ಹೀಗಿದೆ: 4, 9, 1, 4 ಮತ್ತು ಇದೀಗ 13 ರನ್‌. ಇದಕ್ಕೆ 46 ಎಸೆತ ತೆಗೆದುಕೊಂಡರು (2 ಬೌಂಡರಿ). ಆ್ಯಂಡರ್ಸನ್‌ಗೆ ಅತ್ಯಧಿಕ 12 ಸಲ ವಿಕೆಟ್‌ ಒಪ್ಪಿಸಿದ “ದಾಖಲೆ’ಯನ್ನೂ ಸ್ಥಾಪಿಸಿದರು.

ಭೋಜನ ವಿರಾಮದ ಬಳಿಕ ಇಂಗ್ಲೆಂಡ್‌ ಬೌಲಿಂಗ್‌ ಇನ್ನಷ್ಟು ಹರಿತಗೊಂಡಿತು. ಇಲ್ಲಿ ಮ್ಯಾಥ್ಯೂ ಪಾಟ್ಸ್‌ ಅಪಾಯಕಾರಿಯಾಗಿ ಗೋಚರಿಸಿದರು. ನಿಲ್ಲುವ ಸೂಚನೆ ನೀಡಿದ್ದ ಹನುಮ ವಿಹಾರಿ 20 ರನ್‌ ಮಾಡಿ ಲೆಗ್‌ ಬಿಫೋರ್‌ ಬಲೆಗೆ ಬಿದ್ದರು. 53 ಎಸೆತ ನಿಭಾಯಿಸಿದ ಅವರು ಒಂದೇ ಬೌಂಡರಿಗೆ ಸಮಾಧಾನಪಟ್ಟರು.

ವಿರಾಟ್‌ ಕೊಹ್ಲಿ ಅವರದು ಮತ್ತೊಂದು ಫ್ಲಾಪ್‌ ಶೋ. ಕೇವಲ 11 ರನ್‌ ಮಾಡಿ ಪಾಟ್ಸ್‌ ಎಸೆತದಲ್ಲಿ ಬೌಲ್ಡ್‌ ಆಗಿ ವಾಪಸಾದರು. ಶ್ರೇಯಸ್‌ ಅಯ್ಯರ್‌ ಬಿರುಸಿನ ಲಯದಲ್ಲಿದ್ದರೂ ಇನ್ನಿಂಗ್ಸ್‌ ಬೆಳೆಸುವಲ್ಲಿ ವಿಫ‌ಲರಾದರು. ಅವರ ಗಳಿಕೆ 11 ಎಸೆತಗಳಿಂದ 15 ರನ್‌ (3 ಬೌಂಡರಿ). ಈ ವಿಕೆಟ್‌ ಆ್ಯಂಡರ್ಸನ್‌ ಪಾಲಾಯಿತು. ನೂರರೊಳಗೆ ಭಾರತದ ಅರ್ಧದಷ್ಟು ಮಂದಿಯ ಆಟ ಮುಗಿಯಿತು. ಮುಂದಿನದು ಪಂತ್‌-ಜಡೇಜ ಜೋಡಿಯ ವೈಭವ.

Advertisement

Udayavani is now on Telegram. Click here to join our channel and stay updated with the latest news.

Next