“ಪಂಡಿತಾಃ’ ಶಬ್ದವನ್ನು ಹೇಳುವ ಬದಲು “ವಿದುಷಃ’ ಎಂದು ಹೇಳಬಹುದಿತ್ತಲ್ಲ? “ಪಂಡಾ ಅಸ್ಯ ಸಂಜಾತಾಃ’ = ಪಂಡಿತ= ಪ್ರಬುದ್ಧ (ಮೆಚ್ಯೂರ್ಡ್). ಕನ್ನಡದಲ್ಲಿ ಮಾಗಿದ, ಪಾಕಕ್ಕೆ ಬಂದ ಎಂದರ್ಥ. ವಿದ್ವಾಂಸನೆಂದರೆ ತಿಳಿದವರು ಎಂದರ್ಥ. ವಿದ್ವಾಂಸನಿಗೆ ಮೆಚ್ಯೂರಿಟಿ ಇರುವುದಿಲ್ಲ. ಉಪನ್ಯಾಸ ಮಾಡಿ ಎಂದರೆ ನಿಲ್ಲಿಸುವುದೇ ಇಲ್ಲ ಇಂಥವರು. ಇವರಿಗೆ ಸಮಯಪ್ರಜ್ಞೆ ಇರುವುದಿಲ್ಲ. ಇವರು ವಿದ್ವಾಂಸರು ಎಂದು ತಿಳಿದುಕೊಂಡಿದ್ದಾರೆ. ಮಾಗಿದವರಿಗೆ ಶೋಕವೇ ಆಗುವುದಿಲ್ಲ. ತಿಳಿದುಕೊಳ್ಳುವುದು ಬೇರೆ, ಸಾಕ್ಷಾತ್ಕರಿಸುವುದು ಬೇರೆ. ತಿಳಿದುಕೊಳ್ಳುವುದೆಂದರೆ ಶಬ್ದಜನ್ಯ ಜ್ಞಾನವಷ್ಟೆ. ವಿಷಯ ಗೊತ್ತಿದ್ದರೂ ಪ್ರತ್ಯಕ್ಷದರ್ಶನವಾಗ ಮಾತ್ರ ಅದರ ಅರಿವೇ ಬೇರೆ. ಪಂಡಿತರಿಗೆ ನಿಜವಾದ ಸಾವು ಬರುವುದು ಮೊದಲೇ ಗೊತ್ತಿರುತ್ತದೆ. ಇವರು ಜ್ಞಾನದ ಸಾಕ್ಷಾತ್ಕಾರವನ್ನು ಪಡೆದವರೆಂದು ಅರ್ಥ. ಇಂತಹವರು ದುಃಖಪಡುವುದಿಲ್ಲ. ಅರ್ಜುನ ಪಂಡಿತರಂತೆ ಮಾತನಾಡುತ್ತಿದ್ದ, ದಡ್ಡರಂತೆಯೂ ಮಾತನಾಡುತ್ತಿದ್ದ. ನಿಜವಾಗಿ ದಡ್ಡರಾದವರು ಮಾತ್ರ ಪಂಡಿತರಂತೆ ನಟನೆ ಮಾಡುತ್ತಾರೆ. ಇಲ್ಲವಾದರೆ ನಟನೆ ಮಾಡುವ ಅಗತ್ಯವೇ ಇಲ್ಲ. “ಪ್ರಜ್ಞಾವಾದಾ’ ಅಂದರೆ ಪ್ರಜ್ಞ -ಅವಾದ, ಪ್ರಜ್ಞಾವಾದಕ್ಕೆ ವಿರುದ್ಧ ಎಂದೂ ಅರ್ಥವಿದೆ. ಹುಟ್ಟಿದ ಅಂದಾಗ ಸಾವಿನ ಕಡೆಗೆ ನಡೆಯಲು ಶುರು ಮಾಡಿದ ಎಂದರ್ಥ. ಸಾವಿನ ಕಡೆಗೆ ನಡೆಯುವಾಗ ದುಃಖ ಪಡದವ, ಸಾವನ್ನು ತಲುಪಿದ ಅನಂತರ ದುಃಖಪಡುವುದೇಕೆ?
–
ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811