Advertisement

Reservation for Kannadigas: ಖಾಸಗಿ ಸಂಸ್ಥೆಗಳ ಕನ್ನಡಿಗರಿಗೆ ಮೀಸಲು; ಉದ್ಯಮಿಗಳ ಟೀಕೆ

09:31 PM Jul 17, 2024 | Team Udayavani |

ಬೆಂಗಳೂರು: ರಾಜ್ಯದ ಎಲ್ಲಾ ಖಾಸಗಿ ಕೈಗಾರಿಕೆಗಳಲ್ಲಿ “ಸಿ ಮತ್ತು ಡಿ” ದರ್ಜೆಯ ಹುದ್ದೆಗಳಿಗೆ ನೂರಕ್ಕೆ ನೂರು, ಆಡಳಿತಾತ್ಮಕೇತರ ಹುದ್ದೆಗಳಿಗೆ ಶೇ.75 ಹಾಗೂ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.50ರಷ್ಟು ಕನ್ನಡಿಗರ ನೇಮಕಾತಿ ಕಡ್ಡಾಯಗೊಳಿಸುವ ವಿಧೇಯಕಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿರುವುದಕ್ಕೆ   ಉದ್ಯಮಿಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.

Advertisement

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪರ ವಿರೋಧ ಚರ್ಚೆಯಾಗುತ್ತಿದ್ದು ಇದಕ್ಕೆ ಉದ್ಯಮಿಗಳಾದ  ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಸೇರಿದಂತೆ ಕೈಗಾರಿಕೋದ್ಯಮಿಗಳು  ವಿರೋಧ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರ್ಕಾರದ ವಿಧೇಯಕಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಉದ್ಯಮಿ ಟಿ.ವಿ. ಮೋಹನ್‌ದಾಸ್‌ ಪೈ ” ಉದ್ಯೋಗಕ್ಕಾಗಿ ಕನ್ನಡಿಗರನ್ನು ಉತ್ತೇಜಿಸಲು ಬಯಸಿದರೆ ನೀವು (ಕರ್ನಾಟಕ ಸರ್ಕಾರ) ಉನ್ನತ ಶಿಕ್ಷಣಕ್ಕಾಗಿ
ಹೆಚ್ಚಿನ ಹಣವನ್ನು ವ್ಯಯಿಸಿ ಅವರಿಗೆ ಉತ್ತಮ ತರಬೇತಿ ನೀಡಿ, ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಹಣ ಒದಗಿಸಿ ಇಂಟರ್ನ್‌ಶಿಪ್‌ಗಳು, ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮಗಳಿಗೆ ಹೆಚ್ಚಿನ ಹಣ ಖರ್ಚು ಮಾಡಿ. ಆಗ  ಅವರೆಲ್ಲರೂ ಕೌಶಲ್ಯವಂತಾರಾಗುತ್ತಾರೆ. ಈ ರೀತಿ ಅಲ್ಲ. ಈ ಮೂಲಕ ನೀವು ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೀರಿ?ʼ ಎಂದು ಪ್ರಶ್ನಿಸಿದರು. 


ಸಂಪುಟದ ನಿರ್ಧಾರ ಸಮರ್ಥಿಸಿದ ಸಚಿವರು:  

ಉದ್ಯಮಿಗಳ ಟೀಕೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್  ಖರ್ಗೆ “ಯಾರೂ ಭಯಪಡುವ ಅಗತ್ಯವಿಲ್ಲ. ನಾವು ಸುದೀರ್ಘ ಸಮಾಲೋಚನೆಗಳ ನಡೆಸುತ್ತೇವೆ ಮತ್ತು ಒಮ್ಮತಕ್ಕೆ ಬರಲಿದ್ದೇವೆ. ಸ್ಥಳೀಯ ನಿವಾಸಿಗಳಿಗೆ ಉದ್ಯೋಗಗಳ ಒದಗಿಸುವುದು ಮತ್ತು ಜತೆ ಜತೆಗೇ ಹೂಡಿಕೆಗಳನ್ನು ಆಕರ್ಷಿಸುವುದು ರಾಜ್ಯ ಸರ್ಕಾರದ ಗುರಿಯಾಗಿದೆ ಎಂದು  ಹೇಳಿದ್ದಾರೆ.

Advertisement

ಈ ಮಸೂದೆಯು ಕಾರ್ಮಿಕ ಇಲಾಖೆಯ ಸಲಹೆಯಾಗಿದೆ. ಈ ಬಗ್ಗೆ ಕೈಗಾರಿಕೆ ಅಥವಾ ಮಾಹಿತಿ ತಂತ್ರಜ್ಞಾನ ಇಲಾಖೆಯೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ. ಆದ್ದರಿಂದ, ನಮ್ಮೊಂದಿಗೆ ಮತ್ತು ಇತರ ಮುಖಂಡರೊಂದಿಗೆ ಸಮಾಲೋಚನೆ ನಡೆಸುವಂತೆ ನಾವು ಸಿಎಂಗೆ ಮನವಿ ಮಾಡಿದ್ದೇವೆ. ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡುವುದನ್ನು ನಾವು ಹೇಗೆ ಸಾಧ್ಯವಾಗಿಸಬಹುದು ಎಂಬ ಬಗ್ಗೆ ಒಮ್ಮತಕ್ಕೆ ಬರಲಿದ್ದೇವೆ. ನಾವು ಪೈ ಹಾಗೂ ಮಜುಂದಾರ್ ಶಾ ಅವರೊಂದಿಗೆ ಸಮಾಲೋಚನೆ ನಡೆಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಸಚಿವ ಎಂ.ಬಿ.ಪಾಟೀಲ್ ಅಭಯ:
ಮೀಸಲಾತಿ ವಿಚಾರವಾಗಿ ಕೈಗಾರಿಕೋದ್ಯಮಿಗಳ ಜತೆ ಪುನರ್ ಚರ್ಚೆಗೆ ಸಿದ್ಧ ಎಂದು ಸಚಿವ ಎಂ.ಬಿ. ಪಾಟೀಲ್ ಕೂಡ ಹೇಳಿದ್ದಾರೆ. ನಾವು ಚೀನಾದಂತಹ ದೇಶದೊಂದಿಗೆ ಸೆಣಸಾಡಬೇಕಿದೆ. ಕನ್ನಡಿಗರನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡು ಸಿಎಂ, ಡಿಸಿಎಂ ಹಾಗೂ ಕಾರ್ಮಿಕ ಸಚಿವರು, ಕಾನೂನು ಸಚಿವರ ಜೊತೆಗೆ ಚರ್ಚಿಸುತ್ತೇನೆ. ಕನ್ನಡಿಗರ ರಕ್ಷಣೆಯ ಜೊತೆಗೆ ಉದ್ಯಮಗಳ ರಕ್ಷಣೆಯೂ ಆಗಬೇಕಿದೆ ಎಂದು  ಹೇಳಿದ್ದಾರೆ.

ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಮಾತನಾಡಿ ಕನ್ನಡಿಗ ಉದ್ಯೋಗಿಗಳಲ್ಲಿ ಅಂತಹ ಕೌಶಲ್ಯಗಳು
ಲಭ್ಯವಿಲ್ಲದಿದ್ದರೆ, ಜನರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿ ಅವರಿಗೆ ಇಲ್ಲಿ ಕೆಲಸ ನೀಡಬಹುದು.
ಸರ್ಕಾರವು ಸ್ಥಳೀಯವಾಗಿ ಲಭ್ಯವಿರುವ ಕೌಶಲ್ಯಗಳಿಗೆ ಆದ್ಯತೆ ನೀಡಲು ಕಾನೂನನ್ನು ತರಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next