Advertisement

ಇನ್ನೂ ಪ್ರಕಟವಾಗಿಲ್ಲ ಪುರಸಭೆ ಅಧ್ಯಕ್ಷರ ಮೀಸಲಾತಿ

04:19 PM Jun 13, 2023 | Team Udayavani |

ಶ್ರೀರಂಗಪಟ್ಟಣ: 2023 ಮೇ 5ರಂದೇ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಡಳಿತದ ಅವಧಿ ಮುಗಿದು ತಿಂಗಳು ಕಳೆದರೂ ಇನ್ನು ಮೀಸಲಾತಿ ಪ್ರಕಟವಾಗಿಲ್ಲ. ಸರ್ಕಾರದ ಮೀನಮೇಷದಿಂದ ಇನ್ನಷ್ಟು ದಿನ ಮುಂದೆ ಹೋಗುವಂತೆ ಕಾಣುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

Advertisement

ಪಟ್ಟಣ ಪುರಸಭೆಗೆ 5 ವರ್ಷದ ಅವಧಿಯಲ್ಲಿ ಕಳೆದ ಎರಡುವರೆ ವರ್ಷ ಸರ್ಕಾರ ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಮೀಸಲು ಮಾಡಿ ಆದೇಶ ನೀಡಿತ್ತು. ಈಗ ಎರಡು ವರ್ಷಗಳು ಕಳೆದು ಮುಂದಿನ ಹೊಸ ಮೀಸಲಾತಿ ಬರುವವರೆಗೂ ಪಟ್ಟಣ ಪುರಸಭೆಗೆ ಉಪ ವಿಭಾಗಾಧಿಕಾರಿಗಳನ್ನು ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.

ಆಡಳಿತಾವಧಿ ಮುಕ್ತಾಯ: ರಾಜ್ಯದಲ್ಲಿ ತೆರವಾಗಿರುವ ವಿವಿಧ ನಗರಸಭೆ, ಪುರಸಭೆ ಹಾಗೂ ಪಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ಮುಂದಿನ ಎರಡುವರೆ ವರ್ಷದ ಅವಧಿಯ ಮೀಸಲಾತಿ ಘೋಷಣೆ ಮಾಡದೆ, ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ. ಅದರಂತೆ ಶ್ರಿರಂಗಪಟ್ಟಣ ಪುರಸಭೆಗೂ ಹೊಸ ಮೀಸಲಾತಿ ಬರುವವರೆಗೂ ಇನ್ನು ಕೆಲವು ದಿನಗಳು ಮುಂದೂಡ ಬಹುದಾಗಿದೆ. ಉಪವಿಭಾಗಾಧಿಕಾರಿಗಳನ್ನು ಆಡಳಿತಾಧಿಕಾರಿಯಾಗಿ ಸರ್ಕಾರ ನೇಮಿಸಿದೆ.

ಸದಸ್ಯರು ಸಾಮಾನ್ಯ ಸಭೆ ನಡೆಸಿಲ್ಲ: ಕಳೆದ ಮೂರು ತಿಂಗಳಿಂದ ರಾಜ್ಯದ ಕೆಲ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೊದಲನೇ ಅವಧಿ ಆಡಳಿತ ಎರಡೂವರೆ ವರ್ಷ ಈಗಾಗಲೇ ಮುಗಿದಿದೆ. ಇನ್ನುಳಿದ ಎರಡೂವರೆ ವರ್ಷದ ಅವಧಿಗೆ ತಕ್ಷಣದಲ್ಲಿ ಪುರಸಭೆ ಕಾಯ್ದೆ ಕಾನೂನು ಪ್ರಕಾರ ರೊಟೇಷನ್‌ ಪದ್ಧತಿಯಂತೆ ಸರ್ಕಾರ ಮೀಸಲಾತಿ ಘೋಷಣೆ ಮಾಡಿದರೆ, ಈ ಸ್ಥಾನಗಳಿಗೆ ಚುನಾವಣೆ ನಡೆದು ತೆರವಾಗಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ತುಂಬಬಹುದು. ಆಡಳಿತಾಧಿಕಾರಿ ನೇಮಕ ಮಾಡಿರುವುದರಿಂದ ಪುರಸಭೆ ಸದಸ್ಯರು ಸಾಮಾನ್ಯ ಸಭೆ ನಡೆಸಿಲ್ಲ. ಯಾವುದೇ ಹೊಸ ಕ್ರಿಯಾ ಯೋಜನೆ ಸಿದ್ಧತೆ ಮಾಡಿಕೊಂಡಿಲ್ಲ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಸನ ಖಾಲಿ ಖಾಲಿ ದೃಶ್ಯ ಕಂಡು ಬಂದಿದೆ.

ಸಾಮಾನ್ಯ ವರ್ಗಕ್ಕೆ ಸಿಗುತ್ತಾ ಅಧ್ಯಕ್ಷ ಸ್ಥಾನ: 1996ರಲ್ಲಿ ಶ್ರೀರಂಗಪಟ್ಟಣ ಪುರಸಭೆಗೆ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗದ ಮೀಸಲಾತಿಯನ್ನು ಸರ್ಕಾರ ಮಾಡಿತ್ತು. ಆಗ ಪಟ್ಟಣದ ಬಲರಾಂ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.ಅದು ಬಿಟ್ಟರೆ, ಕಳೆದ 27 ವರ್ಷವಾದರೂ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಾತಿ ದೊರೆಯದೆ ಬೇರೆ ಬೇರೆ ವರ್ಗದ ಮೀಸಲಾತಿಗಳೆಲ್ಲವೂ ಇಲ್ಲಿವರೆಗೆ ಮುಗಿದಿವೆ. ಹಲವು ಬಾರಿ ಉಪಾಧ್ಯಕ್ಷ ಸ್ಥಾನಗಳಿಗೆ ಮಾತ್ರ ಸಾಮಾನ್ಯ ವರ್ಗದ ಮೀಸಲಾತಿ ಸೀಮಿತವಾಗಿ ಬಂದಿತ್ತು. ಸಾಮಾನ್ಯ ವರ್ಗಕ್ಕೆ ಈ ಬಾರಿ ಸಿಗುತ್ತ ದೆಯೇ ಅಧ್ಯಕ್ಷ ಸ್ಥಾನದ ಮೀಸಲಾತಿ ಎಂದು ಸಾಮಾನ್ಯ ವರ್ಗದ ಪುರಸಭಾ ಸದಸ್ಯರು ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ.

Advertisement

ಮೀಸಲಾತಿಗಾಗಿ ಕೋರ್ಟ್‌ ಮೊರೆ: ಈ ಹಿಂದಿನ ಆಡಳಿತದ ಅವಧಿಯ 2017ರ ಸಾಲಿನಲ್ಲಿ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾತಿ ಆದೇಶ ಬಂದಿತ್ತು. ಕಳೆದ 20 ವರ್ಷದಿಂದ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾತಿ ವಂಚನೆಯಾಗಿರುವ ಬಗ್ಗೆ ಹೈಕೋರ್ಟ್‌ ಮೆಟ್ಟಿಲೇರಿ ಸಾಮಾನ್ಯ ವರ್ಗಕ್ಕೆ ಅನ್ಯಾಯವಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಸಾಮಾನ್ಯ ವರ್ಗಕ್ಕೆ ಮೀಸಲು ಜಾರಿ ಮಾಡಿ, ಆದೇಶ ಹೊರಡಿಸಿತ್ತು. ತದ ನಂತರದಲ್ಲಿ ಪುರಸಭೆ ಮಹಿಳಾ ಸದಸ್ಯರೊಬ್ಬರು ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾತಿ ಅನ್ಯಾಯವಾಗಿದೆ ಎಂದು ಮತ್ತೇ ಹೆಚ್ಚುವರಿ ನ್ಯಾಯಾಲದಲ್ಲಿ ಸಾಮಾನ್ಯ ವರ್ಗದ ಮೀಸಲಾತಿಗೆ ತಡೆಯಾಜ್ಞೆಯೊಡ್ಡಿತ್ತು. ನ್ಯಾಯಾಲಯದ ತಡೆಯಾಜ್ಞೆ ವಜಾ ಆಗದೆ, ದಿನಗಳು ಮುಂದುವರಿದು ಸದಸ್ಯರ ಆಡಳಿತಾವಧಿಯೇ ಮುಗಿದಿತ್ತು. ನಂತರ ಚುನಾವಣೆ ನಡೆದು ಹೊಸ ಸದಸ್ಯರು ಬಂದು ಇದೀಗ ಎರಡುವರೆ ವರ್ಷಗಳು ಕಳೆದಿದೆ .

ಸಾಮಾನ್ಯ ವರ್ಗದ ಸದಸ್ಯರಿಗೆ ವಂಚನೆ: ಕಳೆದ 27 ವರ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಸಾಮಾನ್ಯ ವರ್ಗಕ್ಕೆ ಸಿಕ್ಕಿಲ್ಲ. ಹಲವು ಮಂದಿ ಸಾಮಾನ್ಯ ವರ್ಗದಿಂದ ಸದಸ್ಯರಾಗಿ ಅಯ್ಕೆಯಾಗಿ ಬಂದವರಿಗೆ ಸಾಮಾನ್ಯ ವರ್ಗದ ಅಧ್ಯಕ್ಷ ಸ್ಥಾನ ಸಿಗದೇ ವಂಚಿತರಾಗುತ್ತಿದ್ದಾರೆ. ಸರ್ಕಾರ ಈ ಬಾರಿ ಎರಡನೇ ಅವ ಧಿಯ ಮೀಸಲು ಪ್ರಕಟಣೆ ಮಾಡುವ ವೇಳೆ ಶ್ರಿರಂಗಪಟ್ಟಣ ಪುರಸಭೆಯ ಯಾವ ಅವಧಿ ಗಳಲ್ಲಿ ಯಾವ ಮೀಸಲಾತಿ ಆಗಿದೆ ಎಂದು ಪರಿಶೀಲಿಸಿ, ಈ ಬಾರಿಯಾದರೂ ಸರ್ಕಾರದಿಂದ ಸಾಮಾನ್ಯ ವರ್ಗದ ಜನಪ್ರತಿನಿಧಿಗಳಿಗೆ ಎರಡನೇ ಅವಧಿಯಲ್ಲಿ ಆದ್ಯತೆ ನೀಡಿ, ಸಾಮಾನ್ಯ ವರ್ಗಕ್ಕೆ ಮೀಸಲಾತಿ ನೀಡಬೇಕಿದೆ ಎಂದು ಶ್ರೀರಂಗಪಟ್ಟಣ ಪುರಸಭೆ ಸದಸ್ಯ ಎಂ.ಎಲ್‌.ದಿನೇಶ್‌ ತಿಳಿಸಿದ್ದಾರೆ.

ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಗಿದಿದ್ದು, ಹೊಸ ಮೀಸಲಾತಿ ಪ್ರಕಟಣೆಯಾಗುವವರೆಗೂ ಹೊಸ ಆಡಳಿತಾಧಿಕಾರಿಯನ್ನು ಸರ್ಕಾರ ನೇಮಿಸಿದೆ. ಹೊಸ ಮೀಸಲಾತಿ ಆಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಭರ್ತಿವಾಗುವವರೆಗೂ ಕಚೇರಿ ಕೆಲಸ ವಿಳಂಭವಾಗುತ್ತಿರುವ ಬಗ್ಗೆ ಜನರಿಂದ ತಿಳಿದು ಬಂದಿದೆ.

ಉಪ ವಿಭಾಗಾಧಿಕಾರಿಗಳು ಹಾಗೂ ಮುಖ್ಯಾಧಿಕಾರಿಗಳು ಸೇರಿ ಸ್ಥಾಯಿ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಕರೆಯಲು ಚರ್ಚೆ ಮಾಡಲಾಗುತ್ತದೆ. ಇನ್ನೆರಡು- ಮೂರು ದಿನದಲ್ಲಿ ಎಲ್ಲವೂ ಸ್ಪಷ್ಟವಾಗುತ್ತದೆ. – ನಿಂಗರಾಜು, ಸ್ಥಾಯಿ ಸಮಿತಿ ಅಧ್ಯಕ್ಷ, ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣ ಪುರಸಭೆ ಅಧ್ಯಕ್ಷರ ಆಡಳಿತಾವಧಿ ಮುಗಿದಿದ್ದು, ಈ ಹಿಂದೆ ಇದ್ದ ಉಪವಿಭಾಗಾಧಿಕಾರಿ ಅಕ್ರಂ ಪಾಷ ಅವರು ಆಡಳಿತಾಧಿಕಾರಿಯಾಗಿ ದ್ದರು. ಇದೀಗ ಅವರು ವರ್ಗಾವಣೆಗೊಂಡಿ ದ್ದಾರೆ. ಹೊಸದಾಗಿ ಬಂದಿರುವ ಉಪವಿಭಾಗಾಧಿಕಾರಿ ನಂದೀಶ್‌ ಆಡಳಿತಾಧಿಕಾರಿಯಾಗಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷರು, ಸ್ಥಾಯಿ ಸಮಿತಿಗಷ್ಟೇ ಇರುತ್ತಾರೆ. ಹೊಸ ಆಡಳಿತಾಧಿಕಾರಿಗಳನ್ನು ಭೇಟಿ ಮಾಡಿ, ಇಲ್ಲಿನ ಮಾಹಿತಿ ತಿಳಿಸಿ, ಮುಂದಿನ ದಿನಗಳಲ್ಲಿ ಅವರ ಆದೇಶಪಡೆದು ಸಾಮಾನ್ಯ ಸಭೆ ಮಾಡಲು ಮುಂದಾಗುತ್ತೇವೆ. – ಸಂದೀಪ್‌ ಕುಮಾರ್‌, ಮುಖ್ಯಾಧಿಕಾರಿ, ಪುರಸಭೆ, ಶ್ರೀರಂಗಪಟ್ಟಣ

– ಗಂಜಾಂ ಮಂಜು

Advertisement

Udayavani is now on Telegram. Click here to join our channel and stay updated with the latest news.

Next