Advertisement

ರಾಜಧಾನಿ ಜನರ ಸಮಸ್ಯೆಗೆ ಸ್ಪಂದಿಸಿ

12:09 PM Oct 07, 2017 | |

ಬೆಂಗಳೂರು: ನಗರದಲ್ಲಿ ಧಾರಾಕಾರ ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಜನರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುವಂತೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಶಾಸಕರಿಗೆ ಸೂಚನೆ ನೀಡಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ನಗರದ ಶಾಸಕರ ಸಭೆಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಮಳೆಯಿಂದಾಗಿ ಸಾಕಷ್ಟು ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಶಾಸಕರು ನೇರವಾಗಿ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಸಮಸ್ಯೆಗೆ ಸ್ಪಂದಿಸಬೇಕು ಎಂದರು.

Advertisement

ಬಿಜೆಪಿಯವರು ಬೆಂಗಳೂರಿನಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿದ್ದು, ಅದಕ್ಕಾಗಿ ಸಮಸ್ಯೆಗಳಿದ್ದಲ್ಲೇ ನೇರವಾಗಿ ಜನರ ಬಳಿಗೆ ತೆರಳಿ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರಿಗಿಂತಲೂ ಮುಂಚೆಯೇ ಜನರ ಬಳಿ ತೆರಳಿ ಸ್ಪಂದಿಸುವಂತೆ ವೇಣುಗೋಪಾಲ ಸೂಚಿಸಿದ್ದಾರೆ ಎನ್ನಲಾಗಿದೆ. ನಗರದ ಸಚಿವರ ಬಗ್ಗೆ ಬಿಜೆಪಿಯವರು ಆರೋಪ ಮಾಡುತ್ತಿದ್ದು, ಆರೋಪಗಳಿಗೆ ಸ್ಪಷ್ಟೀಕರಣ ನೀಡಿ ತಿರುಗೇಟು ನೀಡುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.  

ಮನೆ ಮನೆ ಕಾಂಗ್ರೆಸ್‌ ಕಾರ್ಯಕ್ರಮ ಅನುಷ್ಠಾನಗೊಳಿಸುವಲ್ಲಿ ನಗರ ಶಾಸಕರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರಿದೆ. ಈ ಕಾರ್ಯಕ್ರಮವನ್ನು ಕಡ್ಡಾಯವಾಗಿ ಮಾಡಲೇಬೇಕು ಎಂದು ತಾಕೀತು ಮಾಡಿದರು. 2018 ಚುನಾವಣೆ ದೃಷ್ಟಿಯಿಂದ ಬೆಂಗಳೂರು ಅತ್ಯಂತ ಮಹತ್ವದ್ದಾಗಿ ಹೆಚ್ಚಿನ ಸ್ಥಾನ ಗೆಲ್ಲಲು ಶಾಸಕರು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕೆಂದು ಸೂಚಿಸಿದ್ದಾರೆ.

ಸಭೆಯ ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ಮನೆ ಮನೆಗೂ ಕಾಂಗ್ರೆಸ್‌ಕಾರ್ಯಕ್ರಮವನ್ನು ನಗರ ಶಾಸಕರು ಸಕ್ರೀಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಸಾಮಾಜಿಕ ಜಾಲ ತಾಣಗಳನ್ನು ಹೆಚ್ಚು ಬಳಸುವಂತೆ ಖಡಕ್‌ ಎಚ್ಚರಿಕೆ ನೀಡಲಾಗಿದೆ. ನಗರದ ಸಮಸ್ಯೆಗಳ ಪರಿಹಾರಕ್ಕೆ ಮುಖ್ಯಮಂತ್ರಿ ಹೆಚ್ಚು ಅನುದಾನ ನೀಡಿದ್ದು, ಅದನ್ನು ಬಳಸಿಕೊಂಡು ಮಳೆಯಿಂದ ಆಗಿರುವ ಸಮಸ್ಯೆಯನ್ನು ಬಗೆ ಹರಿಸಲು ಸೂಚಿಸಿದ್ದಾರೆ ಎಂದರು. 

ಸದ್ಯ 10 ಜನ ಸಚಿವರು ಮತ್ತು 40 ಶಾಸಕರು ಸಾಮಾಜಿಕ ಜಾಲ ತಾಣಗಳನ್ನು ಬಳಸುತ್ತಿಲ್ಲ ಎಂಬ ಮಾಹಿತಿ ಇದೆ. ಅವರಿಗೂ ಸಾಮಾಜಿಕ ಜಾಲ ತಾಣ ಬಳಕೆಗೆ ಸೂಚನೆ ನೀಡಲಾಗಿದೆ. ಈಗಿರುವ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ಉತ್ತಮ ವಾತಾವರಣ ಇದ್ದು, ಬಿಜೆಪಿಯ ಯಡಿಯೂರಪ್ಪ, ಅಮಿತ್‌ ಷಾ ಎಷ್ಟೇ ಹುಚ್ಚುಚ್ಚಾಗಿ ಹೇಳಿಕೆ ನೀಡಿದರೂ ಏನೂ ಆಗುವುದಿಲ್ಲ ಎಂದು ಹೇಳಿದರು. 

Advertisement

ಮನೆ ಮನೆ ಕಾಂಗ್ರೆಸ್‌ ಕಾರ್ಯಕ್ರಮವನ್ನು ತಿಂಗಳ ಕೊನೆ ವರೆಗೂ ವಿಸ್ತರಿಸಲಾಗಿದ್ದು, ಮತ್ತೂಂದು ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next