ಹೊಸದಿಲ್ಲಿ: ಮುಕೇಶ್ ಅಂಬಾನಿ ಮಾಲಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಈಗ ಒಂದೊಂದೇ ಮೈಲುಗಲ್ಲುಗಳನ್ನು ಸ್ಥಾಪಿಸುತ್ತ ಭರ್ಜರಿಯಾಗಿ ಮುನ್ನಡೆಯುತ್ತಿದೆ.
14 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ದಾಟಿರುವ ರಿಲಯನ್ಸ್ ಈಗ ವಿಶ್ವದ 2ನೇ ಬೃಹತ್ ತೈಲ ಕಂಪೆನಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಇದುವರೆಗೆ 2ನೇ ಸ್ಥಾನದಲ್ಲಿದ್ದ ಎಕ್ಸಾನ್ ಮೊಬಿಲ್ ಮಾರುಕಟ್ಟೆ ಮೌಲ್ಯ 13.81 ಲಕ್ಷ ಕೋಟಿ ರೂ.ಗೆ ಕುಸಿದಿದೆ.
ಇನ್ನು ಎಂದಿನಂತೆಯೇ ಸೌದಿ ಅರೇಬಿಯದ ಸೌದಿ ಅರಾಮ್ಕೊ 130 ಲಕ್ಷ ಕೋಟಿ ರೂ. ಮೌಲ್ಯದೊಂದಿಗೆ ಅಗ್ರ ಸ್ಥಾನದಲ್ಲಿದೆ.
Related Articles
ಕೋವಿಡ್ 19 ಕಾರಣಕ್ಕೆ ಜಾಗತಿಕವಾಗಿ ಕಚ್ಚಾತೈಲದ ಬೆಲೆ ಕುಸಿದ ಪರಿಣಾಮ, ಎಕ್ಸಾನ್ ಮೊಬಿಲ್ ಷೇರುಬೆಲೆ ಶೇ.39ರಷ್ಟು ಇಳಿಕೆಯಾಗಿದೆ. ಇದೇ ವೇಳೆ ಈ ವರ್ಷ ರಿಲಯನ್ಸ್ ಷೇರು ಬೆಲೆ ಶೇ.46 ರಷ್ಟು ಏರಿಕೆಯಾಗಿದೆ.
ವಿಶೇಷವೆಂದರೆ ಮಾ.23ರ ಹೊತ್ತಿಗೆ ರಿಲಯನ್ಸ್ ಷೇರುಬೆಲೆ ಪಾತಾಳಕ್ಕೆ ತಲುಪಿದ್ದರಿಂದ ಕಂಪೆನಿಯ ಮಾರುಕಟ್ಟೆ ಮೌಲ್ಯ ಕೇವಲ 5.5 ಲಕ್ಷ ಕೋಟಿ ರೂ. ಆಗಿತ್ತು. ಅದಾದ ಮೇಲೆ ಸತತವಾಗಿ 13 ವಿದೇಶಿ ಕಂಪೆನಿಗಳು ರಿಲಯನ್ಸ್‌ನಲ್ಲಿ ಹೂಡಿಕೆ ಮಾಡಿದ್ದರಿಂದ 1.50 ಲಕ್ಷ ಕೋಟಿ ರೂ. ಹರಿದುಬಂತು. ಇದು ಕಂಪೆನಿಯ ಷೇರುಬೆಲೆಯನ್ನು ಏಕಾಏಕಿ ಗಗನಕ್ಕೇರಿಸಿದೆ.
2024ರಲ್ಲಿ ಜಿಯೋ ಮಾರ್ಟ್‌ಗೆ ದೊಡ್ಡ ಪಾಲು
ದೇಶದಲ್ಲಿ ಅಂತರ್ಜಾಲಾಧಾರಿತ ಮಾರಾಟ 2019ರಲ್ಲಿ ಶೇ.4.7ರಷ್ಟಿತ್ತು. 2024ರಲ್ಲಿ ಈ ಪ್ರಮಾಣ ಶೇ.11ಕ್ಕೇರಲಿದೆ ಎಂದು ಗೋಲ್ಡ್‌ಮ್ಯಾನ್ ಸ್ಯಾಚ್ ಅಂಕಿಸಂಖ್ಯೆಗಳು ತಿಳಿಸಿವೆ. ಇದೇ ವೇಳೆ ಅಂತರ್ಜಾಲದಲ್ಲಿ ದಿನಸಿ ಕೊಳ್ಳುವ ಪ್ರಮಾಣ ದೊಡ್ಡಮಟ್ಟದಲ್ಲಿ ಏರಲಿದೆ.
ರಿಲಯನ್ಸ್‌ನ ಜಿಯೋ ಮಾರ್ಟ್ ಅರ್ಧದಷ್ಟು ಅಂತರ್ಜಾಲ ದಿನಸಿ ಮಾರುಕಟ್ಟೆಯನ್ನು ಆವರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಒಟ್ಟಾರೆ 2024ರ ಹೊತ್ತಿಗೆ ಭಾರತದ ಅಂತರ್ಜಾಲಾಧಾರಿತ ಮಾರುಕಟ್ಟೆ ಗಾತ್ರ 7.4 ಲಕ್ಷ ಕೋಟಿ ರೂ. ಆಗಿರಲಿದೆ ಎನ್ನುವುದು ಗೋಲ್ಡ್‌ಮ್ಯಾನ್ ಸ್ಯಾಕ್ ವರದಿಯ ಮುಖ್ಯಾಂಶ.