Advertisement

ಕಂದಾಯ ಅದಾಲತ್‌ ನಡೆಸಿ ಸಮಸ್ಯೆ ಬಗೆಹರಿಸಿ

09:07 PM Nov 25, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲೆಯ ಗ್ರಾಮೀಣ ಭಾಗದ ರೈತಾಪಿ ಕೂಲಿಕಾರರ ಹಾಗೂ ಸಾರ್ವಜನಿಕರ ಸಮಸ್ಯೆ, ಸಂಕಷ್ಟಗಳನ್ನು ತಿಳಿಯಲು ಕಡ್ಡಾಯವಾಗಿ ಕಂದಾಯ ಅದಾಲತ್‌ ನಡೆಸುವ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್‌.ನಾಗಾಂಬಿಕಾದೇವಿ ಜಿಲ್ಲಾಡಳಿತಕ್ಕೆ ಸೂಚಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪಹಣಿ ತಿದ್ದುಪತಿ, ಖಾತೆ ಬದಲಾವಣೆ ಸೇರಿದಂತೆ ಅರ್ಹರಿಗೆ ಪಿಂಚಣಿ ಮತ್ತಿತರ ಸಾಮಾಜಿಕ ಭದ್ರತಾ ಸೇವೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪ್ರತಿ ಹೋಬಳಿಯಲ್ಲಿ ನಡೆಸಿ: ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರು ಸಮಸ್ಯೆಗಳು ಈಡೇರಿದರೆ ಅರ್ಧದಷ್ಟು ಸಮಸ್ಯೆಗಳು ಈಡೇರಿದಂತಾಗುತ್ತದೆ. ಆದ್ದರಿಂ ಕಂದಾಯ ಇಲಾಖೆಯಿಂದ ತಿಂಗಳಿಗೊಮ್ಮೆ ಪ್ರತಿ ಹೋಬಳಿ ಕೇಂದ್ರದಲ್ಲಿ ಅದಾಲತ್‌ ನಡೆಸಿ ಸಾರ್ವಜನಿಕರು ಅಹವಾಲು ಸ್ವೀಕರಿಸಿ ಬಗೆಹರಿಸುವ ಕಾರ್ಯ ಮಾಡಬೇಕೆಂದರು.

ಕಾಳಜಿ ವಹಿಸಿ: ರೈತರು ಮೂಲ ದಾಖಲೆಗಳಲ್ಲಿರುವ ತಪ್ಪುಗಳನ್ನು ತಿದ್ದಪಡಿ ಮಾಡಬೇಕು. ಇದಕ್ಕಾಗಿ ವರ್ಷಾನುಗಟ್ಟಲೇ ರೈತರು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಕಂದಾಯ ದಾಖಲೆಗಳು ಸಮರ್ಪಕವಾಗಿ ಇದ್ದಾಗ ಸರ್ಕಾರದ ಯೋಜನೆಗಳ, ಕಾರ್ಯಕ್ರಮಗಳ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಕಾಳಜಿ ವಹಿಸಬೇಕೆಂದರು. ಆಯುಷ್ಮಾನ್‌ ಭಾರತ ಕಾರ್ಡ್‌ ವಿತರಣೆ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸಬೇಕು. ಪ್ರತಿ ಗ್ರಾಪಂ ಕೇಂದ್ರದಲ್ಲಿ ಈ ಬಗ್ಗೆ ನಾಮಫ‌ಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದರು.

ಪ್ರವಾಸಿಗರನ್ನು ಆಕರ್ಷಿಸಿ: ವಿದ್ಯಾರ್ಥಿಗಳಿಗೆ ವಿಜ್ಞಾನ ಸ್ಪರ್ಧೆಗಳನ್ನು ಆಯೋಜಿಸುವಂತೆ ಸೂಚಿಸಿದ ಅವರು, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕ್ರಮ ವಹಿಸಬೇಕು. ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಒದಗಿಸಿ ಪ್ರವಾಸಿಗರನ್ನು ಆಕರ್ಷಿಸುವಂತೆ ತಿಳಿಸಿದರು.

Advertisement

ಪಡಿತರ ಚೀಟಿ ವಿತರಿಸಿ: ಆಹಾರ ಇಲಾಖೆಗೆ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಕಾಲಮಿತಿಯಲ್ಲಿ ಪಡಿತರ ಚೀಟಿ ವಿತರಿಸಬೇಕು. ಉಪ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಇದೆಯೆಂದು ನೀರಿನ ಸಮಸ್ಯೆ ನಿವಾರಣೆಗೆ ನಿರ್ಲಕ್ಷ್ಯ ವಹಿಸದಿರಿ. ಜಕ್ಕಲಮಡಗು ಜಲಾಶಯದ ನೀರಿನ ಬಗ್ಗೆ ಕೂಡಲೇ ನಗರಸಭೆಯೊಂದಿಗೆ ಸಭೆ ಆಯೋಜಿಸಿ ನೀರಿನ ಸರಬರಾಜಿನ ಕುರಿತು ಕ್ರಮ ವಹಿಸುವಂತೆ ಸೂಚಿಸಿದರು.

ಕಾಮಗಾರಿ ವಿಳಂಬಕ್ಕೆ ಆಕ್ರೋಶ: ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಗಳ ವಿಳಂಬಕ್ಕೆ ಉಸ್ತುವಾರಿ ಕಾರ್ಯದರ್ಶಿ ತೀವ್ರ ಬೇಸರ ವ್ಯಕ್ತಪಡಿಸಿದರು. ಅಂಗನವಾಡಿ, ಶಾಲಾ ಕಟ್ಟಡ ಸೇರಿದಂತೆ ವಸತಿ ನಿಲಯಗಳ ಹಾಸ್ಟೆಲ್‌ ಕಾಮಗಾರಿ, ಸಮುದಾಯ ಭವನ ಕಾಮಗಾರಿಗಳನ್ನು ಈ ವರ್ಷಾಂತ್ಯಕ್ಕೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದರೆ ಅವರ ಪರವಾನಿಗೆಯನ್ನು ಕಪ್ಪುಪಟ್ಟಿಗೆ ಸೇರಿಸುವುದರ ಜೊತೆಗೆ ದಂಡ ವಸೂಲಿ ಮಾಡುವಂತೆಯು ಸೂಚಿಸಿದರು. ಬಹಳಷ್ಟು ಕಟ್ಟಡ ಕಾಮಗಾರಿಗಳ ಪ್ರಗತಿ ಕುಂಠಿತವಾಗಿದೆ. ಲಕ್ಷಾಂತರ ರೂ. ಕಟ್ಟಡ ಕಾಮಗಾರಿ ಬಳಕೆ ಆದರೂ ಪ್ರಗತಿ ಇಲ್ಲ. ಅತ್ತ ಕಟ್ಟಡವು ಪೂರ್ಣಗೊಳ್ಳದೇ ಇತ್ತ ಬಾಡಿಗೆ ಕಟ್ಟುವುದರಿಂದ ಸರ್ಕಾರಕ್ಕೆ ಹೊರೆ ಆಗುತ್ತದೆ. ತ್ವರಿತವಾಗಿ ಕಟ್ಟಡಗಳ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಲೋಕೋಪಯೋಗಿ ಹಾಗೂ ಜಿಪಂ ಅಭಿಯಂತರರಿಗೆ ಸೂಚಿಸಿದರು.

ಉದ್ಯಾನವನ ಬೆಳೆಸಿದವರಿಗೆ ಬಹುಮಾನ ಕೊಡಿ: ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ಕೊಡುವುದರ ಜೊತೆಗೆ ಸಾರ್ವಜನಿಕರು ತಮ್ಮ ಮನೆಗಳ ಸಮೀಪ ಉತ್ತಮ ಉದ್ಯಾನವನ ನಿರ್ಮಿಸಿದ್ದರೆ, ಗುರುತಿಸಿ ತೋಟಗಾರಿಕೆ ಇಲಾಖೆಯಿಂದ ಬಹುಮಾನ ನೀಡಬೇಕೆಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಾಗಾಂಬಿಕಾದೇವಿ ತಿಳಿಸಿದರು.

ಅಲ್ಲದೇ ಅಂಗನವಾಡಿ, ಶಾಲಾ, ಕಾಲೇಜುಗಳಲ್ಲಿ ಕಡ್ಡಾಯವಾಗಿ ಕೈ ತೋಟ ನಿರ್ಮಿಸಬೇಕು., ಸರ್ಕಾರಿ ಕಚೇರಿಗಳ ಆವರಣದಲ್ಲಿ ಉದ್ಯಾನವನ ನಿರ್ಮಿಸಬೇಕು, ಉತ್ತಮ ಉದ್ಯಾನವನ ನಿರ್ಮಿಸುವ ಇಲಾಖೆಗೆ ಬಹುಮಾನ ನೀಡುವಂತೆ ಸೂಚಿಸಿದರು.

ಸಂಸದರ ಪ್ರದೇಶಾಭಿವೃದ್ಧಿಗೆ ನಿಧಿಯೇ ಬಂದಿಲ್ಲ: ಸಭೆಯಲ್ಲಿ ಜಿಲ್ಲೆಯ ಸಂಸದರ, ಶಾಸಕರ ಪ್ರದೇಶಾಭಿವೃದ್ಧಿಗೆ ಇದುವರೆಗೂ ಹೆಚ್ಚು ಅನುದಾನ ಬಂದಿದೆ. ಎಷ್ಟು ಖರ್ಚು ಆಗಿದೆ, ಕೈಗೆತ್ತಿಕೊಂಡ ಕಾಮಗಾರಿಗಳೆಷ್ಟು, ಬಾಕಿ ಇರುವ ಕಾಮಗಾರಿಗಳೆಷ್ಟು, ಅನುದಾನ ಸಮರ್ಪಕವಾಗಿ ಬಳಕೆ ಆಗುತ್ತಿದೆಯೇ ಎಂಬುದರ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಾಗಾಂಬಿಕಾದೇವಿ ಬಗ್ಗೆ ಮಾಹಿತಿ ಪಡೆದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಆರತಿ, ಹೊಸ ಸಂಸದರು ಆಯ್ಕೆ ಆದ ಮೇಲೆ ಇದುವರೆಗೂ ಅನುದಾನ ಬಿಡುಗಡೆಗೊಂಡಿಲ್ಲ. ಉಳಿದಂತೆ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಂದಿದ್ದು, ಶೇ.82 ರಷ್ಟು ಅನುದಾನ ಬಳಕೆ ಆಗಿದೆ. ಕಾಮಗಾರಿಗಳು ಸಮಾರೋಪಾದಿಯಲ್ಲಿ ನಡೆಯುತ್ತಿದೆ ಎಂದರು. ಜಿಲ್ಲೆಯ ಸಂಸದರು, ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಬಳಕೆ ಕುರಿತು ಸಮಗ್ರ ಮಾಹಿತಿ ನೀಡುವಂತೆ ಜಿಲ್ಲಾಡಳಿತಕ್ಕೆ ಉಸ್ತುವಾರಿ ಕಾರ್ಯದರ್ಶಿ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next