ಸುರತ್ಕಲ್: ಕೊರೊನೋತ್ತರ ದಿನಗಳಲ್ಲಿ ಹಲವಾರು ಕಡೆ ಹಾಕಲಾದ ನಗರಸಾರಿಗೆ ನರ್ಮ್ ಬಸ್ ಸಂಚಾರವು ಪ್ರಯಾಣಿಕರ ಕೊರತೆಯಿಂದ ನಿಲ್ಲಿಸಬೇಕಾಗಿ ಬಂದಿತ್ತು. ಆದರೆ ಶಿಬರೂರು ಜನರ ಒತ್ತಾಸೆ ಸತತ ಪ್ರಯತ್ನದಿಂದ ಸುರತ್ಕಲ್ ಶಿಬರೂರು ಕಟೀಲು ಮಾರ್ಗವಾಗಿ ಪುನರಾರಂಭಗೊಂಡಿದೆ. ಇದೀಗ ನರ್ಮ್ ಬಸ್ ಜನರ ಜೀವನಾಡಿಯಾಗಿ ನಿತ್ಯ ಓಡಾಟ ನಡೆಸುತ್ತಿದೆ.
ಗ್ರಾಮೀಣ ಪ್ರದೇಶದ ಬಹು ಭಾಗಗಳಲ್ಲಿ ರವಿವಾರ ರಜಾ ದಿನವಾದೊಡನೆ ಖಾಸಗಿ ಬಸ್ ಸಂಚಾರ ಕಲೆಕ್ಷನ್ ಇಲ್ಲದೆ ನಿಲ್ಲಿಸುವುದು
ಸಾಮಾನ್ಯ. ಇದರಿಂದ ಶುಭ ಸಮಾರಂಭಗಳಿಗೆ ಹೋಗುವ ಮಂದಿಗೆ ಅನಾನುಕೂಲವಾಗುತ್ತಿತ್ತು. ಇದರಿಂದ ಸಂಘ – ಸಂಸ್ಥೆಗಳ ಆಗ್ರಹದ ಮೇರೆಗೆ ಸುರತ್ಕಲ್, ಕೊಂಚಾಡಿ, ಕಟೀಲು ಮತ್ತಿತರ ರಸ್ತೆ ಗಳಲ್ಲಿ ನರ್ಮ್ ಬಸ್‌ಗಳ ಸಂಚಾರ ಆರಂಭವಾಗಿತ್ತು.
ಇದರಲ್ಲಿ ಸುರತ್ಕಲ್, ಶಿಬರೂರು ಕಿನ್ನಿಗೋಳಿ ನರ್ಮ್ ಬಸ್ ಸಂಚಾರ 2022ರ ಬಳಿಕ ಎರಡನೇ ಬಾರಿ ಪುನರಾರಂಭಗೊಂಡು ಜನರಿಗೆ ಅನುಕೂಲವಾಗಿದೆ. ಕೆಎಸ್ ಆರ್‌ಟಿಸಿಗೆ ಆದಾಯವೂ ಬರುತ್ತಿದೆ. ಮಹಿಳೆಯರಿಗೆ ಉಚಿತ ಪ್ರಯಾಣದ ಬಳಿಕ ನರ್ಮ್ ಬಸ್ ಕಾದು ಕೂತು ಹೋಗುವ ಮಹಿಳಾ ಪ್ರಯಾಣಿಕರೂ ಇದ್ದಾರೆ. ಈ ರಸ್ತೆ ಮಾರ್ಗವಾಗಿ ಕೇವಲ ನರ್ಮ್ ಬಸ್ ಓಡಾಟ ಮಾತ್ರ ಇದೆ. ಖಾಸಗಿ ಬಸ್ ಸಂಚಾರ ಈ ಭಾಗದಲ್ಲಿ ಇನ್ನೂ ಆರಂಭವಾಗಿಲ್ಲ.
ಮಂಗಳೂರು ಲಾಲ್‌ಬಾಗ್ ನಿಂದ ಹೊರಡುವ ಈ ಬಸ್ ಶಿಬರೂರಿಗೆ 7.35ಕ್ಕೆ ಬಂದು ವಿದ್ಯಾರ್ಥಿಗಳಿಗೆ ಕಟೀಲು ಶಾಲಾ ಕಾಲೇಜಿಗೆ ತೆರಳಲು ಅನುಕೂಲವಾಗಿದೆ. ಪಡೀಲಿನಿಂದ ಹೊರಡುವ ಇನ್ನೊಂದು ನರ್ಮ್ ಬಸ್ 8.10ಕ್ಕೆ ಶಿಬರೂರು ತಲುಪುವುದರಿಂದ ವಿವಿಧೆಡೆಗಳಿಗೆ ಉದ್ಯೋಗಕ್ಕೆ ತೆರಳು ವವರಿಂದ ತುಂಬಿರುತ್ತದೆ. ಸಂಜೆ ಕೆಲಸ ಬಿಟ್ಟು ಬರುವ ಮಂದಿಗೆ 5 ಗಂಟೆಯ ಬಳಿಕದ ಪ್ರಯಾಣವೂ ಅನುಕೂಲಕರವಾಗಿದ್ದು, ನರ್ಮ್ ಬಸ್ ಯಶಸ್ವಿ ಓಡಾಟಕ್ಕೆ ಸಹಕಾರಿಯಾಗಿದೆ. ಖಾಸಗಿ ಬಸ್ ಗಳಂತೆ ದಾವಂತವಿಲ್ಲದ ಸುರಕ್ಷಿತ ಸಂಚಾರ, ಮಿತವ್ಯಯದರ ಹಾಗೂ ಮಹಿಳೆಯರಿಗೆ ಉಚಿತ ಪ್ರಯಾಣದ ಕೊಡುಗೆಯಿಂದ ಈ ಮಾರ್ಗದಲ್ಲಿ ಓಡಾಟ ಯಶಸ್ವಿಯಾಗುತ್ತಿರುವಂತೆಯೇ ನಿಲ್ಲಿಸಲಾದ ವಿವಿಧ ಮಾರ್ಗಗಳ ನರ್ಮ್ ಬಸ್ ಓಡಾಟಕ್ಕೂ ಇದೀಗ ಬೇಡಿಕೆ ಹೆಚ್ಚಾಗಿದೆ.
ಜನಸಾಮಾನ್ಯರಿಗೆ ಅನುಕೂಲ
ಸುರತ್ಕಲ್, ಶಿಬರೂರು ಕಟೀಲು ಮಾರ್ಗವಾಗಿ ನರ್ಮ್ ಬಸ್ ಹಾಕಬೇಕೆಂದು ನಮ್ಮ ಶಿಬರೂರು ದೇಲಂತ ಬೆಟ್ಟುವಿನ ಯುವಕ ಮಂಡಲವು ದ.ಕ. ಜಿಲ್ಲಾಧಿಕಾರಿಗಳ ನೆರವು, ಜನಪ್ರತಿನಿಧಿಗಳ ಸಹಕಾರದಲ್ಲಿ ಕೆಎಸ್‌ಆರ್ ಟಿಸಿ ಪ್ರಾದೇಶಿಕ ಅಧಿಕಾರಿಗಳಿಗೆ ಮನವಿ ನೀಡಿ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಸರಕಾರಿ ಬಸ್ ನಿಯಮಿತವಾಗಿ ಓಡಾಟ ನಡೆಸುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ.
*ಭುವನೇಶ್ ಶಿಬರೂರು, ನಿತ್ಯ ಪ್ರಯಾಣಿಕ