ರಾಣಿಬೆನ್ನೂರ: ಕಳೆದ ಒಂದು ವಾರದಿಂದ ಮಳೆ ವಿಳಂಬವಾಗಿರುವುದರಿಂದ 25-30 ದಿನಗಳ ಗೋವಿನ ಜೋಳದ ಬೆಳೆಗೆ ತೀವ್ರವಾಗಿ ಸೈನಿಕ ಹುಳುವಿನ ಕೀಟದ ಬಾಧೆ ಕಂಡುಬಂದಿದೆ.
ಜೊತೆಗೆ ಲಘು ಪೋಷಕಾಂಶ ಜಿಂಕ್ ಕೊರತೆ ಅಲ್ಲಲ್ಲಿ ಕಂಡುಬಂದಿದೆ. ಕೆಲ ಭಾಗಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಬೆಳೆಯಲಾದ ಮೆಕ್ಕೆಜೋಳ ಬೆಳೆಯಲ್ಲಿ ಈ ಸೈನಿಕ ಹುಳುವಿನ ನಿರ್ವಹಣೆಗಾಗಿ ರೈತರು ಸಮಗ್ರ ನಿರ್ವಹಣಾ ಕ್ರಮಗಳಾದ ಹೊಲದ ಸೂತ್ತಮುತ್ತಲಿನ ಕಳೆಯ ಸಸ್ಯಗಳನ್ನು ಮತ್ತು ಕಸಗಳನ್ನು ಸಂಪೂರ್ಣವಾಗಿ ನಾಶಪಡಿಸಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ| ಅಶೋಕ ಪಿ. ತಿಳಿಸಿದರು.
ತಾಲೂಕಿನ ಇಟಗಿ ಗ್ರಾಮದ ಜಮೀನಿನಲ್ಲಿ ಗೋವಿನ ಜೋಳ ಬೆಳೆದ ಪ್ರಗತಿಪರ ರೈತ ಗುಡ್ಡಪ್ಪ ಮಹದೇವಪ್ಪ ಬಿದರಿ ಇವರ ಕ್ಷೇತ್ರಕ್ಕೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಮೆಕ್ಕೆಜೋಳದ ಬೆಳೆಯಲ್ಲಿ ಪೋಷಕಾಂಶದ ಕೊರತೆ ಹಾಗೂ ಸೈನಿಕ (ಲದ್ದಿ) ಕೀಟದ ಬಾಧೆ ಕಂಡುಬಂದಿದ್ದು, ರೈತರೊಂದಿಗೆ ಚರ್ಚಿಸಿ, ಹಾವೇರಿ ಜಿಲ್ಲೆಯಲ್ಲಿ ಗೋವಿನ ಜೋಳವು ಮುಖ್ಯವಾಗಿದ್ದು, ಆದಕಾರಣ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ಹಾನಿ ತಪ್ಪಿಸಿಕೊಳ್ಳಲು ಸಾಧ್ಯ ಎಂದರು.
ಬಾಧೆಗೊಳಗಾಗಿರುವ ಪ್ರದೇಶದ ಪ್ರತಿಯೊಬ್ಬ ರೈತರು ತಮ್ಮ ಹೊಲದಲ್ಲಿ ಸಾಮೂಹಿಕವಾಗಿ ಸಂಜೆ 7 ರಿಂದ 9 ವರೆಗೆ ದೀಪದ ಬಲೆಗಳನ್ನು ಇಟ್ಟು ಪಂತಗಗಳಿಗೆ ಆಕರ್ಷಿಸಿ ನಾಶಪಡಿಸಬೇಕು. ಹೊಲದ ಸುತ್ತಲೂ ಬೊದು ಹರಿತೆಗೆದು ಅದರಲ್ಲಿ ಮೇಲಾಥಿಯಾನ್ ಅಥವಾ ಪೆನ್ವಲರೇಟ್ ಕೀಟನಾಶಕಗಳನ್ನು ಹಾಕಿ ಕೀಟವು ಒಂದು ಹೊಲದಿಂದ ಮತ್ತೂಂದು ಹೊಲಕ್ಕೆ ಹೋಗದಂತೆ ತಪ್ಪಿಸಲು ಸಾಮೂಹಿಕವಾಗಿ ಈ ಕ್ರಮ ಅಳವಡಿಸಬೇಕು ಎಂದು ಸಲಹೆ ನೀಡಿದರು. ಮರಿ ಹುಳುಗಳು ಒಂದು ಅಥವಾ ಎರಡನೇ ಹಂತದಲ್ಲಿದಾಗ ಮತ್ತು ಬೆಳೆಗಳ ಎತ್ತರ ಕಡಿಮೆ ಇದ್ದಲ್ಲಿ ಇದರ ಹತೋಟಿಗಾಗಿ ಕೀಟನಾಶಕಗಳಾದ ಎಮಾಮೆಕ್ಟಿನ್ ಬೆಂಜೊಯೇಟ್ ಪ್ರತಿ ಲೀಟರ್ ನೀರಿಗೆ 0.25 ಗ್ರಾಂ ನಂತೆ ನೀರಿಗೆ ಅಥವಾ ಲ್ಯಾಂಬಾxಸೈಹ್ಯಾಲೊಥ್ರಿನ್ ಶೇ. 4.9 ಇ.ಸಿ. ಪ್ರ.ಲೀ. ನೀರಿಗೆ 0.5 ಮಿ.ಲೀ. ಲೀಟರ್‌ನಂತೆ ಬೆರೆಸಿ ಸಿಂಪರಣೆ ಮಾಡಬೇಕು ಎಂದರು.
ಕೇಂದ್ರದ ಮಣ್ಣು ವಿಜ್ಞಾನಿಗ ಡಾ| ರಾಜಕುಮಾರ ಜಿ.ಆರ್. ಮಾತನಾಡಿ, ಗೋವಿನ ಜೋಳದ ಬೆಳೆಯಲ್ಲಿ ಕಂಡು ಬರುವ ಪೋಷಕಾಂಶಗಳ ಕೊರತೆ ಬಗ್ಗೆ ವಿವರಿಸಿ, ಎಲೆಗಳು ಕೆಂಪಾಗಿ ಕಾಣುತ್ತಿದ್ದು, ಇದು ರಂಜಕದ ಕೊರತೆಯಾಗಿರುತ್ತದೆ. ಜೊತೆಗೆ ಎಲೆಯ ಅಂಚಿನಲ್ಲಿ ಮತ್ತು ಮಧ್ಯದ ಭಾಗದಲ್ಲಿ ಬಿಳಿಯ ಪಟ್ಟಿಗಳು ಕಾಣಿಸುತ್ತಿದ್ದು, ಇದು ಸತುವಿನ ಕೊರತೆ ಆಗಿರುತ್ತದೆ. ಈ ಪೋಷಕಾಂಶಗಳು ಈ ಬೆಳೆಯ ಎಲೆಗಳು ಕೆಂಪಾಗಿ ಮತ್ತು ಬೆಳ್ಳಗೆ ಕಂಡು ಬಂದ ತಕ್ಷಣ 19:19:19 ನೀರಿನಲ್ಲಿ ಕರಗುವ ರಸಗೊಬ್ಬರ (ಪ್ರತಿ ಲೀಟರ್ ನೀರಿಗೆ 5 ಗ್ರಾಂ) ಹಾಗು ಜಿಂಕ್ ಸಲೆಧೀಟ್ (ಪ್ರತಿ ಲೀಟರ್ ನೀರಿಗೆ 2.5 ಗ್ರಾಂ) ಮಿಶ್ರಣ ಮಾಡಿ ಸಿಂಪರಣೆ
ಮಾಡಬೇಕು ಎಂದರು.
ತದನಂತರ 15 ದಿವಸಗಳ ನಂತರ ಕೊರತೆ ಇದ್ದರೆ ಮತ್ತೂಮ್ಮೆ ಸಿಂಪರಣೆ ಮಾಡುವ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ ಸತತವಾಗಿ ಏಕಬೆಳೆಯಾಗಿ ಗೋವಿನಜೋಳ ಬೆಳೆಯುತ್ತಿದ್ದು, ಈ ಬೆಳೆಯು ಎಕದಳದ ಧಾನ್ಯದ ಗುಂಪಿಗೆ ಸೇರಿದ್ದು ಬೇರೆ ಬೆಳೆಗೆ ಹೋಲಿಸಿದಾಗ ಸತತವಾಗಿ ಬೆಳೆಯುವುದರಿಂದ ಹೆಚ್ಚಾಗಿ ಪೋಷಕಾಂಶಗಳನ್ನು ಹೀರಿಕೊಂಡು ಮಣ್ಣಿನಲ್ಲಿ ಕೊರತೆ ಉಂಟು ಮಾಡುತ್ತದೆ.
ಇತ್ತೀಚಿನ ದಿನಗಳಲ್ಲಿ ರೈತರು ಹೆಚ್ಚಾಗಿ ಮೂಲ ರಸಗೊಬ್ಬರಗಳನ್ನು ಬಳಸುತ್ತಿದ್ದು ಸಾವಯವ ಗೊಬ್ಬರಗಳಾದ ತಿಪ್ಪೆಗೊಬ್ಬರ, ಎರೆಹುಳು ಗೊಬ್ಬರ ಮತ್ತು ಹಸಿರೆಲೆ ಗೊಬ್ಬರಗಳ ಬಳಸುವಿಕೆ ಪ್ರಮಾಣ ಕಡಿಮೆಯಾಗಿರುತ್ತದೆ. ಇದರಿಂದಾಗಿ ಮಣ್ಣಿನಲ್ಲಿ ಲಘು ಪೋಷಕಾಂಶಗಳ ಕೊರತೆ ಹೆಚ್ಚಾಗಿ ಕಂಡುಬರುತ್ತಿದೆ. ಉದಾಹರಣೆಗೆ ಸತು, ಕಬ್ಬಿಣ, ಮೆಗ್ನಿಶಿಯಂ ಈ ಲಘು ಪೋಷಕಾಂಶಗಳ ಕೊರತೆಯಿಂದ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಕುಂಠಿತವಾಗುತ್ತದೆ. ಆದ್ದರಿಂದ ಅವುಗಳ ಪೂರೈಕೆ ಅತ್ಯಗತ್ಯೆ ಎಂದು ತಿಳಿಸಿದರು. ಈ ಸಮಯದಲ್ಲಿ ತೋಟಗಾರಿಕೆ ವಿಜ್ಞಾನಿ ಡಾ| ಸಂತೋಷ ಎಚ್.ಎಂ. ಹಾಗೂ ಗ್ರಾಮದ ರೈತರಾದ ಬಸವರಾಜ ಹಾಲಪ್ಪನವರು ಇತರರಿದ್ದರು.