ಬೆಳಗಾವಿ: “ನನಗೆ ಮಂತ್ರಿ ಸ್ಥಾನ ಹೋದರೂ ಚಿಂತೆ ಇಲ್ಲ. ಅದರ ಬಗ್ಗೆ ತಲೆನೇ ಕೆಡಿಸಿಕೊಂಡಿಲ್ಲ. ಅದಕ್ಕಿಂತ ನನಗೆ
ಧರ್ಮ ಮುಖ್ಯ’ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಸಚಿವ ಸ್ಥಾನ ಇವತ್ತು ಇರುತ್ತದೆ, ನಾಳೆ ಹೋಗುತ್ತದೆ. ಆದರೆ, ಇದೆಲ್ಲಕ್ಕಿಂತ ಧರ್ಮ ಬಹಳ ಮುಖ್ಯ. ನಾನು ಚುನಾವಣೆ ಸಮಯದಲ್ಲಿ ಹರಕೆಗಳನ್ನು ಹೊತ್ತಿದ್ದೆ. ಅವುಗಳನ್ನು ತೀರಿಸುವ ಸಲುವಾಗಿ ಈಗ ಧಾರ್ಮಿಕ
ಕ್ಷೇತ್ರಗಳಿಗೆ ಭೇಟಿ ಕೊಡುತ್ತಿದ್ದೇನೆ.
ನನಗೆ ಸಚಿವ ಪದವಿಗಿಂತ ಧರ್ಮ ಹಾಗೂ ಧಾರ್ಮಿಕ ಚಟುವಟಿಕೆ ಹಾಗೂ ಕೇಂದ್ರಗಳ ಭೇಟಿ ಮುಖ್ಯ’ಎಂದರು. “ನಾನು ಇದುವರೆಗೆ ಐದು ಸಚಿವ ಸಂಪುಟ ಸಭೆಗಳಿಗೆ ಹಾಜರಾಗಿಲ್ಲ. ಮುಂದಿನ ಸಭೆಗೂ ಹಾಜರಾಗುವುದಿಲ್ಲ. ಖಾತೆಯ ಬಗ್ಗೆ ಅಸಮಾಧಾನವಿಲ್ಲ.
ನನಗೆ ಗ್ರಂಥಾಲಯ ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ. ದೇವರ ಮುಂದೆ ನನ್ನ ಕೆಲವು ಬೇಡಿಕೆಗಳಿವೆ. ಅವು ಈಡೇರುವ ತನಕ ಸಂಪುಟ ಸಭೆಗೆ ಹೋಗುವುದಿಲ್ಲ. ದಸರಾ ಹಬ್ಬ ಆಗುವವರೆಗೆ ಸಂಪುಟ ಸಭೆಗೆ ಹಾಜರಾಗಬಾರದು ಎಂದು ನಿರ್ಧರಿಸಿದ್ದೇನೆ. ನನ್ನ ಆಸೆ ಈಡೇರುವವರೆಗೆ ಸರ್ಕಾರಿ ವಾಹನ ಸಹ ಬಳಸುವುದಿಲ್ಲ. ನಮ್ಮ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ವರಿಷ್ಠರ ಜತೆ ಚರ್ಚೆ ನಡೆಸಿದ್ದೇವೆ.
ಆಗ ಮಾಧ್ಯಮಗಳು ತಮಗೆ ಬೇಕಾದ ಹಾಗೆ ವರದಿ ಮಾಡಿದವು. ಕೆಲವರಿಗೆ ಎಲ್ಲವೂ ಹಳದಿಯಾಗೇ ಕಂಡರೆ ನಾನೇನು ಮಾಡಲಿ’ ಎಂದರು.