Advertisement

ಬಿಜೆಪಿಗೆ ಬಲ, ಕಾಂಗ್ರೆಸ್‌ಗೆ ಹಿನ್ನಡೆ

03:08 PM Sep 04, 2018 | |

ದಾವಣಗೆರೆ: ಜಿಲ್ಲೆಯ ಮೂರು ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಎರಡು ಕಡೆ ಅಧಿಕಾರ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಸ್ಪಷ್ಟ ಬಹುಮತ ಪಡೆದಿದೆ. ಒಂದು ಕಡೆ ಕಾಂಗ್ರೆಸ್‌, ಬಿಜೆಪಿ ಸಮಬಲ ಹೊಂದಿದ್ದು, ಇಲ್ಲಿ ಜೆಡಿಎಸ್‌ ನಿರ್ಣಾಯಕ ಪಾತ್ರ ವಹಿಸಲಿದೆ.

Advertisement

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ ಹಿನ್ನೆಡೆ ಅನುಭವಿಸಿದ್ದು, ಬಿಜೆಪಿಯ ಕಮಲ ನಳನಳಿಸುತ್ತಿದೆ. ಈ ಹಿಂದೆ ಕೈ ಹಿಡಿತದಲ್ಲಿದ್ದ ಜಗಳೂರು ಪಟ್ಟಣ ಪಂಚಾಯಿತಿ ಬಿಜೆಪಿ ತೆಕ್ಕೆಗೆ ಹೋಗಿದೆ. ಇನ್ನು ಹೊನ್ನಾಳಿ ಪಟ್ಟಣ ಪಂಚಾಯಿತಿಯಲ್ಲಿ ಈ ಬಾರಿಯೂ ಬಿಜೆಪಿಯ ಪಾರಮ್ಯ ಮುಂದುವರಿದಿದೆ. ಇನ್ನು ಕಾಂಗ್ರೆಸ್‌ ವಶದಲ್ಲಿದ್ದ ಚನ್ನಗಿರಿ ಪುರಸಭೆಯಲ್ಲಿ ರಾಷ್ಟ್ರೀಯ ಪಕ್ಷಗಳೆರಡು ಸಮಬಲ ಸಾಧಿಸಿದ್ದು, ಪ್ರಾದೇಶಿಕ ಪಕ್ಷ ಜೆಡಿಎಸ್‌ ಯಾರಿಗೆ ತನ್ನ ಬೆಂಬಲ ನೀಡಲಿದೆಯೋ ಅವರು ಅಧಿಕಾರದ ಗದ್ದುಗೆ ಏರಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಚನ್ನಗಿರಿ ಪುರಸಭೆಯಲ್ಲಿ ಜೆಡಿಎಸ್‌ ಕಾಂಗ್ರೆಸ್‌ಗೆ ಬೆಂಬಲಿಸಲಿದ್ದು, ಮೈತ್ರಿ ಆಡಳಿತ ಆರಂಭವಾಗಲಿದೆ.

ಜಿಲ್ಲೆಯ ಮೂರು ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 59 ವಾರ್ಡ್‌ ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 31,  ಗ್ರೆಸ್‌
20, ಜೆಡಿಎಸ್‌ 5 ಹಾಗೂ ಮೂವರು ಪಕ್ಷೇತರರು  ಜಯಗಳಿಸಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಮೂರೂವರೆ ತಿಂಗಳ ಹಿಂದೆ ನಡೆದ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲೂ ಜಿಲ್ಲೆಯ 8 ಸ್ಥಾನಗಳ ಪೈಕಿ 6ರಲ್ಲಿ ಗೆಲ್ಲುವ ಮೂಲಕ ಅಧಿಪತ್ಯ ಸ್ಥಾಪಿಸಿದ್ದ ಬಿಜೆಪಿ, ಈಗ ಮತ್ತೆ ಪಾರಮ್ಯ ಮೆರೆಯುವಲ್ಲಿ ಯಶಸ್ವಿಯಾಗಿದೆ.

18 ಸದಸ್ಯ ಬಲದ ಜಗಳೂರು ಪಟ್ಟಣ ಪಂಚಾಯಿತಿಯಲ್ಲಿ 11 ಸ್ಥಾನಗಳಲ್ಲಿ ಜಯಗಳಿಸಿರುವ ಬಿಜೆಪಿಗೆ ಅಧಿಕಾರಕ್ಕೇರಲು ಯಾರ ನೆರವೂ ಬೇಕಿಲ್ಲ. ಕಳೆದ ಬಾರಿ 15 ವಾರ್ಡ್‌ಗಳಿದ್ದ ಈ ಪಟ್ಟಣ ಪಂಚಾಯಿತಿಯಲ್ಲಿ 12ರಲ್ಲಿ ಜಯಗಳಿಸಿದ್ದ ಕಾಂಗ್ರೆಸ್‌ ಯಾವ ಅಡೆತಡೆಗಳಿಲ್ಲದೆ, 5 ವರ್ಷ ಆಡಳಿತ ನಡೆಸಿತ್ತು.

ವಾರ್ಡ್‌ಗಳ ಪುನರ್‌ ವಿಂಗಡಣೆಯಿಂದ ಈ ಬಾರಿ ವಾರ್ಡ್‌ಗಳ ಸಂಖ್ಯೆ 18ಕ್ಕೇರಿತ್ತು. ಕಾಂಗ್ರೆಸ್‌ ಈ ಬಾರಿ ಕೇವಲ 5 ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯವಾಗಿದೆ. ಜೆಡಿಎಸ್‌ 2 ವಾರ್ಡ್‌ಗಳಲ್ಲಿ ಗೆದ್ದಿದೆ. ಹೊನ್ನಾಳಿ ಪಟ್ಟಣ ಪಂಚಾಯಿತಿಯಲ್ಲಿ ಈ ಬಾರಿಯೂ ಬಿಜೆಪಿ ಪಾರಮ್ಯ ಮುಂದುವರಿದಿದೆ. 18 ಸದಸ್ಯ ಬಲದ ಈ ಪಟ್ಟಣ ಪಂಚಾಯಿತಿಯಲ್ಲಿ 10 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರೆ, ಕಾಂಗ್ರೆಸ್‌ 5 ವಾರ್ಡ್‌ಗಳಲ್ಲಿ ವಿಜಯ ಸಾಧಿಸಿದೆ. ಮೂವರು ಪಕ್ಷೇತರರು ಚುನಾಯಿತರಾಗಿದ್ದಾರೆ.

Advertisement

ಇನ್ನು ಚನ್ನಗಿರಿ ಪುರಸಭೆಯಲ್ಲಿ ಅತಂತ್ರ ಸ್ಥಿತಿ ಸೃಷ್ಟಿಯಾಗಿದೆ. 23 ಸದಸ್ಯ ಬಲದ ಈ ಪುರಸಭೆಯಲ್ಲಿ ಕಾಂಗ್ರೆಸ್‌, ಬಿಜೆಪಿ ತಲಾ 10 ವಾರ್ಡ್‌ಗಳಲ್ಲಿ ವಿಜಯದ ಪತಾಕೆ ಹಾರಿಸಿವೆ. ಜೆಡಿಎಸ್‌ ಮೂರು ವಾರ್ಡ್‌ಗಳಲ್ಲಿ ಆಯ್ಕೆಯಾಗಿದ್ದರೂ ನಿರ್ಣಾಯಕ ಸ್ಥಾನದಲ್ಲಿವೆ. ಈ ಪಕ್ಷ ಯಾರಿಗೆ ಕೈ ಎತ್ತಲಿದೆಯೋ ಆ ಪಕ್ಷದವರು ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ. ಈಗಾಗಲೇ ಜೆಡಿಎಸ್‌ನ ಮೂವರೂ ಸದಸ್ಯರು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ವರಿಷ್ಠರ ನಿರ್ಧಾರಕ್ಕೆ ತಾವು ಬದ್ಧ ಎಂಬುದಾಗಿ ಹೇಳಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಇರುವುದರಿಂದ ಚನ್ನಗಿರಿ ಪುರಸಭೆಯಲ್ಲೂ ಆ ಮೈತ್ರಿ ಬಹತೇಕ ಮುಂದುವರಿಯುವ ಸಾಧ್ಯತೆ ಇದೆ.

ಕೇವಲ ಮೂರೂವರೆ ತಿಂಗಳ ಹಿಂದೆ ಜಿಲ್ಲೆಯಲ್ಲಿದ್ದ ರಾಜಕೀಯ ಪರಿಸ್ಥಿತಿ ಈಗಿಲ್ಲ. ರಾಜ್ಯ ವಿಧಾನಸಭೆಗೆ ಮೇ ತಿಂಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲೂ ರಾಜಕೀಯ ಬದಲಾವಣೆ ಆಗಿದೆ. ಬದಲಾವಣೆ ಜಗದ ನಿಯಮ…. ಎನ್ನುವಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಅದೇ ಗಾಳಿ ಬೀಸಿದೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕೋಟೆ ಛಿದ್ರ ಮಾಡಿದ್ದ ಬಿಜೆಪಿ ಅಧಿಪತ್ಯ ಸ್ಥಾಪಿಸಿತ್ತು. ಪಕ್ಷದ ಜತೆಗೆ ವೈಯಕ್ತಿಕ ವರ್ಚಸ್ಸು ಪ್ರಧಾನವಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಬಲ ವೃದ್ಧಿಯಾಗಿದೆ. ಇದು ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂಬುದಾಗಿ ಪರಿಗಣಿಸಲಾಗದಿದ್ದರೂ ಕಮಲ ಪಡೆಯಲ್ಲಿ ಸ್ಥೈರ್ಯ ಹೆಚ್ಚುವಂತೆ ಮಾಡಿದೆ ಎಂದು ಹೇಳಬಹುದು.

ಲೋಕಸಭೆಗೆ ದಿಕ್ಸೂಚಿ..
ವಿಧಾನಸಭಾ ಚುನಾವಣೆಯಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಜನರು ಬಿಜೆಪಿಗೆ ಆಶೀರ್ವದಿಸಿದ್ದಾರೆ. ಹೊನ್ನಾಳಿ, ಜಗಳೂರು ಪಟ್ಟಣ ಪಂಚಾಯತ್‌ನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆತಿದೆ. ಚನ್ನಗಿರಿಯಲ್ಲಿ ಅತಂತ್ರ ಸ್ಥಿತಿ ಇದೆ. ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್‌ -ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿಲ್ಲ. ಹಾಗಾಗಿ ನಮ್ಮೊಂದಿಗೆ ಕೈ ಜೋಡಿಸುವ ವಿಶ್ವಾಸ ಇದೆ. ವಿಧಾನಸಭಾ ಚುನಾವಣೆಯಂತೆ ಲೋಕಸಭಾ ಚುನಾವಣೆಯಲ್ಲೂ ಅತ್ಯಧಿಕ ಮತಗಳಿಂದ ಗೆಲ್ಲುತ್ತೇವೆ.
 ಯಶವಂತರಾವ್‌ ಜಾಧವ್‌ ಬಿಜೆಪಿ ಜಿಲ್ಲಾ ಅಧ್ಯಕ್ಷ

ನಾವಿಲ್ಲದೆ ಅಧಿಕಾರ ಸಿಗದು..
ಚನ್ನಗಿರಿ ಪುರಸಭೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ರಾಷ್ಟ್ರೀಯ ಪಕ್ಷಗಳು ಹಣದ ಹೊಳೆ ಹರಿಸಿದ್ದರ ಪರಿಣಾಮ ಮೂರು ವಾರ್ಡ್‌ಗಳಲ್ಲಿ ಗೆಲ್ಲುವ ಮೂಲಕ ನಿರ್ಣಾಯಕ ಸ್ಥಾನದಲ್ಲಿದ್ದೇವೆ. ಜೆಡಿಎಸ್‌ ಇಲ್ಲದೆ ಯಾವ ರಾಷ್ಟ್ರೀಯ ಪಕ್ಷಗಳೂ ಅಧಿಕಾರದ ಚುಕ್ಕಾಣಿ ಹಿಡಿಯುವಂತಿಲ್ಲ. ಮೂರು ಸ್ಥಾನಗಳಿದ್ದರೂ ಚನ್ನಗಿರಿಯಲ್ಲಿ ಅಧಿಕಾರ ಹಿಡಿಯುತ್ತೇವೆ. ರಾಜ್ಯದಲ್ಲಿ ಜೆಡಿಎಸ್‌ ನೇತೃತ್ವದ ಮೈತ್ರಿ ಸರ್ಕಾರ ಇದೆ. ಚನ್ನಗಿರಿ ಅಭಿವೃದ್ಧಿ ಮಾಡಲು ಹೆಚ್ಚಿನ ಅವಕಾಶ ಇದೆ. ಏನೇ ಆದರೂ ಪಕ್ಷದ ವರಿಷ್ಠರ ತೀರ್ಮಾನ, ಮಾರ್ಗದರ್ಶನದಂತೆ ನಡೆದುಕೊಳ್ಳುತ್ತೇವೆ.
 ಬಿ. ಚಿದಾನಂದಪ್ಪ, ಜೆಡಿಎಸ್‌ ಜಿಲ್ಲಾ ಅಧ್ಯಕ್ಷ

ಎನ್‌.ಆರ್‌.ನಟರಾಜ್‌

Advertisement

Udayavani is now on Telegram. Click here to join our channel and stay updated with the latest news.

Next