ಪುತ್ತೂರು: ಕಾನೂನು ತೊಡಕಿನ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ. ಅಂತಹ ನಿಯಮಗಳನ್ನು ಸರಳಗೊಳಿಸುವ ಸಾಧ್ಯತೆಗಳ ಬಗ್ಗೆ ಪ್ರತಿ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅಭಿಪ್ರಾಯ ಪಡೆಯುವೆ ಎಂದು ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ ಹೇಳಿದರು.
ಅವರು ಮಂಗಳವಾರ ಪುತ್ತೂರು ಎಸಿ ಕೋರ್ಟ್ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಪ್ರಾಕೃತಿಕ ವಿಕೋಪ ತಡೆಗೆ ತಾಲೂಕು ಆಡಳಿತ ಸಿದ್ಧವಾಗಿದ್ದು, 27.81 ಲಕ್ಷ ರೂ. ಅನುದಾನವೂ ಲಭ್ಯವಿದೆ. ಜತೆಗೆ ಹೆಚ್ಚಿನ ಹಾನಿ ಸಂಭವಿಸಿದಾಗ ಪರಿಹಾರ ನೀಡುವುದಕ್ಕೆ ರಾಜ್ಯ ಸರಕಾರ ಬದ್ಧವಾಗಿದೆ. ಪುತ್ತೂರಿನಲ್ಲಿ ಫಾರ್ಮ್ ನಂ. 50-53ರಲ್ಲಿ ಕೃಷಿಕರಿಗೆ 67,069 ಎಕರೆ ಭೂಮಿ (ಅಕ್ರಮ-ಸಕ್ರಮ) ಮಂಜೂರು ಮಾಡಲಾಗಿದ್ದು, ಫಾರ್ಮ್ ನಂ. 57ರಲ್ಲಿ 10,847 ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಲಾಗಿದೆ. ಇದರ ವಿಲೇ ಕುರಿತು ಹೋಬಳಿ ಮಟ್ಟದಲ್ಲಿ ಸಮಿತಿ ರಚಿಸುವ ಕುರಿತು ಸಲಹೆ ಬಂದಿದೆ ಎಂದರು.
ಪರ್ಯಾಯ ರಸ್ತೆ ಅಭಿವೃದ್ಧಿ ಸಿಎಂ ಜತೆ ಚರ್ಚೆ: ಐವನ್
ಸುಳ್ಯ: ಮಡಿಕೇರಿ- ಸಂಪಾಜೆ ರಾ.ಹೆದ್ದಾರಿಗೆ ಪರ್ಯಾಯವಾಗಿ ಸುಳ್ಯದಿಂದ ಮಡಿಕೇರಿಗೆ ಸಂಪರ್ಕ ಕಲ್ಪಿಸುವ ಐದು ಪರ್ಯಾಯ ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿ ಬುಧವಾರ ಸಿಎಂ ಗಮನಕ್ಕೆ ತರುವುದಾಗಿ ಐವನ್ ಹೇಳಿದ್ದಾರೆ. ಸುಳ್ಯದಲ್ಲಿ ಪ್ರಗತಿ ಪರಿಶೀಲನೆ ಸಭೆ ಬಳಿಕ ಪ್ರತಿಕ್ರಿಯಿಸಿದ ಅವರು, ಸಂಪಾಜೆ ರಸ್ತೆ ಹದೆಗೆಟ್ಟ ಸಂದರ್ಭ ಪರ್ಯಾಯ ರಸ್ತೆಗಳ ಅಗತ್ಯ ಇದೆ. ಹಾಗಾಗಿ ಅವುಗಳ ಅಭಿವೃದ್ಧಿಗೆ ಬುಧವಾರ ಸಿಎಂ ಕರೆದಿರುವ ಸಭೆಯಲ್ಲಿ ಪ್ರಸ್ತಾವಿಸುವೆ ಎಂದರು. ಇದೇವೇಳೆ, 94ಸಿ ಮತ್ತು 94ಸಿಸಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡ ಅರ್ಜಿಗಳ ಪುನರ್ ಪರಿಶೀಲನೆಗೆ ಸರಕಾರ ಚಿಂತನೆ ನಡೆಸಿದೆ ಎಂದು ಹೇಳಿದರು.