ಆನಂದಪುರ: ಖ್ಯಾತ ನಾಟಿ ವೈದ್ಯ ಶಿವಮೊಗ್ಗ ಜಿಲ್ಲೆಯ ನರಸೀಪುರ ಗ್ರಾಮದ ನಾರಾಯಣ ಮೂರ್ತಿ(80) ಅವರು ಬುಧವಾರ ರಾತ್ರಿ ಹೃದಯಾ ಘಾತದಿಂದ ನಿಧನರಾದರು. ವಾರದಲ್ಲಿ ಎರಡು ದಿನ ಗುರುವಾರ ಮತ್ತು ಭಾನುವಾರ ಅವರು ನಾಟಿ ಔಷಧ ನೀಡುತ್ತಿದ್ದರು. ಸ್ವತಃ ಕಾಡಿಗೆ ತೆರಳಿ ಗಿಡಮೂಲಿಕೆ ತಂದು ಔಷಧ ತಯಾರಿಸುತ್ತಿದ್ದರು. ಕ್ಯಾನ್ಸರ್, ಮಧುಮೇಹ, ಚರ್ಮರೋಗ, ಅಲರ್ಜಿ, ಗರ್ಭಕೋಶ ಸಮಸ್ಯೆ, ಕಿಡ್ನಿ ಸಮಸ್ಯೆ ಮುಂತಾದ ಕಾಯಿಲೆಗಳಿಗೆ ಔಷಧ ನೀಡುತ್ತಿದ್ದರು.
ಕ್ಯಾನ್ಸರ್ ರೋಗಕ್ಕೆ ಔಷಧ ಪಡೆಯಲು ರಾಜ್ಯ, ಅಂತಾರಾಜ್ಯ ಹಾಗೂ ವಿದೇಶಗಳಿಂದಲೂ ರೋಗಿಗಳು ಬರುತ್ತಿದ್ದರು. ಆ ಪೈಕಿ ಸಾಕಷ್ಟು ಮಂದಿ ಗುಣಮುಖರಾಗಿರುವ ಮಾಹಿತಿ ಇದೆ. ಇತ್ತೀಚಿನ ವರ್ಷಗಳಲ್ಲಿ ಅವರ ಬಳಿ ಔಷಧಿಗಾಗಿ ಅಪಾರ ಸಂಖ್ಯೆಯ ರೋಗಿಗಳು ಬರುತ್ತಿದ್ದರು. ಆರಂಭದಲ್ಲಿ ಚಕ್ಕೆಗಳ ಮೂಲಕ ಔಷಧ ನೀಡುತ್ತಿದ್ದರು. ಕ್ರಮೇಣ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಚಕ್ಕೆಯನ್ನು ಪುಡಿ ಮಾಡಿ ಔಷಧ ವಿತರಿಸಲು ಆರಂಭಿಸಿದ್ದರು.
ಮೂರ್ತಿ ಅವರ ಸೇವೆಯನ್ನು ಗುರುತಿಸಿ ಆನಂದಪುರ, ಸಾಗರ, ಶಿವಮೊಗ್ಗ ಹಾಗೂ ರಾಜ್ಯದ ವಿವಿಧ ಸಂಘ-ಸಂಸ್ಥೆಗಳು ಅವರನ್ನು ಗೌರವಿಸಿ, ಸನ್ಮಾನಿಸಿವೆ. ನಾರಾಯಣ ಮೂರ್ತಿ ಅವರು ಚಿಕ್ಕವರಾಗಿದ್ದಾಗ ತಪಸ್ವಿ ಶ್ರೀವರದಹಳ್ಳಿಯ ಶ್ರೀಧರ ಸ್ವಾಮಿಗಳು ಅವರ ಮನೆಗೆ ಭಿಕ್ಷೆಗೆ ಬಂದಿದ್ದರು. ಆಗ ನರಸೀಪುರ ಗ್ರಾಮದಲ್ಲಿ ಪ್ರತಿ ವರ್ಷ ಬೆಂಕಿ ಅನಾಹುತದಿಂದ ನೂರಾರು ಮನೆಗಳು ನಾಶವಾಗುತ್ತಿದ್ದ ವಿಷಯ ತಿಳಿಸಿ ಪರಿಹರಿಸುವಂತೆ ಗ್ರಾಮಸ್ಥರು ಮೊರೆಯಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಧರ ಸ್ವಾಮಿಗಳು ಅಲ್ಲಿರುವ ನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೊರಡುವ ವೇಳೆ ಎದುರಿಗೆ ಬಂದ ಬಾಲಕ ನಾರಾಯಣಮೂರ್ತಿ ಅವರನ್ನು ಕರೆದು ತಲೆಯ ಮೇಲೆ ಕೈಯಿಟ್ಟು,
“ನೀನು ವಿಶ್ವ ವಿಖ್ಯಾತ ನಾಟಿ ವೈದ್ಯನಾಗುವೆ’ ಎಂದು ಆಶೀರ್ವದಿಸಿದ್ದರು ಎನ್ನಲಾಗಿದೆ. ನಾರಾಯಣಮೂರ್ತಿ ಅವರೂ ರೋಗಿಗಳಿಗೆ ಔಷಧ ಕೊಡುವಾಗ ಶ್ರೀಧರ ಸ್ವಾಮಿಗಳನ್ನು ಪ್ರಾರ್ಥಿಸಿ ಔಷಧ ಕೊಡುತ್ತಿದ್ದರು. ಅವರು ನಾಲ್ವರು ಪುತ್ರಿಯರು ಹಾಗೂ ಪುತ್ರನನ್ನು ಅಗಲಿದ್ದಾರೆ. ಗುರುವಾರ ಬೆಳಿಗ್ಗೆ ನರಸೀಪುರದಲ್ಲಿ ಅಂತ್ಯಸಂಸ್ಕಾರ ನಡೆಯಿತು. ವಂಶಪಾರಂಪರ್ಯವಾಗಿ ನಾಟಿ ಔಷಧಿ ನೀಡಿಕೆಯನ್ನು ನಾರಾ ಯಣ ಮೂರ್ತಿ ಅವರ ಪುತ್ರ ರಾಘವೇಂದ್ರ ಅವರು ಮುಂದುವರಿಕೊಂಡು ಹೋಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.