Advertisement
ಇವೆಲ್ಲದರ ನಡುವೆ ಸ್ವಲ್ಪವಾದರೂ ಆಚರಿಸಿದ್ದು, ಸಂಭ್ರಮಿಸಿದ್ದು ಗಣೇಶ ಚತುರ್ಥಿ ಮತ್ತು ದೀಪಾವಳಿಯೇ. ಎಲ್ಲ ಹಬ್ಬಗಳಲ್ಲಿ ಮನೆ, ಬೀದಿಗಳನ್ನು ಶುಭ್ರ ಶೃಂಗಾರಗೊಳಿಸುವುದು ಸ್ವಾಭಾವಿಕವೆ. ಆದರೆ, ಬಚ್ಚಲ ಮನೆಗೆ ಶೃಂಗಾರದ ಭಾಗ್ಯ ದೊರಕುವುದು ದೀಪಾವಳಿ ಹಬ್ಬಕ್ಕೇ. ಒಲೆ ಸಾರಿಸಿ ರಂಗೋಲಿ ಹಾಕಿ, ಹಂಡೆಗೆ ಬೂದಿ ಬಳಿದು ಶಿಂಡಲಕಾಯಿ ಸರ ಕುತ್ತಿಗೆಗೆ ಕಟ್ಟಿ ಅಭ್ಯಂಗಕ್ಕೆ ತಯಾರಿ ನಡೆಯುತ್ತಿತ್ತು. ಉಳಿದ ಹಬ್ಬಕ್ಕೆ ಅಕ್ಕಿ ಪಾಯಸ ಇತ್ಯಾದಿ ಸಣ್ಣ ಕಜ್ಜಾಯವಾದರೆ ದೀಪಾವಳಿಗೆ ಮಾತ್ರ ಹೋಳಿಗೆ ತರಹದ ದೊಡ್ಡ ಕಜ್ಜಾಯ. ನಕ್ಷತ್ರ ಬುಟ್ಟಿ ಮಾರುಕಟ್ಟೆಗೆ ಬರುವ ಎರಡು-ಮೂರು ವರುಷಗಳ ಮೊದಲೇ, ನಾಲ್ಕು ಮೂಲೆ ಎಂಟು ಮೂಲೆಯ ಆಕಾಶ ಬುಟ್ಟಿಯನ್ನು ಕೈಯಾರೆ ಮಾಡಿ ಒಳಗೆ ಹಣತೆಯನ್ನಿಟ್ಟು ಕೆಲವು ಬಾರಿ ಬೆಂಕಿ ಕೊಟ್ಟಿದ್ದಿದೆ. ಅದೇ ತರಹದ ಒಳಗೆ ಹಣತೆಗಳನ್ನಿಟ್ಟ ಟೇಬಲ್ ಲ್ಯಾಂಪುಗಳನ್ನು ಈಗ ಕೆಲವು ಬಾರಿ ಫ್ಯಾಬ್ ಇಂಡಿಯಾಗಳಲ್ಲಿ ನೋಡುತ್ತೇನೆ. “ಹುಷಾರು ಬೆಂಕಿ ಹತ್ತಿಕೊಂಡೀತು’ ಎಂದು ಅಲ್ಲಿಯ ಸೇಲ್ಸ್‌ಮನ್ನನಿಗೆ ಹೇಳಬೇಕೆಂದೆನಿಸುತ್ತದೆ. ಜಗುಲಿಯ ಸುತ್ತ ಹಚ್ಚುವಷ್ಟು ಹಣತೆಗಳಿರಲಿಲ್ಲ ಅಥವಾ ಅದು ಆಗ ಹಳೇ ಫ್ಯಾಶನ್ ಆಗಿತ್ತೂ. ಜಗುಲಿಯ ಸುತ್ತ ಸಣ್ಣ ಸಣ್ಣ ಮೇಣದ ಬತ್ತಿ ಹಚ್ಚುತ್ತಿದ್ದೆವು. ಕೊನೆಯದನ್ನು ಹಚ್ಚುವ ವರೆಗೆ ಮೊದಲನೆಯದು ನಂದಿಹೋಗುತ್ತಿತ್ತು. ಆದರೆ, ಈಗ ಮನೆಯಲ್ಲಿರುವ ಮೇಣದ ಬತ್ತಿ ಹಚ್ಚಿದರೆ ನಂದುವುದೇ ಇಲ್ಲ. ಒಳ್ಳೆಯ ಪರಿಮಳ ಬೇರೆ. ರಾತ್ರೆ ನಾವೇ ನಂದಿಸಿ ಮಲಗಬೇಕು. ಎಲ್ಲಾದರೂ ಬೆಂಕಿ ಹತ್ತೀತು ಎನ್ನುವ ಹೆದರಿಕೆ ಬೇರೆ ! ಹೊಸ ಬಟ್ಟೆ, ಸಿಹಿತಿಂಡಿ ವಿನಿಮಯ ಯಾವುದೂ ಇರಲಿಲ್ಲ. ದೇವಸ್ಥಾನದಲ್ಲಿ ಮಾತ್ರ ರಾಶಿ ರಾಶಿ ಹಣತೆಗಳು. ಮತ್ತೆ ದೀಪ ಹಚ್ಚಲು ಸಾಕಾಗಿ ಉಳಿಯುವಷ್ಟು ಎಣ್ಣೆ. ಕಲಶಕ್ಕೇರಿಸಿದ ಬಲ್ಬಿನ ದೀಪವೊಂದನ್ನು ಬಿಟ್ಟರೆ ಇಡೀ ದೇವಸ್ಥಾನವೇ ಹಣತೆಯ ದೀಪದಿಂದ ಕಂಗೊಳಿಸುತ್ತಿತ್ತು. ಒಳಗೆ ಹೊರಗೆ ಎಲ್ಲ ಸ್ತರಗಳಲ್ಲಿ ದೀಪದ ಸಾಲು ಸುತ್ತುವರಿದು ಆಗಲೂ ದೇವಸ್ಥಾನವೇ ಮುಖ್ಯವಾಗಿ ಬೆಳಗಲು ಆ ದೀಪಗಳು ಕೈ ಕೈ ಕಟ್ಟಿ ನಿಲ್ಲುತ್ತಿದ್ದವು. ಈ ಹಬ್ಬದ ನಂತರ ಬರುವ ಕಾರ್ತೀಕಕ್ಕೆ ಇನ್ನೂ ಹೆಚ್ಚು. ಬೀದಿ ದೀಪ, ಮನೆ ದೀಪ, ಸರ್ಕಲ್ ದೀಪ, ಮಾಲ್ ದೀಪ, ಸರ್ಚ್ ಲೈಟ್‌ಗಳಿಲ್ಲದ ಕಾಲದಲ್ಲಿ ನಮಗೂ ಮತ್ತು ನಮ್ಮೂರಿನ ಕೊನೆ ಅಥವಾ ಗುಡ್ಡದ ತುದಿಯಲ್ಲಿರುವ ದೇವಸ್ಥಾನದ ಕಡೆಗೆ ನೆಟ್ಟ ನಮ್ಮ ದೃಷ್ಟಿಗೆ ಅಡ್ಡಬರುವವರೇ ಇರಲಿಲ್ಲ. ಆಗಲೇ ನಮ್ಮ ದೇವಸ್ಥಾನ ಭವ್ಯವಾದದ್ದು ಮತ್ತು ಭಕ್ತಿ ತುಂಬಿದ್ದು. ಆಶ್ಚರ್ಯವೆಂದರೆ ಇವೆಲ್ಲ ಕಾಣುತ್ತಿರುವುದು, ಕಾಡುತ್ತಿರುವುದು, ಭವ್ಯವಾಗುವುದು ಈಗ… ವರ್ತಮಾನದಲ್ಲಿ. ಆಗ ಅದೊಂದು ಸಣ್ಣ ಯಾರೂ ಗಮನಿಸದ ಸಾಮಾನ್ಯ ಆಚರಣೆಯಾಗಿ ಮುಗಿದು ಹೋಯಿತು. ಆಚರಣೆ ತಾಂತ್ರಿಕವೆನಿಸಿದರೂ ಹಬ್ಬ-ಸಂಸ್ಕೃತಿಗಳು ಬದುಕಿದ್ದು, ನೆನಪಿನಲ್ಲಿ ಇದ್ದದ್ದು ಎಲ್ಲವೂ ಇದರಿಂದಲೇ.
Related Articles
Advertisement
ಆಗಲೇ ಪ್ರಸ್ತಾಪಿಸಿದಂತೆ ತಾಯ್ನಾಡಿನ ಒಟ್ಟೂ ಕಲ್ಪನೆ ಮತ್ತು ಕಾಡುವಿಕೆ ತಾಯ್ನಾಡಿನಿಂದ ದೂರ ಬಂದ ಹಾಗೆ. ಆಗಲೇ ನಮ್ಮ ಊರಿನ ದೇವಸ್ಥಾನ ಹತ್ತಿರವಾಗಿದ್ದು, ಭಕ್ತಿ ಬಂದಿದ್ದು. ಹಂಡೆಗೆ ಕಟ್ಟಿದ್ದ ಶಿಂಡ್ಲೆ ಕಾಯಿ ಕಣ್ಣಿಗೆ ಬಿದ್ದಿದ್ದು. ಇಲ್ಲಿ ನಮ್ಮ ದೀಪಾವಳಿ ಹೊಸ ಆಯಾಮವನ್ನು ಪಡೆಯುತ್ತಿದೆ. ಒಂದು ವಾರದ ಮೊದಲೇ ಚಿಕ್ಕ ಚಿಕ್ಕ ಸೃಜನಾತ್ಮಕ ಹಬ್ಬದ ಪ್ರೀತಿ, ಕುಟುಂಬ ಸಂಬಂಧಗಳನ್ನು ವ್ಯಾಖ್ಯಾನಿಸುವ ವಿಡಿಯೋಗಳು, ಶುಭಾಶಯಗಳು ಹರಿದಾಡುತ್ತವೆ. ನಾವು ದೀಪಾವಳಿಯ ದಿನ ಹೊಸ ಬಟ್ಟೆಯನ್ನು ಧರಿಸುತ್ತೇವೆ. ಚಿಕ್ಕವರಿರುವಾಗ ಮಾಡಲಾಗದ ತಿನ್ನಲಾಗದ ಹತ್ತಾರು ತಿಂಡಿಗಳನ್ನು ಮಾಡುತ್ತೇವೆ. ಆನ್‌ಲೈನಿನಲ್ಲಿ ಅಥವಾ ಹಿಂದಿನ ಸಾರಿ ಭಾರತದಿಂದ ಬರುವಾಗ ತಂದ ಹಣತೆ, ಮೇಣದ ಬತ್ತಿಗಳ ಬುತ್ತಿ ಬಿಚ್ಚಿ ಎಲ್ಲವನ್ನೂ ಹಚ್ಚುತ್ತೇವೆ. ಲಕ್ಷ್ಮೀಪೂಜೆ ಕಣ್ಣು ಮಿಟುಕಿಸುವುದರೊಳಗಾಗುತ್ತದೆ. ನೈವೇದ್ಯ ನೆರವೇರಿ ಮಾಡಿದ ಭಕ್ಷವೆಲ್ಲ ಅಡುಗೆ ಮನೆಗೆ ಹೋಗದೇ ಲೈಟಿಂಗ್ ಚೆನ್ನಾಗಿರುವ ಜಾಗ ಸೇರಿ ಫೊಟೊಗೆ ಕಾಯುತ್ತದೆ. ನಾಲ್ಕಾರು ಚೆನ್ನಾಗಿರುವ ದಿಕ್ಕಿನಿಂದ ತೆಗೆದ ಫೊಟೊ, ಹಚ್ಚಿದ ಹಣತೆ ಸುತ್ತ ಹೊಸ ಬಟ್ಟೆ ತೊಟ್ಟ ನಮ್ಮ ಫೊಟೊಗಳು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಆಗುತ್ತವೆ. “ಇನ್ನೂ ಬಂದಿಲ್ಲ, ರಿಫ್ರೆಶ್ ಆಗಿಲ್ಲ, ಯಾರೂ ಇನ್ನೂ ಲೈಕ್ ಮಾಡಿಲ್ಲ’ ಎನ್ನುವ ಧ್ವನಿ ನಮಗೆ ಕೇಳಿಸುತ್ತಿದ್ದರೂ, ಹಸಿದು ಊಟಕ್ಕೆ ಕುಳಿತ ನಮ್ಮ ಮನದಲ್ಲಿ ಕಾಗೆಗೆ ಅನ್ನ ಹಾಕಾಯಿತಲ್ಲ, ಇನ್ನು ಊಟಮಾಡಬಹುದಲ್ಲ ಎಂದು ಅನಿಸುತ್ತಿರುತ್ತದೆ.
ಅದೇ ಸಂಜೆ ಊರಿಗೆ ಫೋನ್ ಮಾಡಿದರೆ ಆ ಕಡೆಯಿಂದ “ಇಂದು ಸ್ನಾನ… ನಿಮ್ಮ ನೆನಪಾಯಿತು… ಮಾವ-ಅತ್ತೆಯೆಲ್ಲ ದೇವಸ್ಥಾನಕ್ಕೆ ದೀಪ ಹಚ್ಚಲಿಕ್ಕೆ ಹೋಗಿದ್ದಾರೆ’ ಎನ್ನುವ ಧ್ವನಿ ಕೇಳಿಸುತ್ತದೆ.
ಸಚ್ಚಿದಾನಂದ ಹೆಗಡೆ