ಕಾರ್ಕಳ: ಪ್ರತಿಯೊಂದು ವಿದ್ಯಾಸಂಸ್ಥೆಗಳಲ್ಲೂ ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ಹೆಚ್ಚಿನ ಒತ್ತು ನೀಡುವುದು ಅಗತ್ಯ. ತಂತ್ರಜ್ಞಾನಕ್ಕೆ ಸಿಗುತ್ತಿರುವ ಪ್ರಾಮುಖ್ಯ ಅದರ ಮೂಲ ವಾದ ವಿಜ್ಞಾನಕ್ಕೂ ದೊರೆಯಬೇಕು ಎಂದು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್‌ನ ನಿರ್ದೇಶಕ ಪ್ರೊ| ಕರಣಂ ಉಮಾ ಮಹೇಶ್ವರ್ ರಾವ್ ಹೇಳಿದರು.
ಅವರು ಶುಕ್ರವಾರ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯು ಜಂಟಿಯಾಗಿ ನಿಟ್ಟೆಯಲ್ಲಿ ಆಯೋಜಿಸಿದ ಕೆಎಸ್‌ಸಿಎಸ್ ಟಿಯ 40ನೇ ಸರಣಿ – ಎಂಜಿನಿಯರಿಂಗ್ ವಿದ್ಯಾರ್ಥಿ ಯೋಜನೆಗಳ “ಸೆಮಿನಾರ್ ಮತ್ತು ಪ್ರದರ್ಶನ’ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ (ಕೆಸಿಟಿಯು), ಕೈಗಾರಿಕೆ ಮತ್ತು ವಾಣಿಜ್ಯ
ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಉಪ್ಪಿನ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸರಕಾರದಿಂದ ಸಂಶೋಧನೆಗೆ ಹೆಚ್ಚಿನ ಪ್ರಾಶಸ್ತ ಸಿಗುತ್ತಿದೆ. ಮಹಿಳಾ ಸಶಕ್ತೀಕರಣದ ಅಂಗವಾಗಿ ಮಹಿಳಾ ವಾಣಿಜ್ಯೋದ್ಯಮಕ್ಕೆ ಉತ್ತಮ ಪುಷ್ಟಿ ಸಿಗುತ್ತಿದೆ ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯ ಕಾರ್ಯದರ್ಶಿ ಪ್ರೊ| ಎಸ್. ಸುಬ್ರಮಣಿಯನ್ ಮಾತನಾಡಿದರು. 40ನೇ ಸರಣಿಯ ಎಂಜಿನಿಯರಿಂಗ್ ವಿದ್ಯಾರ್ಥಿ ಯೋಜನೆಗಳ ಸೆಮಿನಾರ್ ಮತ್ತು ಪ್ರದರ್ಶನದ ಜೈವಿಕ ಇಂಧನ ವಿದ್ಯಾರ್ಥಿ ಯೋಜನೆ ಕಾರ್ಯಕ್ರಮದ ಟೆಕ್ನಿಕಲ್ ಕಾಂಪೆಂಡಿಯಮ್ ಅನ್ನು ಅನಿಲ್ ಉಪ್ಪಿನ್ ಬಿಡುಗಡೆ ಮಾಡಿದರು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಿರಂಜನ್ ಎನ್. ಚಿಪೂರ್ ಸ್ವಾಗತಿಸಿದರು. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ| ಎಸ್.ಜಿ. ಶ್ರೀಕಂಠೇಶ್ವರ ಸ್ವಾಮಿ ಪ್ರಸ್ತಾವನೆಗೈದರು. ಕಾರ್ಯಕ್ರಮದ ಮುಖ್ಯ ಸಂಯೋಜಕ ಡಾ| ರಾಧಾಕೃಷ್ಣನ್ ಕಾರ್ಯಕ್ರಮದ ರೂಪು ರೇಖೆಯ ಬಗ್ಗೆ ಮಾಹಿತಿ ನೀಡಿದರು. ಸಹಪ್ರಾಧ್ಯಾಪಕ ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿ ದರು. ಬಯೋಫುಯೆಲ್ ಸೆಲ್‌ನ ಪ್ರಧಾನ ವೈಜ್ಞಾನಿಕ ಅಧಿಕಾರಿ ಹಾಗೂ ಸಂಯೋಜಕ ಎಸ್.ಎನ್. ಸೊಂಡೂರ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿ ಯೋಜನೆಗಳು ಪ್ರದರ್ಶನಗೊಂಡವು.
ಪೇಟೆಂಟ್ ಲಭಿಸಲಿ: ವಿನಯ ಹೆಗ್ಡೆ
ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಹಾಗೂ ನಿಟ್ಟೆ ವಿದ್ಯಾಮಂಡಳಿಯ ಅಧ್ಯಕ್ಷ ಎನ್. ವಿನಯ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳು ಪದವಿ ದೊರೆಯಬೇಕು ಎನ್ನುವ ಕಾರಣಕ್ಕಾಗಿ ಪ್ರಾಜೆಕ್ಟ್ ಮಾಡುವುದು ಎನ್ನುವ ಧೋರಣೆಯನ್ನು ಬಿಡಬೇಕು. ವಿದ್ಯಾರ್ಥಿಗಳು ಮಾಡಿದ ಮಾದರಿಗಳು ಪೇಟೆಂಟ್ ಆಗಿ ಪರಿವರ್ತಿತವಾಗಲು ಶಿಕ್ಷಕರು ಮಾರ್ಗದರ್ಶನ ಮಾಡಬೇಕಿದೆ ಎಂದರು.