ಲಾಸ್ ಏಂಜಲೀಸ್: ಕೇಂದ್ರ ವಾಣಿಜ್ಯ ಸಚಿವಾಲಯವನ್ನು ಪುನರ್ ರಚಿಸುವ ಬಗ್ಗೆ ಇರುವ ವರದಿಯನ್ನು ಅಧ್ಯಯನ ಮಾಡಲಾಗುತ್ತಿದೆ. ಜತೆಗೆ ವ್ಯಾಪಾರ ಉತ್ತೇಜನಾ ಮಂಡಳಿ ಸ್ಥಾಪಿಸುವ ಬಗ್ಗೆಯೂ ಯೋಚನೆ ಇದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಅಮೆರಿಕ ಪ್ರವಾಸದಲ್ಲಿ ಇರುವ ಅವರು ಲಾಸ್ ಏಂಜಲೀಸ್‌ನಲ್ಲಿ ಭಾನುವಾರ ಈ ಮಾಹಿತಿ ನೀಡಿದ್ದಾರೆ.
2030ರ ಒಳಗಾಗಿ 2 ಶತಕೋಟಿ ಡಾಲರ್ ಮೌಲ್ಯದ ಸೇವೆಗಳನ್ನು ಮತ್ತು ವಸ್ತುಗಳನ್ನು ರಫ್ತು ಮಾಡಲು ಗುರಿ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ವಾಣಿಜ್ಯ ಸಚಿವಾಲಯವನ್ನು ಪುನರ್ ರಚಿಸುವ ನಿಟ್ಟಿನಲ್ಲಿ ಇರುವ ವರದಿ ಪರಿಶೀಲನೆಯಲ್ಲಿದೆ ಎಂದು ಗೋಯಲ್ ತಿಳಿಸಿದ್ದಾರೆ.
ಜಗತ್ತಿನ ವ್ಯಾಪಾರ ಮತ್ತು ಉದ್ದಿಮೆ ಕ್ಷೇತ್ರದಲ್ಲಿ ದೇಶದ ಪಾಲು ಹೆಚ್ಚಿಸುವುದು, ಹಲವು ಬಹುರಾಷ್ಟ್ರೀಯ ಸಂಸ್ಥೆ- ಸಂಘಟನೆಗಳಲ್ಲಿ ನಾಯಕತ್ವ ವಹಿಸಿಕೊಳ್ಳುವುದು, ದೇಶದ 100 ಬ್ರಾಂಡ್‌ಗಳನ್ನು ಗ್ಲೋಬಲ್ ಚಾಂಪಿಯನ್ ಆಗಿ ರೂಪಿಸುವುದು, ದೇಶದಲ್ಲಿ ಆರ್ಥಿಕ ವಲಯಗಳನ್ನು ಸ್ಥಾಪಿಸುವುದು ಉದ್ದೇಶಿತ ವರದಿಯಲ್ಲಿ ಸೇರಿದೆ ಎಂದಿದ್ದಾರೆ.
ಸದ್ಯ ಇರುವ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ ರಫ್ತು, ಆಮದು ವಿಚಾರಗಳನ್ನು ನೋಡಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಅದು ವ್ಯಾಪಾರ ಉತ್ತೇಜನಾ ಮಂಡಳಿ ಮತ್ತು ಸಮನ್ವಯ ಘಟಕವಾಗಿಯೂ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.