Advertisement

ತರಗತಿ ಆರಂಭವಾದರೂ ಪೂರ್ಣವಾಗದ ದುರಸ್ತಿ

11:54 PM Jun 13, 2023 | Team Udayavani |

ಉಡುಪಿ: ಹೊಸ ಶೈಕ್ಷಣಿಕ ವರ್ಷ ಆರಂಭದ ಜತೆಗೆ ಮಳೆಗಾಲವೂ ಆರಂಭವಾಗಿದೆ. ಆದರೆ, ಜಿಲ್ಲೆಯ ಬಹುಪಾಲು ಸರಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಲ್ಪಿಸಿಲ್ಲ.

Advertisement

ಕೊಠಡಿಗಳು ಸರಿ ಇರದ ಶಾಲೆಗಳಿಗೆ ಕಳೆದ ಸರಕಾರ ವಿವೇಕ ಕೊಠಡಿ ಯೋಜನೆಯಡಿ ತಲಾ ಒಂದು ಅಥವಾ ಎರಡು ಕೊಠಡಿ ಹಂಚಿಕೆ ಮಾಡಿತ್ತು. ಕಾಮಗಾರಿಯನ್ನೂ ಪೂರ್ಣಗೊಂಡಿಲ್ಲ. ಈ ಕೊಠಡಿಗಳು ವಿದ್ಯಾರ್ಥಿಗಳ ಬಳಕೆಗೆ ಸಿಗುವಾಗ ಅರ್ಧವರ್ಷವೇ ಕಳೆಯಬಹುದು. ತಾತ್ಕಾಲಿಕ ದುರಸ್ತಿಗಳು ಸರಿಯಾಗಿ ಆಗಿಲ್ಲ. ತಗಡಿನ ಶೀಟು ಅಪಾಯದ ಸ್ಥಿತಿಯಲ್ಲಿದ್ದರೂ ಅದನ್ನು ಬದಲಿಸುವ ವ್ಯವಸ್ಥೆ ಅಥವಾ ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕಾರ್ಯವೂ ಆಗಿಲ್ಲ.

ಕಳೆದ ಶೈಕ್ಷಣಿಕ ವರ್ಷದಲ್ಲಿ ಜಿಲ್ಲಾಧಿಕಾರಿಯವರು ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಹಲವು ಶಾಲೆಗಳಿಂದ ದುರಸ್ತಿಗೆ ಪ್ರಸ್ತಾವನೆ ಬಂದಿದ್ದವು. ಅವುಗಳಲ್ಲಿ ಯಾವುದು ಕೂಡ ಈ ಸಾಲಿನಲ್ಲಿ ಹರಿಹಾರ ಕಂಡಿಲ್ಲ. ಕಳೆದ ಮಳೆಗಾಲಗದಲ್ಲಿ ವಿಪತ್ತು ಪರಿಹಾರ ನಿಧಿಯಡಿಯಲ್ಲಿ ಕೆಲವು ಶಾಲೆಗಳಿಗೆ ದುರಸ್ತಿ ಕಾಮಗಾರಿ ಮಾಡಲಾಗಿದೆ.

ಕಳೆದ ವರ್ಷ 1.50 ಕೋ.ರೂ. ವೆಚ್ಚದಲ್ಲಿ 70 ಶಾಲೆಗಳನ್ನು ದುರಸ್ತಿ ಮಾಡಲಾಗಿದೆ. ಹಾಗೆಯೇ ರಾಷ್ಟ್ರೀಯ ವಿಪತ್ತು ನಿರ್ವಹಣೆಯಡಿ 240 ಶಾಲೆಗಳನ್ನು ಸುಮಾರು 4.80 ಕೋ.ರೂ. ವೆಚ್ಚದಲ್ಲಿ ಈಗಾಗಲೇ ದುರಸ್ತಿ ಮಾಡಲಾಗಿದೆ. ಈ ವರ್ಷ ಹೆಚ್ಚುವರಿ ಪಟ್ಟಿಯಲ್ಲಿರುವ ಶಾಲೆಗಳಿಗೆ ಇನ್ನು ಅನುದಾನ ಬಾರದ ಹಿನ್ನೆಲೆಯಲ್ಲಿ ಕೆಲವು ಕಾಮಗಾರಿಗಳು ಆಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ನಗರ ಪ್ರದೇಶದಲ್ಲಿ ಸರಕಾರಿ ಶಾಲೆಗಳು ಚೆನ್ನಾಗಿವೆ. ಜಿಲ್ಲೆಯ ಗ್ರಾಮೀಣ ಭಾಗದ ಕೆಲವು ಸರಕಾರಿ ಶಾಲೆಗಳಲ್ಲಿ ವ್ಯವಸ್ಥೆಯ ಇಲ್ಲದೇ ಇರುವುದರಿಂದ ಅಂತಹ ಶಾಲೆಗಳನ್ನು ಸಮೀಪದ ಸುಸಜ್ಜಿತ ಶಾಲೆಗಳೊಂದಿಗೆ ವಿನಲೀನಗೊಳಿಸುವ ಬಗ್ಗೆಯೂ ಅಧಿಕಾರಿಗಳು ವರದಿ ಸಿದ್ಧಪಡಿಸುತ್ತಿದ್ದಾರೆ. ಮಕ್ಕಳ ಸಂಖ್ಯೆ ತೀರ ಕಡಿಮೆಯಿರುವ ಅಥವಾ ಸಾಕಷ್ಟು ಸೌಲಭ್ಯದ ಕೊರತೆ ಇರುವ ಶಾಲೆಗಳನ್ನು ಪಕ್ಷದ ಸರಕಾರಿ ಶಾಲೆಯೊಂದಿಗೆ ವಿಲೀನಗೊಳಿಸಲು ಈ ಹಿಂದೆ ಕೆಲವು ಕ್ರಮವು ಆಗಿತ್ತು. ಆದರೆ, ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಈಗ ರಾಜ್ಯದಿಂದ ಬರುವ ಸೂಚನೆಗೆ ಅನುಸಾರವಾಗಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ.

Advertisement

ಶಾಲೆಗಳ ತಗಡಿನ ಶೀಟುಗಳ ಸಮಸ್ಯೆ
ಜಿಲ್ಲೆಯ ಹಲವು ಸರಕಾರಿ ಶಾಲೆಗಳಿಗೆ ಆರೇಳು ವರ್ಷಗಳ ಹಿಂದೆ ಅವೈಜ್ಞಾನಿಕವಾಗಿ ತಗಡಿನ ಶೀಟು ಅಳವಡಿಸಲಾಗಿದೆ. ಇದರಿಂದ ಬೇಸಗೆ ಕಾಲದಲ್ಲಿ ಮಕ್ಕಳು ಮತ್ತು ಶಿಕ್ಷಕರು ಬಿಸಿಲಿನ ತಾಪಕ್ಕೆ ಕೊಠಡಿಯೊಳಗೆ ಕುಳಿತುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಿದ್ದರೆ, ಮಳೆಗಾಲದಲ್ಲಿ ಮಳೆ ಶಬ್ದ ಹೆಚ್ಚಿರುವುದರಿಂದ ಮಕ್ಕಳಿಗೆ ಪಾಠ ಕೇಳಲು ಸಾಧ್ಯವಾಗುತ್ತಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಶೀಟುಗಳಿಗೆ ತುಕ್ಕು ಹಿಡಿದು, ಅಪಾಯದ ಸ್ಥಿತಿಯಲ್ಲಿದೆ. ಶಾಲೆಯಿಂದಲೂ ಈ ಬಗ್ಗೆ ಅಧಿಕಾರಿಗಳಿಗೆ, ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ತಗಡಿನ ಶೀಟು ಬದಲಿಸುವ ಕಾರ್ಯ ಆಗಿಲ್ಲ.

ಮಳೆಗಾಲದಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಎಲ್ಲ ಶಾಲೆಗಳಲ್ಲೂ ದುರಸ್ತಿ ಕಾರ್ಯ ಆಗಿದೆ. ಹೆಚ್ಚುವರಿ ಪಟ್ಟಿಯಲ್ಲಿರುವ ಶಾಲೆಗಳ ದುರಸ್ತಿ ಕಾರ್ಯ ಇನ್ನಷ್ಟೇ ಆಗಬೇಕಿದೆ. ಮಧ್ಯಾಹ್ನದ ಬಿಸಿಯೂಟಕ್ಕೂ ಯಾವುದೇ ಸಮಸ್ಯೆಯಿಲ್ಲ.
– ಗಣಪತಿ ಕೆ., ಡಿಡಿಪಿಐ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next