Advertisement

ಹಳೆಯ ದರದಲ್ಲೇ ನಾಳೆ ಹೊಸ ಚಿತ್ರಗಳ ಬಿಡುಗಡೆ

02:35 PM Mar 14, 2018 | |

ಯುಎಫ್ಓ ಮತ್ತು ಕ್ಯೂಬ್‌ ಸಮಸ್ಯೆ ಇತ್ಯರ್ಥಕ್ಕೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ, ಹದಿನೈದು ದಿನಗಳ ಕಾಲ ಗಡುವು ನೀಡಿದ್ದು, ಅಲ್ಲಿಯವರೆಗೆ ಹೊಸ ಚಿತ್ರಗಳ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದೆ. ಒಂದು ವೇಳೆ ಹದಿನೈದು ದಿನಗಳ ಬಳಿಕ ಬೇಡಿಕೆಗೆ ಒಪ್ಪದೇ ಹೋದರೆ, ಬಿಡುಗಡೆಯಾದ ಚಿತ್ರಗಳಿಗೆ ಯುಎಫ್ಓ,ಕ್ಯೂಬ್‌ ವಿಧಿಸಿರುವ ದರದಲ್ಲಿ ಶೇ.50 ರಷ್ಟು ಹಿಂದಿರುಗಿಸಬೇಕು ಎಂದು ಷರತ್ತು ಹಾಕಿದೆ. 

Advertisement

ಈ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, “ದರ ನಿಗಧಿ ಕುರಿತಂತೆ ಕಳೆದ ಮೂರು ತಿಂಗಳಿನಿಂದಲೂ ಮಾತುಕತೆ ನಡೆಸಲಾಗುತ್ತಿತ್ತು. ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೂ ನಡೆದ ಮಾತುಕತೆಯಲ್ಲಿ, ಯುಎಫ್, ಕ್ಯೂಬ್‌ಗ ಸಂಬಂಧಿಸಿದವರು ಹದಿನೈದು ದಿನಗಳ ಕಾಲಾವಕಾಶ ಕೇಳಿದರು.

ನಮ್ಮ ಸಿಇಓ ಬಳಿ ಮಾತನಾಡಲು ಸಮಯಬೇಕು, ಆ ಬಳಿಕ ನಾವು ನಿಮ್ಮ ಬೇಡಿಕೆ ಕುರಿತು ಒಂದು ತೀರ್ಮಾನಕ್ಕೆ ಬರಬಹುದು ಎಂದು ಕೇಳಿದ್ದಕ್ಕೆ ಮಾರ್ಚ್ 30ರವರೆಗೆ ಗಡುವು ಕೊಡಲಾಗಿದೆ. ಹೀಗಾಗಿ, ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳು ಈ ವಾರ ತೆರೆಗೆ ಬರಲಿವೆ.  ಯುಎಫ್ಓ, ಕ್ಯೂಬ್‌ ವಿಧಿಸಿರುವ ಈಗಿನ ದರದಲ್ಲೇ ಚಿತ್ರಗಳು ಬಿಡುಗಡೆಯಾಗಲಿವೆ.

ಹದಿನೈದು ದಿನಗಳ ನಂತರ ನಮ್ಮ ಬೇಡಿಕೆಗೆ ಅವರು ಒಪ್ಪದೇ ಇದ್ದರೆ, ಬಿಡುಗಡೆಯಾಗಿರುವ ಚಿತ್ರಗಳಿಗೆ ಶೇ.50 ರಷ್ಟು ಹಣ ಹಿಂದಕ್ಕೆ ಕೊಡುವ ಕುರಿತು ಮಾತುಕತೆ ನಡೆದಿದೆ’ ಎಂದರು. “ಒಂದು ವೇಳೆ ಸಮಸ್ಯೆ ಬಗೆಹರಿಯದೇ ಇದ್ದರೆ, ನಾವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಈಗಾಗಲೇ ಒಂದು ಕಂಪೆನಿ ಜೊತೆಗೆ ಮಾತುಕತೆ ಕೂಡ ನಡೆದಿದೆ.

ಮಾರ್ಚ್‌ 9ರಂದು ತೆರೆಗೆ ಬರಬೇಕಿದ್ದ ಚಿತ್ರಗಳು ಈ ವಾರ ಬಿಡುಗಡೆಯಾಗಲಿವೆ. ಬಿಡುಗಡೆ ಕುರಿತು ಒಂದಷ್ಟು ಗೊಂದಲ ಆಗಿರುವುದು ನಿಜ. ಹೋರಾಟ ಅಂದಮೇಲೆ ಸಣ್ಣಪುಟ್ಟ ತೊಂದರೆಗಳಾಗುತ್ತವೆ. ಆದರೆ, ಯಾರಿಗೂ ಅನ್ಯಾಯ ಆಗಬಾರದು ಎಂಬ ಉದ್ದೇಶದಿಂದ ಮಂಡಳಿ ಈ ತೀರ್ಮಾನ ಕೈಗೊಂಡಿತ್ತು. ಮಾರ್ಚ್‌ 16ರಿಂದ ಎಲ್ಲಾ ಭಾಷೆಯ ಚಿತ್ರಗಳೂ ತೆರೆಗೆ ಬರಲಿವೆ.

Advertisement

ಯುಎಫ್ಓ, ಕ್ಯೂಬ್‌ ಮಾಡಿದ ಒಂದು ದೊಡ್ಡ ಸಮಸ್ಯೆ ಅಂದರೆ, ಪ್ರದರ್ಶಕರ ಬಳಿ ಒಪ್ಪಂದ ಮಾಡಿಕೊಂಡಿರುವುದು. ಆ ವ್ಯವಸ್ಥೆಯಿಂದಾಗಿ, ಇಂದು ಇಷ್ಟೆಲ್ಲಾ ಸಮಸ್ಯೆಯಾಗುತ್ತಿದೆ. ಇಷ್ಟರಲ್ಲೇ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. ಒಂದು ವೇಳೆ ಆಗದಿದ್ದರೆ, ನಮ್ಮ ರೇಟ್‌ಗೆ ಒಬ್ಬರು ಮಾಡಿಕೊಡುವ ಭರವಸೆ ನೀಡಿದ್ದಾರೆ. ಆ ಕುರಿತು ಮುಂದಿನ ದಿನಗಳಲ್ಲಿ ಹೇಳಲಾಗುತ್ತದೆ’ ಎಂದರು ಅವರು.

Advertisement

Udayavani is now on Telegram. Click here to join our channel and stay updated with the latest news.

Next