Advertisement

ಕೊಠಡಿ ದುರಸ್ತಿಗೊಳಿಸದಿದ್ರೆ “ಪ್ರಾಣಕ್ಕೆ ಸಂಚಕಾರ”

05:23 PM Jun 02, 2022 | Shwetha M |

ಇಂಡಿ: ತಾಲೂಕಿನಾದ್ಯಂತ ಕಂಡು ಸರಕಾರಿ ಶಾಲೆಗಳ ಕೊಠಡಿಗಳ ದುರಸ್ತಿ ಬಗ್ಗೆ ಸರಕಾರ ಅಷ್ಟೊಂದು ಗಮನ ಹರಿಸಿದಂತೆ ಕಾಣುತ್ತಿಲ್ಲ. ಒಂದು ಕಡೆ ಬಾಯೆ¤ರೆದು ಆಹುತಿಗೆ ಕಾಯ್ದು ಕುಳಿತ ಕೊಠಡಿಗಳು, ಇನ್ನೊಂದು ಕಡೆ ಮೇಲ್ಛಾವಣಿಯ ಕಾಂಕ್ರೀಟ್‌ ಯಾವಾಗ-ಯಾರ ತಲೆ ಮೇಲೆ ಬೀಳುತ್ತದೆಯೋ ಎಂಬ ಭಯ.

Advertisement

ಇಂತಹದರ ಮಧ್ಯೆಯೇ ಭಯದಲ್ಲಿಯೇ ಪಾಠ-ಪ್ರವಚನಗಳು ನಡೆಯುತ್ತಿವೆ. ಸರಕಾರಿ ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆ ಹೆಚ್ಚಾಗಿದೆ. ಒಟ್ಟು 290 ಸರಕಾರಿ ಶಾಲೆಗಳ ಪೈಕಿ 43 ಶಾಲೆಗಳಿಗೆ ಇನ್ನೂ ಶೌಚಾಲಯವೇ ಇಲ್ಲ. ಶೌಚಾಲಯ ಒದಗಿಸಬೇಕಾದರೆ 184.9 ಲಕ್ಷ ರೂ. ಅನುದಾನ ಬೇಕಾಗುತ್ತದೆ. 50 ಶಾಲೆಗಳಿಗೆ ಕಾಂಪೌಂಡ್‌ ಇಲ್ಲ. ಇನ್ನು 43 ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇದನ್ನು ನಿರ್ಮಿಸಲು ಸಮಾರು 64.5ಲಕ್ಷ ರೂ. ಅನುದಾನದ ಅವಶ್ಯಕತೆ ಇದೆ. ಸುಮಾರು 95 ಶಾಲೆಗಳ ಮೇಜರ್‌ ರಿಪೇರಿ ಮಾಡಬೇಕಾಗಿದೆ.

ಇಂಡಿ ನಗರದ ಹೃದಯ ಭಾಗದ ಶಾಲೆಯೊಂದರಲ್ಲಿ ಮಳೆ ಬಂದರೆ ಸಾಕು ಇಡೀ ಕೋಣೆಗಳ ಮೇಲ್ಛಾವಣಿಯಿಂದ ನೀರು ಹನಿ-ಹನಿಯಾಗಿ ಸೋರಲು ಆರಂಭವಾಗುತ್ತದೆ. ಮೇಲ್ಛಾವಣಿಯ ಸಿಮೆಂಟ್‌ ಕಡಿದು ಬೀಳುವ ಸ್ಥಿತಿಯಲ್ಲಿದ್ದು, ಪಾಠ-ಪ್ರವಚನ ಹೇಳಲು-ಕೇಳಲು ಸಾಧ್ಯವಾಗದಂತಾಗಿದೆ.

ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿರುವ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ ಪಟ್ಟಣದ ಹೃದಯಭಾಗದಲ್ಲಿರುವುದರಿಂದ ಸಾಕಷ್ಟು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಆದರೆ ಅಲ್ಲಿನ ಕೋಣೆಗಳ ದುಸ್ಥಿತಿ-ಮೇಲ್ಛಾವಣಿಯಿಂದ ಬೀಳುತ್ತಿರುವ ಸಿಮೆಂಟ್‌ ಕಂಡರೆ ಯಾರೂ ತಮ್ಮ ಮಕ್ಕಳನ್ನು ಆ ಶಾಲೆಗೆ ದಾಖಲಾತಿ ಮಾಡದಂತಾಗಿದೆ.

ಇಷ್ಟಿದ್ದರೂ ಮಕ್ಕಳು-ಶಿಕ್ಷಕರು ಜೀವ ಕೈಯಲ್ಲಿ ಹಿಡಿದುಕೊಂಡು ಪಾಠ ಮಾಡುತ್ತಿದ್ದಾರೆ. ಯಾವಾಗ ಬೇಕಾದರೂ ಮೇಲ್ಛಾವಣಿ ಕುಸಿಯಬಹುದು ಎಂಬ ಭಯ ಮಾತ್ರ ವಿದ್ಯಾರ್ಥಿ ಮತ್ತು ಶಿಕ್ಷಕರಲ್ಲಿದೆ. ಶಾಲೆ ದುರಸ್ತಿಗೊಳಿಸಲು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರು ಪುರಸಭೆಗೆ ಹತ್ತಾರು ಬಾರಿ ಮೌಖೀಕ-ಲಿಖೀತವಾಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಮಧ್ಯಾಹ್ನ ಬಿಸಿಯೂಟ ಅಡುಗೆ ಕೋಣೆಯ ಮೇಲ್ಛಾವಣಿಯೂ ಕುಸಿಯುವ ಹಂತದಲ್ಲಿದ್ದು, ಅಡುಗೆಯವರು ಸಹ ಜೀವ ಕೈಯಲ್ಲಿ ಹಿಡಿದು ಅಡುಗೆ ಮಾಡುವ ಅನಿವಾರ್ಯತೆ ಇದೆ.

Advertisement

ತಾಲೂಕಿನಾದ್ಯಂತ ಸುಮಾರು 6 ಶಾಲೆಗಳು ನೆಲಸಮ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನೆಲಸಮ ಮಾಡಿದ ಜಾಗದಲ್ಲಿ ಮರಳಿ ಹೊಸ ಶಾಲಾ ಕಟ್ಟಡ ಮಾಡಬೇಕು. ಆದರೆ ಶಿಥಿಲಗೊಂಡ ಶಾಲೆಗಳಲ್ಲಿ ಮಕ್ಕಳನ್ನು ಕೂಡಿಸಿ ಪಾಠ ಮಾಡಲು ಅನುಮತಿ ನೀಡಿಲ್ಲ. ವಿದ್ಯಾರ್ಥಿಗಳನ್ನು ಬೇರೆ ಕ್ಲಾಸ್‌ ರೂಮಿನಲ್ಲಿ ಕೂಡಿಸಿ ವಿದ್ಯಾಭ್ಯಾಸ ಮಾಡಲು ಅನುವು ಮಾಡಲಾಗಿದೆ. -ವಸಂತ ರಾಠೊಡ,ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇಂಡಿ

16 ಕೋಣೆಗಳಿದ್ದು 4 ಕೋಣೆಗಳು ಮಾತ್ರ ಸುಸಜ್ಜಿತವಾಗಿವೆ. 12 ಕೋಣೆಗಳ ಮೇಲ್ಛಾವಣಿ ಕುಸಿಯುತ್ತಿದೆ. ಕಳೆದ ಹಲವು ವರ್ಷಗಳಿಂದ ಶಾಲೆಯ ಮೇಲ್ಛಾವಣಿ ಕುಸಿಯುತ್ತಿದೆ. ಸಂಬಂಧಿಸಿದ ಬಿಇಒ ಅವರಿಗೆ ಹಾಗೂ ಪುರಸಭೆಗೆ ಸಾಕಷ್ಟು ಸಾರಿ ಮನವಿ ಮಾಡಿದ್ದೇವೆ. -ಶ್ರೀಮತಿ ಜಿ.ಆರ್‌. ಕಟಕಧೋಂಡ, ಮುಖ್ಯ ಶಿಕ್ಷಕಿ

ಇಂಡಿ ತಾಲೂಕಿನಾದ್ಯಂತ ಶಿಥಿಲಗೊಂಡ ಅನೇಕ ಶಾಲೆಗಳಿದ್ದು ಅವುಗಳನ್ನು ನೆಲಸಮಗೊಳಿಸಬೇಕು. ಇಲ್ಲವಾದರೆ ಮಕ್ಕಳ ಪ್ರಾಣಕ್ಕೆ ಸಂಚಕಾರ ಬರಬಹುದು. ಶಿಕ್ಷಣ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಶೈಕ್ಷಣಿಕ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲು ಸರಕಾರ-ಅಧಿಕಾರಿಗಳು ಮುಂದಾಗಬೇಕು. -ಚಂದ್ರಶೇಖರ ಹೊಸಮನಿ, ಸಾಮಾಜಿಕ ಕಾರ್ಯಕರ್ತ ಇಂಡಿ

-ಯಲಗೊಂಡ ಬೇವನೂರ

Advertisement

Udayavani is now on Telegram. Click here to join our channel and stay updated with the latest news.

Next