ರಾಯ್ ಪುರ್: ವಿವಾಹಿತ ಮಹಿಳೆಯರಿಗೆ ಛತ್ತೀಸ್ ಗಢ್ ಸರ್ಕಾರದ ಯೋಜನೆಯ ಹೆಸರಿನಲ್ಲಿ ನೂರಾರು ಮಹಿಳೆಯರನ್ನು ವಂಚಿಸಿರುವ ಆಘಾತಕಾರಿ ಘಟನೆಯೊಂದು ವರದಿಯಾಗಿದ್ದು, ಅಚ್ಚರಿಯ ವಿಷಯ ಅಂದರೆ ವ್ಯಕ್ತಿಯೊಬ್ಬ ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ಖಾತೆಯೊಂದನ್ನು ತೆರೆದು ಅದಕ್ಕೆ ಛತ್ತೀಸ್ ಗಢದ ಸರ್ಕಾರದ ಯೋಜನೆ ಎಂದು ಹೆಸರಿಸಿ, ಪ್ರತಿ ತಿಂಗಳು ವಿವಾಹಿತ ಮಹಿಳೆಯರ ಖಾತೆಗೆ ಒಂದು ಸಾವಿರ ರೂ. ಜಮೆಯಾಗಲಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.
“ಬಿಜೆಪಿ ಸರ್ಕಾರದ ಮಹ್ ತಾರಿ ವಂದನ್ ಯೋಜನೆಯಡಿ, ಛತ್ತೀಸ್ ಗಢದ ವಿವಾಹಿತ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಜಮೆಯಾಗಲಿದೆ. ಆದರೆ ಹಣ ಜಮೆಯಾಗುತ್ತಿದ್ದ ಖಾತೆಯೊಂದು ಸನ್ನಿ ಲಿಯೋನ್ ಹೆಸರಿನಲ್ಲಿರುವುದು ಬೆಳಕಿಗೆ ಬಂದಿತ್ತು”.
ಈ ಖಾತೆ ವೀರೇಂದ್ರ ಜೋಶಿ ಎಂಬಾತನ ಹೆಸರಿನಲ್ಲಿರುವುದು ಪತ್ತೆಯಾಗಿತ್ತು. ಇದೀಗ ಜೋಶಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಅಲ್ಲದೇ ಯೋಜನೆಯಡಿ ಹಣ ಪಡೆದವರ ಖಾತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿರುವುದಾಗಿ ವರದಿ ತಿಳಿಸಿದೆ.
ಛತ್ತೀಸ್ ಗಢದ ಬಸ್ತಾರ್ ಪ್ರದೇಶದ ತಾಲೌರ್ ಗ್ರಾಮದಲ್ಲಿ ಈ ವಂಚನೆ ಬೆಳಕಿಗೆ ಬಂದಿತ್ತು. ಬಳಿಕ ಜಿಲ್ಲಾಧಿಕಾರಿ ಹ್ಯಾರಿಸ್ ಎಸ್ ಅವರು ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಬ್ಯಾಂಕ್ ಖಾತೆ ಜಪ್ತಿ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚನೆ ನೀಡಿರುವುದಾಗಿ ವರದಿ ವಿವರಿಸಿದೆ.