Advertisement
ತುಮಕೂರು: ಸಿದ್ಧಗಂಗಾ ಮಠಕ್ಕೆ ಸರ್ಕಾರ ನೀಡುತ್ತಿದ್ದ ಅಕ್ಕಿ ಮತ್ತು ಗೋಧಿಯನ್ನು ಈಗ ಸ್ಥಗಿತಗೊಳಿಸಿದ್ದು, ಇನ್ನೆರಡು ತಿಂಗಳಲ್ಲಿ ಅಕ್ಕಿಯನ್ನು ಮಠಕ್ಕೆ ಸರಬರಾಜು ಮಾಡದಿದ್ದರೆ, ಮಠದಲ್ಲಿ ನಿತ್ಯವೂ 10 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಪ್ರಸಾದ ನೀಡಲು ತೊಂದರೆ ಎದುರಾಗಲಿದೆ ಎನ್ನುವ ಆತಂಕ ಈಗ ಮೂಡಿದೆ.
Related Articles
Advertisement
ಶ್ರೀ ಕ್ಷೇತ್ರಕ್ಕೆ 600 ವರ್ಷಗಳ ಇತಿಹಾಸ: ಶ್ರೀ ಕ್ಷೇತ್ರಕ್ಕೆ 600 ವರ್ಷಗಳ ಇತಿಹಾಸವಿದೆ. ಶ್ರೀ ಅಟವಿ ಸ್ವಾಮಿಗಳು ಶ್ರೀ ಕ್ಷೇತ್ರದಲ್ಲಿ 1850ರಲ್ಲಿ ಶಿವಯೋಗಾನುಷ್ಠಾನವನ್ನು ನಡೆಸಿ ಅಂದು ಅಚ್ಚಿದ ಒಲೆ ಇಂದಿಗೂ ಆರಿಲ್ಲ. ನಿತ್ಯ ದಾಸೋಹ ನಡೆಯುತ್ತಲೇ ಇದೆ. ಮಠಕ್ಕೆ ಬಂದವರು ಹಸಿದು ಹೋಗದೇ ಪ್ರಸಾದ ಸೇವಿಸಿಯೇ ಹೋಗುತ್ತಾರೆ.
ಭಿಕ್ಷಾಟಣೆ ಮಾಡಿದ್ದ ಶ್ರೀಗಳು: ಮಠಕ್ಕೆ ರಾಜ್ಯದ ವಿವಿಧ ಬಾಗಗಳಿಂದ ಭಕ್ತರು ದವಸ ಧಾನ್ಯ, ತರಕಾರಿ, ತೆಂಗಿನಕಾಯಿ ಸೇರಿದಂತೆ ಪ್ರಸಾದಕ್ಕೆ ಬೇಕಾದ ಸಾಮಗ್ರಿಗಳನ್ನು ಕಳಿಸುತ್ತಾರೆ. ಈ ಹಿಂದೆ ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ಭಿಕ್ಷಾಟನೆ ಮಾಡಿ ಮಠ ಬೆಳೆಸಿ, ಮಠದ ವಿದ್ಯಾರ್ಥಿಗಳ ಊಟಕ್ಕೆ ತೊಂದರೆಯಾಗದಂತೆ ಗಮನಹರಿಸಿದ್ದರು. ಇದೇ ಸಂಪ್ರದಾಯವನ್ನು ಮುಂದುವರೆಸಿದ ಶ್ರೀ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಜಾತ್ರೆಯ ವೇಳೆಯಲ್ಲಿ ಜೋಳಿಗೆ ಹಿಡಿದು ಭಿಕ್ಷಾಟನೆ ಮಾಡುತ್ತಾರೆ.
ತುಮಕೂರು ಜಿಲ್ಲೆಯಲ್ಲಿ ಈ ಹಿಂದೆ ಭೀಕರ ಬರಗಾಲದ ಪರಿಸ್ಥಿತಿಯಲ್ಲಿ ಕೂಡ ಶ್ರೀ ಮಠದಲ್ಲಿ ಅಂದು ಕರ್ನಾಟಕ ರತ್ನ, ಲಿಂ.ಡಾ. ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ಭಿಕ್ಷಾಟನೆ ಮಾಡಿ ಮಠಕ್ಕೆ ಹಸಿದು ಬರುವ ಭಕ್ತರಿಗೆ ನಿತ್ಯ ಪ್ರಸಾದ ವ್ಯವಸ್ಥೆ ಮಾಡಿದ್ದರು. ಇಂಥ ಮಠಕ್ಕೆ ರಾಜ್ಯ ಸರ್ಕಾರ 1996ರಿಂದ 2017ರ ವರೆಗೆ ಅಕ್ಕಿಯನ್ನು 1 ಕ್ವಿಂಟಲ್‌ಗೆ 600 ರೂ.ನಂತೆ 735 ಕ್ವಿಂಟಲ್ ಅಕ್ಕಿಯನ್ನು ಸರಬರಾಜು ಮಾಡುತ್ತಿತ್ತು.
ಆದರೆ, 2018-19ರಿಂದ ಮಠಕ್ಕೆ ಉಚಿತವಾಗಿ 735 ಕ್ವಿಂಟಲ್ ಅಕ್ಕಿ 350 ಕ್ವಿಂಟಲ್ ಗೋಧಿ ನೀಡುತ್ತಾ ಬಂದಿತ್ತು. ಕಳೆದ ಡಿಸೆಂಬರ್ ತಿಂಗಳಿನಿಂದ ಮಠಕ್ಕೆ ನೀಡುತ್ತಿದ್ದ ಅಕ್ಕಿ, ಗೋಧಿಯನ್ನು ಸರ್ಕಾರ ನಿಲ್ಲಿಸಿದೆ. ಶ್ರೀಗಳು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಎರಡು ತಿಂಗಳಿನಿಂದ ಮಠಕ್ಕೆ ಸರಬರಾಜು ಸ್ಥಗಿತಗೊಂಡಿದ್ದರೂ, ಮಕ್ಕಳಿಗೆ ಮತ್ತು ಭಕ್ತರಿಗೆ ತೊಂದರೆಯಾಗದೇ ಮಠದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದಾರೆ.
ಜಾತ್ಯತೀತವಾಗಿ ಎಲ್ಲಾ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ನೀಡುತ್ತಿರುವ ಅಕ್ಕಿ, ಗೋಧಿಯನ್ನು ಸರ್ಕಾರ ನಿಲ್ಲಿಸಿರುವುದು ಮಠದಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ತೊಂದರೆಯುಂಟಾಗಲಿದೆ.
ಶ್ರೀ ಸಿದ್ಧಗಂಗಾ ಮಠಕ್ಕೆ ಉಚಿತವಾಗಿ ಸರ್ಕಾರ ನೀಡುತ್ತಿದ್ದ ಅಕ್ಕಿ, ಗೋಧಿಯನ್ನು ತಡೆ ಹಿಡಿದಿರೋದು ನಿಜ. ಉತ್ತರ ಭಾ ರತದಲ್ಲಿ ಈ ಯೋಜನೆ ದುರುಪಯೋಗ ಆಗುತ್ತಿದೆ ಎಂಬ ಆರೋಪವಿದೆ. ಹಾಗಾಗಿ ಕಲ್ಯಾಣ ಸಂಸ್ಥೆ ಯೋಜನೆಯಲ್ಲಿ ಉಚಿತವಾಗಿ ನೀಡುತ್ತಿದ್ದ ಅಕ್ಕಿಯನ್ನು ಕಳೆದ ಎರಡು ತಿಂಗಳಿನಿಂದ ನಿಲ್ಲಿಸಲಾಗಿದೆ. ಸುಮಾರು 735 ಕ್ವಿಂಟಲ್ ಅಕ್ಕಿ, 350 ಕ್ವಿಂಟಲ್ ಗೋಧಿ ಬರುತಿತ್ತು. ಕಳೆದ ಎರಡು ವರ್ಷದಿಂದ ಉಚಿತವಾಗಿ ಕೊಡುತ್ತಿದ್ದರು. ಪುನಃ ಆರಂಭಿಸುವಂತೆ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಕೇಂದ್ರಕ್ಕೂ ಮನವಿ ಮಾಡಲಾಗಿದ್ದು, ಸದ್ಯಕ್ಕೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ತೊಂದರೆಯಾಗಬಹುದು. -ಶ್ರೀ ಸಿದ್ಧಲಿಂಗ ಮಹಾ ಸ್ವಾಮೀಜಿ, ಸಿದ್ಧಗಂಗಾ ಮಠಾಧ್ಯಕ್ಷರು