Advertisement

ಮಹಿಳಾಧಿಕಾರಕ್ಕೆ ಅವಕಾಶ ಕಲ್ಪಿಸಿದೆ ಮೀಸಲಾತಿ

10:21 AM Sep 05, 2018 | |

ಪುತ್ತೂರು: ನಗರಸಭಾ ಚುನಾವಣೆಯ ಮತ ಎಣಿಕೆ ಮುಗಿದ ಬೆನ್ನಿಗೇ ಮೀಸಲಾತಿ ಪಟ್ಟಿಯನ್ನೂ ಸರಕಾರ ಹೊರಡಿಸಿದೆ. ಮೀಸಲಾತಿ ಪಟ್ಟಿಯ ಪ್ರಕಾರ ಪುತ್ತೂರು ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡೂ ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಪುತ್ತೂರು ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಮೀಸಲಾತಿ ನಿಗದಿಯಾಗಿದೆ. ನಗರಸಭೆಯ 31 ವಾರ್ಡ್‌ ಸ್ಥಾನಗಳಲ್ಲಿ 25 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಈ ಎರಡೂ ಮೀಸಲಾತಿ ಅಭ್ಯರ್ಥಿಗಳನ್ನು ಹೊಂದಿರುವುದರಿಂದ ಪುತ್ತೂರು ನಗರಸಭೆಯಲ್ಲಿ ಬಿಜೆಪಿಯ ಮಹಿಳಾ ಆಡಳಿತ ಪಾರಮ್ಯ ಮೆರೆಯುವುದು ನಿಶ್ಚಿತ.

Advertisement

ನಗರಸಭಾ ಚುನಾವಣೆಗೆ ಬಿಜೆಪಿಯಿಂದ 14 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದು, 12 ಮಹಿಳೆಯರು ಗೆಲುವು ಸಾಧಿಸಿದ್ದಾರೆ. ಪ್ರಥಮವಾಗಿ ನಗರಸಭೆಗೆ ಪ್ರವೇಶ ಮಾಡಿರುವ ಎಸ್‌ಡಿಪಿಐನ ಅಭ್ಯರ್ಥಿಯೂ ಮಹಿಳೆ. ಕಾಂಗ್ರೆಸ್‌ನಿಂದ ಗೆದ್ದಿರುವ ಐವರು ಅಭ್ಯರ್ಥಿಗಳಲ್ಲಿ ಒಬ್ಬರು ಮಹಿಳೆ ಇದ್ದಾರೆ. ಸಾಮಾನ್ಯ ಮಹಿಳೆ ಮೀಸಲಾತಿ ಬಂದಿರುವುದರಿಂದ 14 ಮಹಿಳಾ ಸದಸ್ಯರಿಗೂ ಅವಕಾಶ ಇದೆ. ಬಹುಮತ ಇದ್ದವರಿಗೆ ಮಾತ್ರ ಇದು ಸಾಧ್ಯವಾಗುತ್ತದೆ.

ಅಧ್ಯಕ್ಷ ಗಾದಿಗಿದೆ ಪೈಪೋಟಿ
ಬಹುಮತ ಹೊಂದಿರುವ ಬಿಜೆಪಿಯಿಂದ ಸಾಮಾನ್ಯ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೇರಲು ಅರ್ಹರಾದವರ ಪಟ್ಟಿ ದೊಡ್ಡದಿದೆ. ಇವರಲ್ಲಿ ಪ್ರಮುಖವಾಗಿ ವಿದ್ಯಾಗೌರಿ, ಗೌರಿ ಬನ್ನೂರು, ಯಶೋದಾ ಹರೀಶ್‌ ಅವರ ಹೆಸರು ಕೇಳಿ ಬರುತ್ತಿದೆ.

ನಗರಸಭೆಗೆ ಪ್ರಥಮ ಬಾರಿಗೆ ಸ್ಪರ್ಧೆ ನಡೆಸಿ 19 ನೇ ವಾರ್ಡ್‌ನಿಂದ ಗೆಲುವು ಸಾಧಿಸಿರುವ ಹಾಲಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ವಿದ್ಯಾ ಗೌರಿ ಅವರಿಗೆ ಅಧ್ಯಕ್ಷ ಸ್ಥಾನ ಪಡೆಯುವ ಅವಕಾಶಗಳು ಹೆಚ್ಚು ಇವೆ. ಪುತ್ತೂರು ನಗರಸಭೆಯಲ್ಲಿ ಅತಿ ಹೆಚ್ಚು (571) ಮತಗಳ ಅಂತರದಿಂದ ಗೆದ್ದಿರುವುದು ಒಂದಾದರೆ ಮಹಿಳಾ ಮೋರ್ಚಾದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಹೆಗ್ಗಳಿಕೆ ಇವರಿಗಿದೆ. ಜಾತಿ ಲೆಕ್ಕಾಚಾರಕ್ಕೆ ಬಂದಾಗ ಹಾಲಿ ಪುತ್ತೂರಿನಲ್ಲಿ ಬಿಜೆಪಿ ಕಡೆಯಿಂದ ಬ್ರಾಹ್ಮಣ ಸಮುದಾಯಕ್ಕೆ ಹೆಚ್ಚಿನ ಸ್ಥಾನಮಾನ ನೀಡದೇ ಇರುವುದರಿಂದ ವಿದ್ಯಾಗೌರಿ ಅವರಿಗೆ ಇದು ಪೂರಕವಾಗಿ ಅಧ್ಯಕ್ಷ ಸ್ಥಾನ ಲಭಿಸುವ ಸಾಧ್ಯತೆ ಇದೆ.

ವಾರ್ಡ್‌ ಸಂಖ್ಯೆ 4ರಲ್ಲಿ ಗೆಲುವು ಸಾಧಿಸಿರುವ ಗೌರಿ ಬನ್ನೂರು ಅವರು ರಾಜಕೀಯದಲ್ಲಿ ಅನುಭವಿ. ಒಂದು ಬಾರಿ ಬನ್ನೂರು ಗ್ರಾ.ಪಂ. ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಇವರು 2002ರ ಅವಧಿಯಲ್ಲಿ ಪುತ್ತೂರು ಪುರಸಭೆಯ ಸದಸ್ಯರಾಗಿಯೂ ಐದು ವರ್ಷ ಕೆಲಸ ಮಾಡಿದ್ದಾರೆ. ಹಾಲಿ ಪುತ್ತೂರು ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಒಕ್ಕಲಿಗ ಸಮುದಾಯದ ಗೌರಿ ಬನ್ನೂರು ರಾಜಕೀಯ ಅನುಭವ ಪರಿಗಣಿಸಿದರೆ ಅವರಿಗೆ ಅಧ್ಯಕ್ಷ ಗಾದಿ ಒಲಿಯಬಹುದು. 

Advertisement

ವಾರ್ಡ್‌ 18ರಿಂದ ಗೆದ್ದಿರುವ ಯಶೋದಾ ಹರೀಶ್‌ ಅನುಭವಿ. 2008, 2013ರ ಬಳಿಕ ಈ ಸಲ ಮೂರನೇ ಬಾರಿಗೆ ಪುತ್ತೂರು ನಗರಸಭೆಯ ಸದಸ್ಯರಾಗಿದ್ದಾರೆ. ಬಿಲ್ಲವ ಸಮುದಾಯಕ್ಕೆ ಪ್ರಾಶಸ್ತ್ಯದ ದೃಷ್ಟಿಯಿಂದ ಆಯ್ಕೆ ನಡೆಸಿದರೆ ಹಾಗೂ ಅನುಭವವನ್ನು ಪರಿಗಣಿಸಿದರೆ ಯಶೋದಾ ಹರೀಶ್‌ ಅವರಿಗೂ ಅಧ್ಯಕ್ಷ ಗಾದಿ ಏರುವ ಅವಕಾಶ ಸಿಗಬಹುದು.

ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು
ಪುತ್ತೂರು ನಗರಸಭಾ ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ಬಂದಿರುವುದರಿಂದ ಹೆಚ್ಚು ಸ್ಪರ್ಧೆ ಇಲ್ಲ. ವಾರ್ಡ್‌ 22ರಿಂದ ಸ್ಪರ್ಧಿಸಿ ಗೆದ್ದಿರುವ ಶಶಿಕಲಾ ಸಿ.ಎಸ್‌. ಹಾಗೂ ವಾರ್ಡ್‌ 7ರಿಂದ ಆಯ್ಕೆಯಾಗಿರುವ ಲೀಲಾವತಿ ಮಾತ್ರ ಉಪಾಧ್ಯಕ್ಷ ಮೀಸಲಾತಿ ಸ್ಥಾನದ ಅರ್ಹರಾಗಿದ್ದಾರೆ. ಶಶಿಕಲಾ ಪುರಸಭಾ ಸದಸ್ಯರಾಗಿ ಅನುಭವ ಹೊಂದಿದ್ದಾರೆ. ಲೀಲಾವತಿ ಹೊಸ ಮುಖ.

ಸುಳ್ಯ ನ.ಪಂ.ಗೂ ಮೀಸಲಾತಿ ನಿಗದಿ
ಸುಳ್ಯ: ಇಲ್ಲಿನ ನಗರ ಪಂಚಾಯತ್‌ ಗೆ 2019 ರಲ್ಲಿ ನಡೆಯಲಿರುವ ಚುನಾವಣೆಗೆ ಸಂಬಂಧಿಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಪಡಿಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಬಿಸಿಎ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯರಿಗೆ ನಿಗದಿಯಾಗಿದೆ.

ರಾಜೇಶ್‌ ಪಟ್ಟೆ 

Advertisement

Udayavani is now on Telegram. Click here to join our channel and stay updated with the latest news.

Next