Advertisement

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

11:44 PM Nov 14, 2024 | Team Udayavani |

ನವದೆಹಲಿ: ಸ್ಟಾರ್‌ ಇಂಡಿಯಾ ಪ್ರೈ.ಲಿ. ಜತೆಗೆ ಜಿಯೋ ಸಿನಿಮಾ ಮತ್ತು ವಯಾಕಾಮ್‌ 18 ಮಾಧ್ಯಮ ಸಂಸ್ಥೆ ವಿಲೀವು ಅಧಿಕೃತಗೊಂಡಿದೆ ಎಂದು ರಿಲಯನ್ಸ್‌ ಇಂಡ್‌ಸ್ಟ್ರೀಸ್‌, ವಯಾಕಾಮ್‌ 18 ಮೀಡಿಯಾ ಪ್ರೈ. ಲಿ. ಹಾಗೂ ದಿ ವಾಲ್ಟ್ ಡಿಸ್ನಿ ಕಂಪನಿ ಗುರುವಾರ ಘೋಷಿಸಿವೆ.

Advertisement

ಈ ಜಂಟಿ ಪಾಲಾದರಿಕೆ ವಹಿವಾಟು ಮೊತ್ತ 70,352 ಕೋಟಿ ರೂ.(850 ಕೋಟಿ ಡಾಲರ್‌) ಆಗಿದ್ದು, ಬಳಿಕ ಈ ಜಂಟಿ ಪಾಲುದಾರಿಕೆಯನ್ನು ರಿಲಯನ್ಸ್‌ ಇಂಡಸ್ಟ್ರೀಸ್‌ ನಿರ್ವಹಿಸಲಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಶೇ.16.34, ವಯಾಕಾಮ್‌ 18 ಶೇ.46.82 ಮತ್ತು ಡಿಸ್ನಿ ಶೇ.36.84 ಪಾಲು ಹೊಂದಲಿವೆ. ನೀತಾ ಅಂಬಾನಿ ಈ ಪಾಲುದಾರಿಕೆಯ ನೇತೃತ್ವವನ್ನು ವಹಿಸಲಿದ್ದಾರೆ.

ಈ ವಿಲೀನದಿಂದಾಗಿ ಭಾರತದ ಪ್ರಮುಖ ಮನರಂಜನಾ ಬ್ರ್ಯಾಂಡ್‌ಗಳಾದ ಸ್ಟಾರ್‌, ಕಲರ್ಸ್‌ ಟೀವಿ ಹಾಗೂ ಡಿಜಿಟಲ್‌ ವೇದಿಕೆಗಳಾದ ಜಿಯೋ ಸಿನಿಮಾ ಮತ್ತು ಹಾಟ್‌ಸ್ಟಾರ್‌ ಒಂದುಗೂಡಲಿವೆ. ಈ ಮೂಲಕ ಭಾರತ ಮತ್ತು ಅಂತಾರಾಷ್ಟ್ರೀಯವಾಗಿ ಮನರಂಜನೆ ಹಾಗೂ ಕ್ರೀಡಾ ವಿಭಾಗದಲ್ಲಿ ವೈವಿಧ್ಯಮಯ ಕಂಟೆಂಟ್‌ ಒದಗಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
ವಯಾಕಾಮ್‌ 18ನ ಮಾಧ್ಯಮ ಮತ್ತು ಜಿಯೋಸಿನಿಮಾ ವ್ಯವಹಾರಗಳನ್ನು ಸ್ಟಾರ್‌ ಇಂಡಿಯಾ ವಿಲೀನವಾಗುವುದರೊಂದಿಗೆ ಇದು ಭಾರತದ ಅತಿದೊಡ್ಡ ಮಾಧ್ಯಮ ಘಟಕಗಳಲ್ಲಿ ಒಂದಾಗಿ ಹೊರ ಹೊಮ್ಮಲಿದೆ. ವಿಲೀನವು 100ಕ್ಕೂ ಹೆಚ್ಚು ಚಾನೆಲ್‌ಗ‌ಳನ್ನು ನಿರ್ವಹಿಸಲಿದೆ. ವಾರ್ಷಿಕವಾಗಿ 30,000 ಗಂಟೆಗಳಿಗಿಂತ ಹೆಚ್ಚಿನ ಕಂಟೆಂಟ್‌ ಉತ್ಪಾದಿಸಲಿದೆ. ಜತೆಗೆ ಜಿಯೋ ಸಿನಿಮಾ ಮತ್ತು ಹಾಟ್‌ ಸ್ಟಾರ್‌ ಒಟ್ಟು 5 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಲಿದ್ದು, ಕ್ರಿಕೆಟ್‌ ಮತ್ತು ಫ‌ುಟ್ಬಾಲ್‌ ಸೇರಿದಂತೆ ಕ್ರೀಡಾ ಕಾರ್ಯಕ್ರಮ ಹಕ್ಕುಗಳ ಗಮನಾರ್ಹ ಸಾಧನೆ ಮಾಡಲಿದೆ.

ವಿಲೀನದಿಂದ ಏನಾಗಲಿದೆ?
– ಸ್ಟಾರ್‌, ಕಲರ್ಸ್‌ ಟೀವಿ, ಜಿಯೋ ಸಿನಿಮಾ, ಹಾಟ್‌ಸ್ಟಾರ್‌ ವಿಲೀನ
– ದೇಶದ ಅತಿದೊಡ್ಡ ಮಾಧ್ಯಮ ಘಟಕವಾಗಿ ರೂಪುಗೊಳ್ಳುವ ಅವಕಾಶ
– ಒಂದೇ ವೇದಿಕೆಯಲ್ಲಿ 100 ಅಧಿಕ ಚಾನೆಲ್‌ಗ‌ಳ ವೀಕ್ಷಣೆಗೆ ಲಭ್ಯ

Advertisement

Udayavani is now on Telegram. Click here to join our channel and stay updated with the latest news.

Next