ಹೊನ್ನಾವರ: ತಾಲೂಕಿನ ಶರಾವತಿ ಎಡಬಲ ದಂಡೆಯಲ್ಲಿ ನೆರೆ ಕಂಟಕ ಸಮಸ್ಯೆ ತಲೆದೋರಿದ ಹಿನ್ನೆಲೆಯಲ್ಲಿ ಶಾಸಕ ಸುನೀಲ್ ನಾಯ್ಕ ಶರಾವತಿ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಗಂಭೀರತೆಯನ್ನು ಪರಿಶೀಲಿಸಿದರು. ಈಗ ಮಳೆಯ ಪ್ರಮಾಣ ಅಧಿ ಕವಾಗಿದ್ದು ಅಲ್ಲದೇ ಜಲಾಶಯದಲ್ಲಿ ಹೆಚ್ಚುವರಿ ನೀರು ಭರ್ತಿಯಾಗಿ ಹೊರಬಿಡುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಭೇಟಿ ನೀಡಿದ ಶಾಸಕ ಸುನಿಲ್ ನಾಯ್ಕ ಕೆಪಿಸಿ ಅಧಿಕಾರಿಗಳೊಂದಿಗೆ ಪರಿಸ್ಥಿತಿಯ ಸೂಕ್ಷ್ಮತೆ ಬಗ್ಗೆ ಚರ್ಚಿಸಿದರು.
ಕಾರ್ಯನಿರ್ವಾಹಕ ಅಭಿಯಂತರ ಶ್ರಿಲಕ್ಷ್ಮಿ ಹಾಗೂ ಕೆಪಿಸಿ ಅಧೀಕ್ಷಕ ಅಭಿಯಂತರ ಚೈತನ್ಯ ಪ್ರಭು, ಶಾಸಕರಿಗೆ ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರಿನ ಮಟ್ಟ ಹಾಗೂ ನೀರು ಹೊರ ಬಿಡುವ ಪ್ರಮಾಣದ ಬಗ್ಗೆ ಮಾಹಿತಿ ನೀಡಿದರು. ಕೆಪಿಸಿ ಅಧೀಕ್ಷಕ ಅಭಿಯಂತರ ಚೈತನ್ಯ ಪ್ರಭು ಮಾತನಾಡಿ, ವಿದ್ಯುತ್ ಉತ್ಪಾದನೆಗಿಂತ ಸಾವಿರಾರು ಕುಟುಂಬಗಳು ನದಿ ತಟದಲ್ಲಿ ವಾಸಿಸುತ್ತಿರುವುದರಿಂದ ಜಲಾಶಯದ ಗರಿಷ್ಠ ಮಟ್ಟ ತಲುಪುವ ಹಿನ್ನೆಲೆಯಲ್ಲಿ ಜನರ ಸುರಕ್ಷತೆ ದೃಷ್ಟಿಯಿಂದ ಡ್ಯಾಮ್‌ನಿಂದ ಹೆಚ್ಚುವರಿ ನಿರನ್ನು ಬಿಡಲಾಗಿದೆ. ರಾತ್ರಿ ಮಳೆಯಾಗುವ ಮುನ್ಸೂಚನೆ ಪಡೆದು ವಿದ್ಯುತ್ ಉತ್ಪಾದನೆ ಜೊತೆ ಜೊತೆಗೆ ನೀರಿನ ಪ್ರಮಾಣ 50ಸಾವಿರ ಕ್ಯೂಸೆಕ್ ಮೀರದ ರೀತಿಯಲ್ಲಿ ಜಾಗೃತಿ ವಹಿಸಿ ಹಗಲು ಸಮಯದಲ್ಲೇ ಹೆಚ್ಚುವರಿ ನೀರನ್ನು ಹೊರಬಿಡುತ್ತಿದ್ದೇವೆ.
ಹೊಸನಗರ, ತಿರ್ಥಹಳ್ಳಿ ಕಡೆಗೆ ಹೆಚ್ಚು ಮಳೆಯಾದರೆ ಜಲಾಶಯದ ಹಿತದೃಷ್ಟಿಯಿಂದ ಮಾತ್ರ ಅಧಿಕ ನೀರು ಬೀಡಲಾಗುತ್ತದೆ ಎಂದರು. ನದಿ ತಟದ ಜನರು ಸಹ ಆದಷ್ಟು ಜಾಗೃತಿ ವಹಿಸಿ ಮುನ್ನೆಚರಿಕೆಯಿಂದಿರಿ ಎಂದು ವಿನಂತಿಸಿದರು. ಜಲಾಶಯದ ಗರಿಷ್ಠ ಮಟ್ಟ ತಲಪುವವರೆಗು ಕಾದು ನೀರನ್ನು ಹೊರ ಬೀಡುತ್ತಾರೆ ಎಂದು ಜನರಿಂದ ದೂರು ಬರುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಕೆಲವು ಜಲಾಶಯಗಳಲ್ಲಿ ಈ ತಪ್ಪು ಆಗಿರಬಹುದು. ಆದರೆ ಅದರಿಂದ ನಾವು ಪಾಠ ಕಲಿಯುತ್ತಿದ್ದೇವೆ. ನಮ್ಮಿಂದ ಅಂತಹ ತಪ್ಪು ನಡೆಯದಂತೆ ಗರಿಷ್ಠ ಪ್ರಯತ್ನ ನಡೆಸುತ್ತೇವೆ ಎಂದರು.
ಭಟ್ಕಳ ಶಾಸಕ ಸುನಿಲ್ ನಾಯ್ಕ ಮಾತನಾಡಿ ತಾನು ಕಳೆದೊಂದು ವಾರದಿಂದ ಜಲಾಶಯದ ಅಧಿಕಾರಿಗಳಿಂದ ಸಂಪರ್ಕದಲ್ಲಿದ್ದು ಮಾಹಿತಿ ಪಡೆದಿದ್ದೇನೆ. ನೆರೆಹಾವಳಿಯಿಂದ ಅನೇಕ ಗ್ರಾಮಗಳು ಮುಳುಗಡೆ ಹಂತದಲ್ಲಿದೆ. ಈ ಹಿನ್ನಲೆ ಗೆರುಸೊಪ್ಪಾ ವಿದ್ಯುತ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ್ದೇನೆ. ನದಿ ತಟದ ಜನರ ಹಿತದೃಷ್ಟಿಯಿಂದ ನೀರು ಬೀಡುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ ಎಂದರು. ಈಗಾಗಲೇ ನೆರೆಹಾವಳಿಯಿಂದ ನದಿಪಾತ್ರದ ಅನೇಕ ಮನೆಗಳಿಗೆ, ತೂಗು ಸೇತುವೆಗಳಿಗೆ ಹಾನಿ ಸಂಭವಿಸಿದೆ, ಕೆಲವೆಡೆ ಗುಡ್ಡ ಕುಸಿತದ ವರದಿಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಪ್ಯಾಕ್ಸ್ ಮೂಲಕ ಪತ್ರ ಕಳುಹಿಸಿದ್ದೇನೆ. ಹಾನಿ ಸಂಭವಿಸಿದ ಮನೆಗಳಿಗೆ ಸರ್ಕಾರ ಮಟ್ಟದಲ್ಲಿ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದರು.ಬಿಜೆಪಿ ತಾಲೂಕಾಧ್ಯಕ್ಷ ಸುಬ್ರಾಯ್ ನಾಯ್ಕ, ಕೆಶವ ನಾಯ್ಕ ಬಳ್ಕೂರು, ಉಲ್ಲಾಸ ಶಾನಭಾಗ್, ಹರಿಶ್ಚಂದ್ರ ನಾಯ್ಕ, ಕೆಪಿಸಿ ಘಟಕದ ಅಧಿಕಾರಿಗಳು ಹಾಜರಿದ್ದರು.