ಹುಮನಾಬಾದ: ವಿವಿಧ ಆರೋಪ ಎದುರಿಸುತ್ತಿರುವ ಇಲ್ಲಿನ ಸ್ಥಳೀಯ ಪುರಸಭೆ ಆಡಳಿತ ವಿರುದ್ಧ ಸ್ಥಳೀಯ ಶಾಸಕ ರಾಜಶೇಖರ ಪಾಟೀಲ ಬುಧವಾರ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ 73ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಆಯಾ ಬಡಾವಣೆ ಸದಸ್ಯರು ಸೂಕ್ತ ಕೆಲಸ ನಿರ್ವಹಿಸಿದರೆ ನಮ್ಮ ಹತ್ತಿರ ಜನರು ದೂರುಗಳನ್ನು ಹೇಳುವುದಿಲ್ಲ. ಪಟ್ಟಣದ ಎಲ್ಲಾ ಕಡೆಗಳಲ್ಲಿ ಅಸ್ವತ್ಛತೆ ಎದ್ದು ಕಾಣುತ್ತಿದ್ದು, ಪುರಸಭೆ ಅಧಿಕಾರಿಗಳು, ಸದಸ್ಯರು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಅಭಿವೃದ್ಧಿ ಕಾರ್ಯದಲ್ಲಿ ಯಾರು ಕೂಡ ರಾಜಕೀಯ ಮಾಡಬಾರದು. ಎಲ್ಲರೂ ಒಂದಾಗಿ ಶ್ರಮಿಸಿದರೆ ಮಾತ್ರ ಪಟ್ಟಣದ ಸುಂದರ ಕಾಣಲು ಸಾಧ್ಯ. ಪಟ್ಟಣದ ಅಭಿವೃದ್ಧಿಗಾಗಿ ಹರ್ಷಗುಪ್ತಾ ಜಿಲ್ಲಾಧಿ ಕಾರಿಯಾಗಿದ್ದ ಅವಧಿಯಲ್ಲಿ ಇಲ್ಲಿನ ರಸ್ತೆಗಳ ಅಗಲೀಕರಣ ಮಾಡಲಾಗಿತ್ತು. ಆದರೆ, ರಸ್ತೆ ಪಕ್ಕದಲ್ಲಿ ಜನರು ನಡೆದಾಡುವ ಸ್ಥಳ ಖಾಲಿ ಕಾಣುತ್ತಿಲ್ಲ. ಅಂತಹ ಜಿಲ್ಲಾಧಿಕಾರಿ ಇನ್ನೊಮ್ಮೆ ಬೀದರ ಜಿಲ್ಲೆಗೆ ಬರಬೇಕಾಗಿದೆ ಎಂದು ಹೇಳಿದರು.
ಪಟ್ಟಣದಲ್ಲಿ ಈಜುಕೊಳ ನಿರ್ಮಾಣಕ್ಕೆ ಅನೇಕ ತಿಂಗಳಿಂದ ಭೂಮಿ ಹುಡುಕುತ್ತಿದ್ದು, ಪಟ್ಟಣದಲ್ಲಿ ಯಾವುದೇ ಖಾಲಿ ಭೂಮಿ ದೊರೆಯುತ್ತಿಲ್ಲ. ಸರ್ಕಾರಿ ಭೂಮಿಗಳು ಅತಿಕ್ರಮಣಗೊಂಡಿದ್ದು, ಈ ಕುರಿತು ಭೂಪಯ್ನಾ ಕಮಿಟಿಯಲ್ಲಿ ನಾನು ಕೂಡ ಸದಸ್ಯನಾಗಿದ್ದು, ಇಲ್ಲಿನ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಸಿ ಸೂಕ್ತ ಕ್ರಮಕ್ಕೆ ಸೂಚಿಸಲಾಗುವುದು. ಪಟ್ಟಣದ ಅಭಿವೃದ್ಧಿಗಾಗಿ ನಗರೋಥಾನ ಯೋಜನೆಯಡಿ ಹುಮನಾಬಾದ, ಚಿಟಗುಪ್ಪ ಹಾಗೂ ಹಳ್ಳಿಖೇಡ(ಬಿ) ಪುರಸಭೆಗಳಿಗೆ ತಲಾ 10 ಕೋಟಿ ಅನುದಾನದ ಬಿಡುಗಡೆಗೊಂಡಿದ್ದು, ವಿವಿಧ ಬಡಾವಣೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ, ಅಭಿವೃದ್ಧಿ ಕಾರ್ಯಗಳ ಕ್ರಿಯಾ ಯೋಜನೆ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಡಾ| ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ, ತಹಶೀಲ್ದಾರ್ ಡಾ| ಪ್ರದೀಪಕುಮಾರ ಹಿರೇಮಠ, ಟಿಎಪಿಎಂಎಸ್ ಅಧ್ಯಕ್ಷ ಅಭಿಷೇಕ್ ಪಾಟೀಲ, ಡಿವೈಎಸ್‌ಪಿ ಸೋಮಲಿಂಗ ಕುಂಬಾರ, ಸಿಪಿಐ ಮಲ್ಲಿಕಾರ್ಜುನ ಯಾತನೂರ್, ತಾಪಂ ಇಒ ಮುರಗೆಪ್ಪಾ, ಡಾ| ಗೊವಿಂದ್ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.