Advertisement

ಅಡೆತಡೆಗಳ ಮಧ್ಯೆಯೂ ಸಮೃದ್ಧ ಭತ್ತದ ಕೃಷಿ

10:38 PM May 21, 2020 | Sriram |

ಉಡುಪಿ/ ಪಡುಬಿದ್ರಿ: ಹಲವು ಅಡೆತಡೆಗಳ ಮಧ್ಯೆಯೂ ಜಿಲ್ಲೆಯಲ್ಲಿ ಭತ್ತದ ಬೆಳೆ ಸಮೃದ್ಧವಾಗಿ ಬೆಳೆಸಲಾಗುತ್ತಿದೆ. ಭತ್ತದ ಹಂಗಾಮಿನಲ್ಲಿ ಕೃಷಿ ಚಟುವಟಿಕೆ ಆರಂಭಗೊಂಡಿದು ಇಳುವರಿ ಉತ್ತಮವಾಗಿಸಲು, ರೋಗ ಬಾಧೆಗಳು ಕಮ್ಮಿಯಾಗಿ ನಿರ್ವಹಣ ವೆಚ್ಚ ಸರಿದೂಗಿಸಲು ತಳಿಗಳ ಆಯ್ಕೆ ಮಾಡಬೇಕಿದೆ.

Advertisement

ಮೂರು ಪ್ರಮುಖ ತಳಿಗಳು
ಜಿಲ್ಲೆಯಲ್ಲಿ 2.9 ಲಕ್ಷ ಮಂದಿ ಕೃಷಿಕರಿದ್ದಾರೆ. ಈ ಪೈಕಿ 54 ಸಾವಿರ ಮಂದಿ 36 ಸಾವಿರ ಹೆಕ್ಟೇರ್‌ ಭೂಮಿಯಲ್ಲಿ ಭತ್ತ ಬೆಳೆಯುತ್ತಾರೆ. ಕರಾವಳಿ ಭಾಗದಲ್ಲಿ ಪ್ರಮುಖವಾಗಿ ಎಂ 4, ಉಮಾ ಮತ್ತು ಜ್ಯೋತಿ ಈ ಮೂರು ತಳಿಗಳ ಭತ್ತವನ್ನು ಕೃಷಿಕರು ಬೆಳೆಯುತ್ತಾರೆ.

ತಳಿಗಳ ವಿಶೇಷತೆಗಳು
ಎಂ ಒ4 ತಳಿ ದೀರ್ಘಾವಧಿ ಬೆಳೆ. ಇದು ಕಟಾವಿಗೆ ಬರಲು 135ರಿಂದ 150 ದಿನಗಳನ್ನು (4ರಿಂದ 4ವರೆ ತಿಂಗಳು) ತೆಗೆದುಕೊಳ್ಳುತ್ತದೆ. ಇನ್ನು ಬೈಲುಗದ್ದೆಗಳಲ್ಲಿ ಬೆಳೆಸುವ ಅಲ್ಪಾವಧಿ ಉಮಾ ತಳಿ 120ರಿಂದ 125 (ಸುಮಾರು 4ರಿಂದ 4ವರೆ ತಿಂಗಳು) ದಿನಗಳ ಬೆಳೆಯಾಗಿದೆ. ಜ್ಯೋತಿ ತಳಿ 150 ದಿನಗಳ ಬೆಳೆಯಾಗಿದೆ. ಇದು ಹಿಂಗಾರಿಗೆ ಸೂಕ್ತವಾದ ಬೆಟ್ಟಗದ್ದೆಗಳ ಅಲ್ಪಾವಧಿ ಬೆಳೆಯಾಗಿದೆ. ಜುಲೈ ತಿಂಗಳಲ್ಲಿ ಇದನ್ನು ಬೆಳೆಯುತ್ತಾರೆ. ಇವು ಮೂರು ತಳಿಗಳು ಕೂಡ ಕೆಂಪಕ್ಕಿಯಾಗಿವೆ.

ಭತ್ತಕ್ಕೆ ನಾನಾ ಕೀಟಬಾಧೆ
ಭತ್ತಕ್ಕೆ ರೋಗ‌ ಬಾಧೆಗಳು ತಗಲುವುದು ಕಡಿಮೆ. ಹೆಚ್ಚಾಗಿ ಕೀಟ ಭಾದೆಗಳು ಕಂಡುಬರುತ್ತವೆ. ತೆನೆ ಗೂಡುಕಟ್ಟುವುದು, ಕೊಳವೆ ಹುಳ, ಎಲೆ ಸುರುಳಿ ಹುಳ ಬಾಧೆಗಳು ಗೋಚರಿಸುತ್ತವೆ. ಭತ್ತದ ಬೆಳೆಗೆ ಕಾಂಡ ಕೊರೆಯುವ ಹುಳು ಬಾಧೆ ಇದ್ದರೂ ಅವುಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ಭತ್ತದ ಬೆಳೆಯಲ್ಲಿ ಬೆಂಕಿ ರೋಗ, ಎಲೆ ಒಣಗುವ ರೋಗಗಳು ಕೆಲವೊಮ್ಮೆ ಕಂಡುಬರುತ್ತದೆ.

ಕೀಟನಾಶಕ ದ್ರಾವಣ ಬಳಕೆ
ಕೀಟಬಾಧೆ ನಿವಾರಣೆಗೆ ನೀರಿನ ಜತೆ ಕ್ಲೋರೋಫೈರಿಫಾನ್‌ ಔಷಧ ಸಿಂಪಡಣೆ ಮಾಡಬೇಕು. ಜಮೀನಿನಲ್ಲಿ ನೀರನ್ನು ಖಾಲಿ ಮಾಡಿದ ಬಳಿಕ ಔಷಧ ಸಿಂಪಡಿಸಬೇಕು.

Advertisement

ರಂಜಕಯುಕ್ತ ಗೊಬ್ಬರ ಬಳಕೆ
ಭತ್ತದ ಕೃಷಿಕರು ಯೂರಿಯಾ, ಪೊಟ್ಯಾಷ್‌, ಅಮೋನಿಯಂ, ಸಲ್ಪೆಟ್‌ ರಂಜಕಯುಕ್ತ ರಸಗೊಬ್ಬರಗಳನ್ನು ಮೇಲು ಗೊಬ್ಬರವಾಗಿ ಬಳಕೆ ಮಾಡಬೇಕು. ಭತ್ತದ ಬೀಜ ಬಿತ್ತನೆ ವೇಳೆ ಬೀಜದ ಜತೆಗೆ ಕೀಟನಾಶಕ ದ್ರಾವಣವನ್ನು ಮಿಶ್ರಣಗೊಳಿಸಿ ಬೀಜ ಬಿತ್ತನೆ ಮಾಡಬೇಕು.

ಬೇಕಾದ ಬೀಜ ಬಿತ್ತನೆ ಸಿಗುತ್ತಿಲ್ಲ
ಪ್ರಸಕ್ತ ವರ್ಷ ಕೃಷಿ ಇಲಾಖೆ ಬೀಜ ನಿಗಮಕ್ಕೆ 2,350 ಕಿಂಟ್ವಾಲ್‌ ಬೀಜಕ್ಕೆ ಬೇಡಿಕೆ ಸಲ್ಲಿಸಿತ್ತು, ಆದರೆ ದೊರಕಿದ್ದು 1,745 ಕಿಂಟ್ವಾಲ್‌ ಭತ್ತದ ಬೀಜ. ಈ ಪೈಕಿ ಕೋಟ 320 ಕ್ವಿಂಟಾಲ್‌, ಬ್ರಹ್ಮಾವರ 255 ಕ್ವಿಂಟಾಲ್‌, ಉಡುಪಿ 130 ಕ್ವಿಂಟಾಲ್‌, ಕಾಪು 275 ಕ್ವಿಂಟಾಲ್‌, ಕುಂದಾಪುರ 195 ಕ್ವಿಂಟಾಲ್‌, ಬೈಂದೂರು 295, ಕ್ವಿಂಟಾಲ್‌, ವಂಡ್ಸೆ 170, ಕ್ವಿಂಟಾಲ್‌, ಕಾರ್ಕಳ 50, ಕ್ವಿಂಟಾಲ್‌, ಅಜೆಕಾರು 50 ಕಿಂಟ್ವಾಲ್‌ಗ‌ಳಷ್ಟು ಭತ್ತದ ಬೀಜ ವಿತರಣೆಗೆ ನೀಡಲಾಗಿದೆ.

ಬಿತ್ತನೆ ಬೀಜ ರೈತರಿಗೆ ವಿತರಣೆ
ಕರಾವಳಿ ಭಾಗದಲ್ಲಿ ಪ್ರಮುಖವಾಗಿ ಮೂರು ತಳಿಗಳ ಭತ್ತದ ಬೆಳೆಯನ್ನು ಬೆಳೆಯಲಾಗುತ್ತದೆ. ಮೂರು ಕೂಡ ಕೆಂಪು ಅಕ್ಕಿಯ ಭತ್ತ. ಸಾಮಾನ್ಯವಾಗಿ ರೋಗಗಳು ತೆನೆ ಹೂ ಬಿಡುವ ಮತ್ತು ಕಟಾವು ಸಂದರ್ಭ ಕಂಡುಬರುತ್ತದೆ. ಬೀಜ ಬಿತ್ತುವ ಸಂದರ್ಭ ಮುಂಜಾಗ್ರತೆಯಾಗಿ ಕೆಲವು ದ್ರಾವಣ ಮಿಶ್ರಗೊಳಿಸಿ ಬೀಜ ಬಿತ್ತಿ ಎಚ್ಚರಿಕೆ ವಹಿಸಲಾಗುತ್ತದೆ. ಈಗ ಸರಬರಾಜು ಆದಂತಹ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ. ಇನ್ನಷ್ಟು ಬಿತ್ತನೆ ಬೀಜ ಪೂರೈಕೆಯಾಗಲಿದೆ.
– ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು ಕೃಷಿ ಇಲಾಖೆ, ಉಡುಪಿ

ಕೀಟನಾಶಕಗಳ ದ್ರಾವಣ ಸಿಂಪಡಣೆ
ಭತ್ತಕ್ಕೆ ರೋಗ ಬಾಧಿಸುವುದು ಕಡಿಮೆ. ಕಟಾವಿನ ಹೊತ್ತಲ್ಲಿ ಕೀಟನಾಶಕ ಬಾಧೆ ಹೆಚ್ಚು ಕೃಷಿಕರನ್ನು ಕಾಡುತ್ತವೆ. ಸೂಕ್ತ ಕೀಟನಾಶಕಗಳ ದ್ರಾವಣವನ್ನು ಸಿಂಪಡಣೆ ಮಾಡುವುದರಿಂದ ಕೀಟ , ರೋಗವನ್ನು ತಡೆಯಬಹುದು. ಬೆಂಕಿ ರೋಗ ತಗಲದಂತೆ ಹೆಚ್ಚಿನ ಮುನ್ನೆಚ್ಚರಿಕೆ ಅಗತ್ಯ.
ಸತೀಶ್‌, ಕೃಷಿ ಅಧಿಕಾರಿ, ಕೃಷಿ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next