ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳೇ ಪ್ರಮುಖ ಆಕರ್ಷಣೆ. ಅವುಗಳಲ್ಲಿ ಒಂದು ಮಳಿಗೆ ಓದುಗರನ್ನು ವಿಭಿನ್ನವಾಗಿ ಗಮನ ಸೆಳೆಯುತ್ತಿದೆ ಮತ್ತು ಇದರಲ್ಲಿ ಕೇವಲ ಒಂದೇ ಪುಸ್ತಕ ಸಿಗಲಿದೆ.
ಬೆಂಗಳೂರಿನ ದೃಶ್ಯರಂಗ ತಂಡದವರು ‘ನಿಧಿ’ ಎಂಬ ಕಥಾ ಸಂಕಲನ ಪುಸ್ತಕವನ್ನು ಮಾರುತ್ತಿದ್ದಾರೆ. ಯಾವುದೇ ಲಾಭಕ್ಕಾಗಿ ಈ ಪುಸ್ತಕ ಮಾರದೆ, ಒಳ್ಳೆಯ ಚಿತ್ರ ನಿರ್ಮಿಸುವ ಉದ್ದೇಶದಿಂದ ಪುಸ್ತಕ ಮಾರುತ್ತಿದ್ದಾರೆ.
ತಮ್ಮ ವಿನೂತನ ಕಲ್ಪನೆಯ ಬಗ್ಗೆ ಮಾತು ಹಂಚಿಕೊಳ್ಳುವ ‘ನಿಧಿ’ ಪುಸ್ತಕದ ಲೇಖಕ ಕೌಶಿಕ್ ರತ್ನ, ‘ನಮ್ಮದು 40 ಜನರ ರಂಗಭೂಮಿ ತಂಡ. ನೀನಾಸಂ, ನಟನ ಮುಂತಾದ ರಂಗಸಂಸ್ಥೆಯಲ್ಲಿ ತರಬೇತಿ ಪಡೆದವರು. ಎಲ್ಲರೂ ಸೇರಿ ಸಿನಿಮಾ ಮಾಡಬೇಕೆಂದಾಗ ನಿರ್ಮಾಪಕರು ಸಿಗಲಿಲ್ಲ. ಹಾಗಾಗಿ ಪುಸ್ತಕ ಮಾರಿ, ಅದರಂದ ಬಂದ ಹಣದಿಂದ ಸಿನಿಮಾ ಮಾಡಬೇಕೆಂದಿದ್ದೇವೆ’ ಎಂದರು.
1 ಲಕ್ಷ ಗುರಿ: ವಿಭಿನ್ನ ಕಥಾಹಂದರದ ‘ಇಲ್ಲೀಗಲ್’ ಎಂಬ ಸಿನಿಮಾ ನಿರ್ಮಿಸಲು ಈ ತಂಡ 80 ಲಕ್ಷ ರೂ. ಬಜೆಟ್ ಯೋಜನೆ ಹಾಕಿಕೊಂಡಿದೆ. ಈ ಬಜೆಟ್ ಸಂಗ್ರಹಿಸಲು 1 ಲಕ್ಷ ಪುಸ್ತಕ ಮಾರಬೇಕಿದ್ದು, ಪ್ರತಿ ಪುಸ್ತಕಕ್ಕೆ 220 ರೂ. ಬೆಲೆ ನಿದಿಪಡಿಸಲಾಗಿದೆ. ಅದರಲ್ಲಿ 100 ರೂ. ಹಣ ಸಿನಿಮಾ ನಿರ್ಮಾಣಕ್ಕೆ ಮೀಸಲಾಗಿದ್ದು, ಈವರೆಗೆ 10 ಲಕ್ಷ ರೂ. ಸಂಗ್ರಹವಾಗಿದೆ. ಇನ್ನು ಆರು ತಿಂಗಳಲ್ಲಿ 1 ಲಕ್ಷ ಪುಸ್ತಕ ಮಾರುವ ಗುರಿ ಹೊಂದಿದ ಚಿತ್ರತಂಡ, ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಪುಸ್ತಕ ಮಾರಿ ಬಂದ ಹಣದಿಂದ ಚಿತ್ರ ನಿರ್ಮಿಸುವುದಾಗಿ ಚಿತ್ರತಂಡ ಹೇಳಿಕೊಂಡಿದೆ.
-ನಿತೀಶ ಡಂಬಳ