Advertisement

ಕಾರ್ಖಾನೆ ಸ್ಥಾಪಿಸದಿದ್ದರೆ ಜಮೀನು ಮರಳಿಸಿ

12:46 PM Jul 25, 2017 | Team Udayavani |

ಬಳ್ಳಾರಿ: ಉಕ್ಕಿನ ಕಾರ್ಖಾನೆ ಸ್ಥಾಪಿಸಿ ಇಲ್ಲವೇ ಜಮೀನು ಮರಳಿಸಬೇಕು. ವಶಪಡಿಸಿಕೊಂಡ ಭೂಬೆಲೆ ನಿಗದಿಯಲ್ಲಿ ಆದ ವಂಚನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಕುಡತಿನಿ ಪಟ್ಟಣದ ಅಖೀಲ ಕರ್ನಾಟಕ ಭೂ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನಾ ಧರಣಿ ನಡೆಯಿತು.

Advertisement

ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಆರ್ಸೆಲರ್‌ ಮಿತ್ತಲ್‌, ಬ್ರಹ್ಮಿಣಿ ಸ್ಟೀಲ್ಸ್‌ ಕಾರ್ಖಾನೆ ಸ್ಥಾಪಿಸಲುವಶಪಡಿಸಿಕೊಂಡ ಜಮೀನುಗಳ ಬೆಲೆ ನಿಗದಿಯಲ್ಲಿ ಕೆಐಎಡಿಬಿ ತಾರತಮ್ಯ ಎಸಗಿದ್ದು, ದರ ನಿಗದಿಯಲ್ಲಿ 
ಭೂಸಂತ್ರಸ್ತರನ್ನು ವಂಚಿಸಿದೆ. ಇದನ್ನು ಸರ್ಕಾರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಆರ್ಸೆಲರ್‌ ಮಿತ್ತಲ್‌ ಉಕ್ಕಿನ ಕಾರ್ಖಾನೆಗೆ ವಶಪಡಿಸಿಕೊಂಡ ಜಮೀನಿನಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪನೆಯಾಗದೇ, ಈ ಜಮೀನುಗಳಲ್ಲಿ ಸೌರವಿದ್ಯುತ್‌ ಘಟಕ ಸ್ಥಾಪನೆ ಮಾಡಲು ಮಿತ್ತಲ್‌ ಸಂಸ್ಥೆ ಸರ್ಕಾರದೊಡನೆ ಮಾತುಕತೆ ನಡೆಸಿದೆ ಎಂದು
ತಿಳಿದುಬಂದಿದೆ. ಒಂದು ವೇಳೆ ಸರ್ಕಾರ ಮಿತ್ತಲ್‌ ಕಂಪನಿಯ ಒತ್ತಡಕ್ಕೆ ಮಣಿದು ಸೌರ ವಿದ್ಯುತ್‌ ಘಟಕ ಸ್ಥಾಪಿಸಿದರೆ ಉದ್ಯೋಗದ ನಿರೀಕ್ಷೆಯಲ್ಲಿರುವ ಭೂಸಂತ್ರಸ್ತರ ಕುಟುಂಬಗಳಿಗೆ ಉದ್ಯೋಗ ದೊರೆಯುವುದಿಲ್ಲ. ಆದ್ದರಿಂದ ಈ ಜಮೀನಿನಲ್ಲಿ ಸೌರ ವಿದ್ಯುತ್‌ ಘಟಕ
ಸ್ಥಾಪಿಸಲು ಸರ್ಕಾರ ಸಮ್ಮತಿಸಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. 

ಭೂಸ್ವಾಧೀನ ಕಾಯ್ದೆ-2013ರ ಅನ್ವಯ ಒಂದು ಜಮೀನನ್ನು ವಶಪಡಿಸಿಕೊಂಡ ಐದು ವರ್ಷಗಳಲ್ಲಿ  ಅಲ್ಲಿ ಉದ್ದೇಶಿತ ಕಾರ್ಖಾನೆ ಸ್ಥಾಪಿಸದೇ ಹೋದಲ್ಲಿ ಅಂತಹ ಜಮೀನನ್ನು ಸಂತ್ರಸ್ತರಿಗೆ ಮರಳಿಸಬೇಕೆಂಬ ನಿಯಮವಿದೆ. ಈಗಾಗಲೇ ಬ್ರಹ್ಮಿಣಿ ಹಾಗೂ
ಆರ್ಸೆಲರ್‌ ಮಿತ್ತಲ್‌ ಕಂಪನಿಗಳಿಗೆ ಜಮೀನು ವಶಪಡಿಸಿಕೊಂಡು ಐದು ವರ್ಷಗಳಿಗೂ ಅಧಿಕ ಸಮಯ ಮುಗಿದಿದೆ. ಇದುವರೆಗೂ ಈ ಜಮೀನುಗಳಲ್ಲಿ ಕಾರ್ಖಾನೆ ಸ್ಥಾಪನೆಯಾಗುವ ಲಕ್ಷಣ ಕಂಡುಬರುತ್ತಿಲ್ಲ. ಜಮೀನು ವಶಪಡಿಸಿಕೊಂಡಿರುವ ಕೆಐಎಡಿಬಿ ಜಮೀನುಗಳನ್ನು ತನ್ನ ವಶದಲ್ಲಿಯೇ ಇರಿಸಿಕೊಳ್ಳಲು ಇಚ್ಛಿಸಿದರೆ ಅಂತಹ ಸಂತ್ರಸ್ತ ಕುಟುಂಬಗಳಿಗೆ ನ್ಯಾಯಾಲಯ
ನಿಗದಿಪಡಿಸಿದ ಹೆಚ್ಚುವರಿ ಮೊತ್ತವನ್ನು ಸರ್ಕಾರ ನೀಡಬೇಕು. ಒಂದು ವೇಳೆ ವಶಪಡಿಸಿಕೊಂಡ ಜಮೀನುಗಳಲ್ಲಿ ಕಾರ್ಖಾನೆ ಸ್ಥಾಪಿಸಲು ಯಾವುದೇ ಸಂಸ್ಥೆ ಮುಂದಾದರೆ, ಅಲ್ಲಿ ಉದ್ಯಮ ಸ್ಥಾಪನೆಯಾಗಿ, ಸಂತ್ರಸ್ತರ ಕುಟುಂಬಗಳ ಸದಸ್ಯರಿಗೆ ಉದ್ಯೋಗ
ದೊರೆಯುವವರೆಗೂ ಮಾಸಿಕ 20 ಸಾವಿರ ರೂ. ಗಳ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಮಿತಿಯ ಮುಖಂಡರಾದ ಯು.ಬಸವರಾಜ, ಜೆ.ಸತ್ಯಬಾಬು, ವಿ.ಎಸ್‌.ಶಿವಶಂಕರ, ಬಿ. ಪೋಲಪ್ಪ, ಬಸವರಾಜ ಯಾದವ್‌, ಗೋಪಾಲ ಮಾತನಾಡಿದರು. ಮುಖಂಡರಾದ ಚಂದ್ರಾಯಿ ದೊಡ್ಡಬಸಪ್ಪ, ವೆಂಕಟರಮಣ ಬಾಬು, ವೀರೇಶಗೌಡ, ಗೋಪಾಲಪ್ಪ, ಕೆಂಚಪ್ಪ, ಟಿ.ಪಂಪಾಪತಿ, ಕೊಳಗಲ್ಲು ಗ್ರಾಮದ ವಿರೂಪಾಕ್ಷಪ್ಪ, ರುದ್ರಪ್ಪ, ವೇಣಿವೀರಾಪುರದ ವೆಂಕಟೇಶಪ್ಪ, ಅಯ್ಯಪ್ಪ, ಹರಗಿನಡೋಣಿಯ ಧರ್ಮಪ್ಪ, ರಾಜಪ್ಪ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನೂರಾರು
ಕಾರ್ಯಕರ್ತರು ಪಾಲ್ಗೊಂಡಿದ್ದರು.  ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next