ಮಂಡ್ಯ: ಮೈಷುಗರ್ ಕಾರ್ಖಾನೆಗೆ ಇದುವರೆಗೂ ಬಂದ ಸರ್ಕಾರಗಳು ಅನುದಾನ ಬಿಡುಗಡೆ ಮಾಡಿವೆ. ಆದರೆ, ಅನುದಾನ ಸದ್ಬಳಕೆಗಿಂತ ದುರ್ಬಳಕೆಯಾಗಿದ್ದೇ ಹೆಚ್ಚಾಗಿದ್ದು, ಸಾಕಷ್ಟು ಅನುದಾನ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಆದರೆ, ಈ ಬಾರಿಯ ಅನುದಾನ ಸಮರ್ಪಕ ಸದ್ಬಳಕೆಯಾಗಲಿ ಎಂಬುದು ರೈತರ ಒತ್ತಾಯವಾಗಿದೆ.
ಸರ್ಕಾರಗಳಿಂದ ಬಿಡುಗಡೆಯಾದ ಅನುದಾನ ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಯಾವುದೇ ರೂಪುರೇಷೆ ಇಲ್ಲದಂತಾಗಿದೆ. ಅಲ್ಲದೆ, ಬಂದ ಹಣ ಯಾವ ರೀತಿ ವಿನಿಯೋಗಿಸಲಾಗುತ್ತಿದೆ. ಕಾರ್ಖಾನೆಯಲ್ಲಿನ ಯಾವ ಯಾವ ಉದ್ದೇಶಕ್ಕೆ ಬಳಕೆ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿಯೇ ಸಿಗುವುದಿಲ್ಲ.
600 ಕೋಟಿ ರೂ. ಬಿಡುಗಡೆ: ಕಾರ್ಖಾನೆಗೆ ಇದುವರೆಗೂ ಸುಮಾರು 600 ಕೋಟಿ ರೂ. ಹೆಚ್ಚು ಅನುದಾನ ನೀಡಲಾಗಿದೆ. 2020ರಲ್ಲಿ ಸರ್ಕಾರ ಹೊರಡಿಸಿದ ಪತ್ರದಲ್ಲಿ ಕಾರ್ಖಾನೆ ಸುಮಾರು 522 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು ಎಂದು ಹೇಳಿದ್ದರು. ಕಳೆದ ವರ್ಷ ಬಿಜೆಪಿ ಸರ್ಕಾರ 50 ಕೋಟಿ ರೂ. ಘೋಷಣೆ ಮಾಡಿ, 32.50 ಕೋಟಿ ರೂ. ಬಿಡುಗಡೆ ಮಾಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರ 50 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಿದೆ. ಆದರೆ, 522 ಕೋಟಿ ರೂ. ಸರಿಯಾಗಿ ಸದ್ಬಳಕೆಯಾಗದೆ ವ್ಯಾಪಕ ಭ್ರಷ್ಟಾಚಾರದಿಂದ ಎಲ್ಲಿಗೆ ಹೋಯಿತು ಎಂಬುದು ಮಾಹಿತಿ ಇಲ್ಲ. ರೈತ ಮುಖಂಡರು ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ, ಕ್ಯಾರೆ ಎನ್ನುತ್ತಿಲ್ಲ.
ಕಳೆದ ವರ್ಷ 32.50 ಕೋಟಿ ರೂ. ಖರ್ಚು: ಕಳೆದ ವರ್ಷ ಕಾರ್ಖಾನೆಯನ್ನು ಆರಂಭಿಸುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ 50 ಕೋಟಿ ರೂ. ಘೋಷಣೆ ಮಾಡಿತ್ತು. ಅದರಲ್ಲಿ 32.50 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಇದು ಯಂತ್ರಗಳ ದುರಸ್ತಿ, ಸ್ವತ್ಛತೆ, ಬಗಾಸ್ ಖರೀದಿ, ಪೈಪ್‌ಲೈನ್ ಅಳವಡಿಕೆ, ಕಬ್ಬಿನ ಬಾಕಿ, ಕಂಪನಿಗೆ ಗುತ್ತಿಗೆ ಹಣ, ಸಿಬ್ಬಂದಿಗಳ ವೇತನ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸಲಾಗಿದೆ ಎಂದು ಕಾರ್ಖಾನೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಕಾರ್ಖಾನೆ ಮಾತ್ರ ಸಮರ್ಪಕವಾಗಿ ಕಬ್ಬು ಅರೆಯಲೇ ಇಲ್ಲ. ಅನುದಾನ ಬಳಕೆಯ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲದಂತಾಗಿದೆ.
50 ಕೋಟಿ ರೂ. ಬಿಡುಗಡೆಗೆ ಅನುಮೋದನೆ: ಪ್ರಸ್ತುತ ಕಾಂಗ್ರೆಸ್ ಸರ್ಕಾರ 50 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಿದೆ. ಪ್ರತೀ ಬಾರಿಯೂ ಅನುದಾನವೂ ಯಂತ್ರಗಳ ದುರಸ್ತಿ ಸೇರಿ ದಂತೆ ವಿವಿಧ ಲೆಕ್ಕಪತ್ರಗಳ ಮೂಲಕ ತೋರಿಸ ಲಾಗುತ್ತಿದೆ. ಆದರೆ, ಪ್ರತೀ ವರ್ಷ ಸರಿಯಾಗಿ ಲೆಕ್ಕಪರಿಶೋಧನೆಯನ್ನೂ ಮಾಡುತ್ತಿಲ್ಲ. ಇದರಿಂದ ಅನು ದಾನದ ಲೆಕ್ಕವೂ ಸರಿಯಾಗಿ ಸಿಗುತ್ತಿಲ್ಲ. ಆದರೆ, ಈ ಬಾರಿ ಅನುದಾನ ಸಮರ್ಪಕವಾಗಿ ಸದ್ಬಳಕೆ ಯಾಗಲಿ ಎಂಬುದು ರೈತರ ಒತ್ತಾಯವಾಗಿದೆ.
ಅನುದಾನ ಸದ್ಬಳಕೆಗೆ ಕ್ರಮ ಅಗತ್ಯ : ಬರುವ ಅನುದಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಲು ಕಾರ್ಖಾನೆ ಮುಂದಾಗಬೇಕು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕಾಗಿದೆ. ಅನುದಾನ ದುರುಪಯೋಗವಾಗದಂತೆ ಸರ್ಕಾರ ಹಾಗೂ ಜಿಲ್ಲಾಡಳಿತ ರೂಪುರೇಷೆ ಸಿದ್ಧಪಡಿಸಿ, ಕ್ರಮ ವಹಿಸಬೇಕಾಗಿದೆ. ಈಗಾಗಲೇ ಸೆಸ್ಕಾಂಗೆ 41 ಕೋಟಿ ರೂ. ಬಾಕಿ ಇದೆ. ಅಲ್ಲದೆ, 19 ಕೋಟಿ ರೂ. ಆಹಾರ ಸರಬರಾಜು ಇಲಾಖೆಗೆ ನೀಡಬೇಕಾಗಿದೆ. ಆದ್ದರಿಂದ ಬಿಡುಗಡೆಯಾಗುವ 50 ಕೋಟಿ ರೂ. ಕಾರ್ಖಾನೆಯನ್ನು ಸಂಪೂರ್ಣವಾಗಿ ಪುನಶ್ಚೇತನಗೊಳಿಸಿ ಲಾಭದಾಯಕದತ್ತ ಕೊಂಡೊಯ್ಯುವ ಕೆಲಸ ಆಗಬೇಕಾಗಿದೆ.
ಕಾರ್ಖಾನೆಗೆ ದುಡಿಯುವ ಬಂಡವಾಳ ಅಗತ್ಯವಾಗಿದೆ. ಆದ್ದರಿಂದ ಇರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಅಗತ್ಯವಿದೆ. ಅನುದಾನ ಬಳಕೆಯ ಬಗ್ಗೆಯೂ ಅಧಿಕಾರಿಗಳು ನಿಗಾವಹಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಕಾರ್ಖಾನೆ ಸುಗಮ ಆರಂಭಕ್ಕೆ ಕ್ರಮ ವಹಿಸಬೇಕಾಗಿದೆ ಎಂದು ರೈತರು ಆಗ್ರಹಿಸಿದ್ದಾರೆ.
-ಎಚ್.ಶಿವರಾಜು