ಸಚಿವಾಲಯವೂ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಸರ್ಕಾರಿ ಅಧಿಕಾರಿ/ ನೌಕರರನ್ನು ತಕ್ಷಣದಿಂದಲೇ ಸೇವೆಯಿಂದ ಬಿಡುಗಡೆಗೊಳಿಸಿ, ಆ ಹುದ್ದೆಗಳಿಗೆ ಹಾಲಿ ಸರಕಾರಿ ಸೇವೆಯಲ್ಲಿರುವ ಅಧಿಕಾರಿ/ ನೌಕರರನ್ನು ನಿಯೋಜಿಸುವಂತೆ ಹಲವು ಇಲಾಖೆಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ನೀಡಿರುವ ಸೂಚನೆ ಸ್ವಾಗತಾರ್ಹ.
ನಿವೃತ್ತಿ ಹೊಂದಿದ ಅಧಿಕಾರಿ/ನೌಕರರನ್ನು ಅನಗತ್ಯವಾಗಿ ಹುದ್ದೆಗಳನ್ನು ಸೃಜಿಸಿ ಸಮಾಲೋಚಕರು/ ವಿಶೇಷ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಹಾಗೂ ಕೆಲವು ಗ್ರೂಪ್-ಎ ವೃಂದದ ಹುದ್ದೆಗಳಿಗೂ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ಅವರಿಗೆ ವೇತನ, ವಾಹನ ಸೌಲಭ್ಯ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಆರ್ಥಿಕ ಹೊರೆಯಾಗುವುದಲ್ಲದೆ ಕಾರ್ಯಕ್ಷಮತೆಯ ಗುಣಮಟ್ಟ ಹಾಗೂ ಉತ್ತರದಾಯಿತ್ವದ ಕೊರತೆಯೂ ಎದ್ದು ಕಾಣುತ್ತಿದೆ. ಆದ್ದರಿಂದ ಈ ಹುದ್ದೆಗಳಿಗೆ ಹಾಲಿ ಸರ್ಕಾರಿ ಸೇವೆಯಲ್ಲಿರುವವರನ್ನೇ ನಿಯೋಜಿಸಿಕೊಂಡು ವಿವಿಧ ಇಲಾಖೆಗಳಲ್ಲಿ ಗುತ್ತಿಗೆ/ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನಿವೃತ್ತರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಕಾರ್ಯದರ್ಶಿಗೆ ನೀಡಿರುವ ಸೂಚನೆ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿರುವುದು ಅತ್ಯಂತ ಸಮಯೋಚಿತವಾಗಿದೆ.
ನಿವೃತ್ತಿ ನಂತರವೂ ಹಲವು ಅಧಿಕಾರಿಗಳು/ನೌಕರರು ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು ಆಯಕಟ್ಟಿನ ಜಾಗಗಳಲ್ಲಿ ಕುಳಿತು ವಿಧಾನಸೌಧ-ವಿಕಾಸಸೌಧಗಳನ್ನು ಸುತ್ತುತ್ತಲೇ ಇರುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಸಿಎಂ ಕಚೇರಿಯಿಂದ ಹಿಡಿದು ಸಚಿವರ ಕಚೇರಿಗಳು, ಸರ್ಕಾರದ ಪ್ರಮುಖ ಇಲಾಖೆಗಳಲ್ಲಿ “ಸಲಹೆಗಾರರು’ ಎಂಬ ಹೆಸರಿನಲ್ಲಿ ಹಲವು ವರ್ಷಗಳಿಂದ ಠಿಕಾಣಿ ಹೂಡಿದ್ದಾರೆ. ಇಂತಹವರು ಪಿಂಚಣಿ ಜತೆಗೆ ನಿವೃತ್ತಿಯಾದ ಕೊನೆಯ ತಿಂಗಳ ವೇತನದಂತೆ ತಾವು ಸದ್ಯ ನಿರ್ವಹಿಸುತ್ತಿರುವ ಕಚೇರಿಗಳಲ್ಲಿ ವೇತನ ಪಡೆಯುತ್ತಿದ್ದಾರೆ. ಜತೆಗೆ ಕಾರು, ಕಚೇರಿ ಮತ್ತಿತರ ಐಷಾರಾಮಿ ಸೌಲಭ್ಯಗಳನ್ನು ಅನುಭವಿಸುವ ಮೂಲಕ “ಪಿಂಚಣಿ-ವೇತನ’ ದ ರೂಪದಲ್ಲಿ ಡಬಲ್ ಧಮಾಕ ಅನುಭವಿಸಿಕೊಂಡೇ ಬರುತ್ತಿದ್ದಾರೆ. ಇದು ಸರ್ಕಾರದ ಬೊಕ್ಕಸಕ್ಕೆ ಹೊರೆ ಮಾತ್ರವಲ್ಲದೆ ಕೆಲವೊಂದು ಆಡಳಿತಾತ್ಮಕ ಗೊಂದಲ/ಸಮಸ್ಯೆಗಳನ್ನು ಸೃಷ್ಟಿಸುತ್ತಲೇ ಇದ್ದರೂ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
ನಿವೃತ್ತಿಯಾಗಿದ್ದರೂ ಇವರು ಸೇವೆಯಲ್ಲಿರುವವರ ತಲೆ ಮೇಲೆ ಕುಳಿತು ರಾಜ್ಯಭಾರ ನಡೆಸುತ್ತಿದ್ದರು. ಇದು ಹಲವು ಕಡೆ ” ಸಂಘರ್ಷ’ ಸೃಷ್ಟಿಸಿದ್ದರೂ ಬಾಧಿತರು ಸಂಬಂಧಪಟ್ಟ ಸಚಿವರು/ಪ್ರಧಾನ ಕಾರ್ಯದರ್ಶಿಗಳಿಗೆ ಹೇಳದೆ ಮೌನಿಗಳಾಗಿ ಅನುಭವಿಸಿಕೊಂಡೇ ಇದ್ದರು. ಕೊನೆಗೂ ಸರ್ಕಾರ ಈ ವಿಷಯದಲ್ಲಿ ಕಣ್ಣುಬಿಟ್ಟಿರುವುದು ನಿಜಕ್ಕೂ ಸ್ವಾಗತಾರ್ಹ. ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ ನಿವೃತ್ತಿಯಾದ ನೌಕರರು/ಅಧಿಕಾರಿಗಳ ಒಂದು ಕೂಟವೇ ವಿಧಾನಸೌಧದಲ್ಲಿ ಸದಾ ಗಿರಕಿ ಹೊಡೆಯುತ್ತಿರುತ್ತದೆ. ಹಳೆ ಮುಖಗಳ ಸದಾ ದರ್ಶನ ಹಲವರಿಗೆ ಕಿರಿಕಿರಿ ತಂದಿದ್ದು ಇದೆ. ಕೇವಲ ಇದು ಒಂದೆರಡು ಇಲಾಖೆಗಳಿಗೆ ಸೀಮಿತವಾಗಿಲ್ಲ. ಸರ್ಕಾರದ ಪ್ರತಿಯೊಂದು ಇಲಾಖೆ, ಇಲಾಖೆಗಳ ಅಧೀನದಲ್ಲಿರುವ ವಿವಿಧ ನಿಗಮ, ಮಂಡಳಿಗಳಲ್ಲೂ ಹೊರ ಗುತ್ತಿಗೆ ನೌಕರರ ಕಾರುಭಾರು ಹೆಚ್ಚಿದೆ. ಸರ್ಕಾರಿ ನೌಕರರು-ಹೊರ ಗುತ್ತಿಗೆ ನೌಕರರ ನಡುವೆ ಆಗಾಗ್ಗೇ ತಿಕ್ಕಾಟಗಳು ನಡೆದಿರುವ ಉದಾಹರಣೆಗಳಿವೆ. ಹೀಗಾಗಿ ಸರ್ಕಾರ ಕೊನೆಗೂ ಆರ್ಥಿಕ ಶಿಸ್ತು ಹಾಗೂ ಉತ್ತರದಾಯಿತ್ವದ ಹೆಸರಲ್ಲಿ ಗುತ್ತಿಗೆ ನೌಕರರನ್ನು ಸೇವೆಯಿಂದ ಬಿಡುಗಡೆ ಮಾಡುವುದು ಸೂಕ್ತ. ಇದು ಕೇವಲ ತೋರಿಕೆಗಷ್ಟೇ ಆಗದೇ ಎಲ್ಲಾ ಇಲಾಖೆಗಳಲ್ಲೂ ಕಾರ್ಯಕರ್ತವಾಗಬೇಕಿದೆ.